- ಬಿಇಎಂಎಲ್ ಜತೆ 3,177 ಕೋಟಿ ರೂ. ಒಪ್ಪಂದ
- ಡಿಸೆಂಬರ್ ವೇಳೆಗೆ ಕಾರ್ಯಾರಂಭ ಸಾಧ್ಯತೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋದ ಬಹುನಿರೀತ ಗುಲಾಬಿ ಮಾರ್ಗಕ್ಕೆ ಎರಡನೇ ಸೆಟ್ ರೈಲಿನ 3 ಬೋಗಿಗಳು ನಗರದ ಕೊತ್ತನೂರು ಡಿಪೋಗೆ ಆಗಮಿಸಿವೆ.
ಭಾರತ್ ಅರ್ಥ್ ಮೂವರ್ಸ್ ಲಿ. (ಬಿಇಎಂಎಲ್) ಸಂಸ್ಥೆಯು ರೈಲುಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಬಿಇಎಂಎಲ್ ಜತೆ 3,177 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ, 2026ರ ಮಾರ್ಚ್ ವೇಳೆಗೆ ಇಪ್ಪತ್ತು 6 ಬೋಗಿಗಳ ಚಾಲಕರಹಿತ ರೈಲುಸೆಟ್ಗಳನ್ನು ತಯಾರಿಸಿ ನೀಡಬೇಕಿದ್ದು, ಅದರಲ್ಲಿ ಮೊದಲ ಮಾದರಿ ರೈಲನ್ನು ಡಿಸೆಂಬರ್ನಲ್ಲಿ ನೀಡಲಾಗಿದೆ. ಇದೀಗ ಎರಡನೇ ಸೆಟ್ನ ರೈಲುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ.
ಕಾಳೇನ ಅಗ್ರಹಾರದಿಂದ ನಾಗವಾರ ತನಕ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ 3ಎ ಹಂತದ ಯೋಜನೆ ಗುಲಾಬಿ ಮಾರ್ಗದ ಕಾಮಗಾರಿಗಳು ದಿನದಿಂದ ದಿನಕ್ಕೆ ಚುರುಕಾಗುತ್ತಿದ್ದು, ಈ ಮಾರ್ಗ ಎರಡು ಹಂತಗಳಲ್ಲಿ ಪ್ರಾರಂಭಗೊಳ್ಳಲಿದೆ. ಒಟ್ಟು 21.26 ಕಿ.ಮೀ. ಉದ್ದವಿರುವ ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವಿನ 7.5 ಕಿಮೀ ಎತ್ತರಿಸಿದ ಮಾರ್ಗದ ವಿಭಾಗವು 2026ರ ಮೇ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆ ಇದೆ. ಡೈರಿ ಸರ್ಕಲ್ನಿಂದ ನಾಗವಾರವರೆಗಿನ ಉಳಿದ 13.76 ಕಿ.ಮೀ. ಸುರಂಗ ಮಾರ್ಗವು 2026ರ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ಎರಡನೇ ರೈಲು ಬಂದಿರುವುದು ಯೋಜನೆಯ ವೇಗ ಹೆಚ್ಚಿಸಿದೆ. ಬೋಗಿಗಳ ಜೋಡಣೆ ಪ್ರಕ್ರಿಯೆ ಮುಗಿದ ತಕ್ಷಣ ಹಳಿಗಳ ಮೇಲೆ ಟ್ರ್ಯಾಕ್ ಪರೀಕ್ಷೆ ಆರಂಭವಾಗಲಿದೆ. ತಾಂತ್ರಿಕ ಪರೀಕ್ಷೆಗಳನ್ನು ನಡೆಸಿದ ನಂತರ 7.5 ಕಿ.ಮೀ ಎತ್ತರಿಸಿದ ಮಾರ್ಗದಲ್ಲಿ ಟ್ರಯಲ್ ರನ್ ಆರಂಭವಾಗಲಿದೆ. ಇದು ಯಶಸ್ವಿಯಾದರೆ ದಕ್ಷಿಣ ಬೆಂಗಳೂರಿನ ಸಂಚಾರ ಸಿಕ್ಕಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ.
ಪಿಂಕ್ ಮಾರ್ಗದ ಎತ್ತರಿಸಿದ ಮಾರ್ಗದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಗೆ ಮೊದಲು ಸಣ್ಣಪುಟ್ಟ ಕೆಲಸಗಳು ಮಾತ್ರ ಉಳಿದಿವೆ. ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗುವ ಈ ವಿಭಾಗವು ಆರು ನಿಲ್ದಾಣಗಳನ್ನು (ತಾವರೆಕೆರೆ, ಜಯದೇವ ಆಸ್ಪತ್ರೆ, ಜೆಪಿ ನಗರ 4ನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ) ಹೊಂದಿರುತ್ತದೆ. ದಕ್ಷಿಣ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಜಯದೇವ ಆಸ್ಪತ್ರೆ ನಿಲ್ದಾಣವು ಇಂಟರ್ಚೇಂಜ್ ನಿಲ್ದಾಣವಾಗಿ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.