No headlights for KSRTC BUS 
ಬೆಂಗಳೂರು

KSRTC ಬಸ್​​ಗೆ ಹೆಡ್​ಲೈಟ್​ ಇಲ್ಲ, ಮೊಬೈಲ್​ ಟಾರ್ಚ್​​ ಬೆಳಕಲ್ಲೇ ವಾಹನ ಚಲಾಯಿಸಿದ ಚಾಲಕ; ವಿಡಿಯೋ ವೈರಲ್

ಪ್ರಮುಖ ಮುಖ್ಯಾಂಶಗಳು

  • ಕೆಎಸ್​ಆರ್​ಟಿಸಿ ಬಸ್​ಗೆ ಹೆಡ್​ಲೈಟ್​ ಇಲ್ಲದೆ ಮೊಬೈಲ್​ ಟಾರ್ಚ್​​ನಲ್ಲೇ ವಾಹನ ಚಾಲನೆ
  • ಎಕ್ಸ್​ನಲ್ಲಿ ವಿಡಿಯೋ ಹಂಚಿಕೊಂಡು ಸರ್ಕಾರದ ವಿರುದ್ಧ ಕಿಡಿಕಾರಿದ ನಿಖಿಲ್​ ಕುಮಾರಸ್ವಾಮಿ
  • ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಎಂದು ಕಿಡಿ
ಬೆಂಗಳೂರು: ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದ ದಿನದಿಂದಲೂ ಬಸ್​ಗಳಲ್ಲಿ ಮಹಿಳೆಯರ ಓಡಾಟ ಜೋರಾಗಿದೆ. ಆದರೆ ಈ ಯೋಜನೆಯಿಂದಾಗಿ ಸರ್ಕಾರದ ಖಜಾನೆ ಖಾಲಿಯಾಗಿದೆ ಎನ್ನುವುದು ವಿಪಕ್ಷಗಳ ವಾದ. ಸದ್ಯ ಅದಕ್ಕೆ ಪೂರಕವಾಗಿ ಜೆಡಿಎಸ್​ ನಾಯಕ ನಿಖಿಲ್​ ಕುಮಾರಸ್ವಾಮಿಯವರು ವಿಡಿಯೋವೊಂದನ್ನು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ಕೆಎಸ್​​ಆರ್ಟಿಸಿ ಬಸ್ ಚಾಲಕರೊಬ್ಬರು ಹೆಡ್​ಲೈಟ್ ಇಲ್ಲದ ಬಸ್​​ಗೆ ಮೊಬೈಲ್​ ಟಾರ್ಚ್​​ ಬಳಕೆ ಮಾಡುತ್ತಿರುವುದು ವಿಡಿಯೋದಲ್ಲಿದೆ.

ವಿಡಿಯೋ ವೈರಲ್​​

ಹೌದು ಕೆಎಸ್​​ಆರ್​ಟಿಸಿ ಇಲಾಖೆಗೆ ಸೇರಿದ ಬಸ್​ವೊಂದರಲ್ಲಿ ಹೆಡ್​ಲೈಟ್​ ಕಾರ್ಯನಿರ್ವಹಿಸದೆ ಹೋದ ಕಾರಣ ಬಸ್ ಕಂಡಕ್ಟರ್​ ಮೊಬೈಲ್​ ಟಾರ್ಚ್​​ ಹಾಕಿರುವುದು, ಚಾಲಕ ಆ ಮಂದ ಬೆಳಕಿನಲ್ಲಿಯೇ ವಾಹನ ಚಲಾಯಿಸುತ್ತಿರುವ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇನ್ನು  ರಾಜಕೀಯ ನಾಯಕರು ಕಾಂಗ್ರೆಸ್​​  ಜನರ ಮೇಲೆ ಕಾಳಜಿಯೇ ಇಲ್ಲ ಎಂದು ಕಿಡಿಕಾರುತ್ತಿದ್ದಾರೆ.
ಏನಿದು ಪ್ರಕರಣ?
ಮೂಲಗಳ ಪ್ರಕಾರ ಕಲಬುರಗಿ- ಚಿಂಚೋಳಿ ಮಾರ್ಗದಲ್ಲಿ ಕೆಎಸ್​ಆರ್​ಟಿಸಿ ರಾತ್ರಿ 7:30ಕ್ಕೆ   ಕಲಬುರಗಿಯಿಂದ ಹೊರಡುವ ಬಸ್​​​​​​ ಇದಾಗಿದ್ದು, ಬಸ್​ನಲ್ಲಿ ಪ್ರಯಾಣಿಕರು ಇದ್ದರು ಎನ್ನುವುದು ವಿಡಿಯೋದಲ್ಲಿದೆ. ಈ ಮಾರ್ಗದ ಬಸ್​​ನಲ್ಲಿ ತಾಂತ್ರಿಕ ಸಮಸ್ಯೆ ಇತ್ತು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ನಿಖಿಲ್​ ಕುಮಾರಸ್ವಾಮಿ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಒಂದೆಡೆ ಕೆಕೆಆರ್‌ಟಿಸಿ ಬಸ್ ಹೆಡ್‌ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಲಿಸುತ್ತಿದ್ದರೆ, ಇನ್ನೊಂದೆಡೆ ಬೆಂಗಳೂರಿಗೆ ಬರಬೇಕಿದ್ದ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲಾಗದಷ್ಟು ಆಡಳಿತ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ!
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಸಚಿವಾಲಯವು 'PM E-DRIVE' ಯೋಜನೆಯಡಿ BMTCಗೆ ಬರೋಬ್ಬರಿ 4,500 ಇ-ಬಸ್‌ಗಳನ್ನು ಮಂಜೂರು ಮಾಡಿದೆ. ಡಿಸೆಂಬರ್ 2025ರಲ್ಲೇ ಇದಕ್ಕೆ ಅನುಮೋದನೆ ಸಿಕ್ಕಿದ್ದರೂ, ರಾಜ್ಯ ಸಾರಿಗೆ ಇಲಾಖೆಯು ಇದುವರೆಗೂ 'Letter of Award (LoA)' ನೀಡದೆ ಕಾಲಹರಣ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರವು ಅಧಿಕೃತ ಪತ್ರದ ಮೂಲಕ ತರಾಟೆಗೆ ತೆಗೆದುಕೊಂಡಿದೆ.
'ಶಕ್ತಿ' ಯೋಜನೆಯ 4,573 ಕೋಟಿ ಬಾಕಿ ಹಣವನ್ನು ಸಾರಿಗೆ ಸಂಸ್ಥೆಗಳಿಗೆ ಮರುಪಾವತಿಸದೆ ವ್ಯವಸ್ಥೆಯನ್ನೇ ಆರ್ಥಿಕವಾಗಿ ಜರ್ಜರಿತಗೊಳಿಸಿರುವ ರಾಜ್ಯ ಸರ್ಕಾರ, ಇತ್ತ ಕೇಂದ್ರ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ನೀಡಿದ ಬೃಹತ್ ಕೊಡುಗೆಯನ್ನು ಬಳಸಿಕೊಳ್ಳಲಾಗದಷ್ಟು ನಿಷ್ಕ್ರಿಯವಾಗಿದೆ, (ಏಜೆನ್ಸೀಸ್).