ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಆಗಸ್ಟ್ನಿಂದ ಆರು ಕೋಚ್ಗಳ (ಬೋಗಿ) ಮೂರು ಹೊಸ ರೈಲುಗಳನ್ನು ಕಾರ್ಯಾಚರಣೆಗೆ ಇಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮುಂದಾಗಿದೆ.
ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾಪೋರ್ರೇಷನ್ (ಸಿಆರ್ಆರ್ಸಿ) ಹಾಗೂ ತಿತಾಗಢ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್ಎಸ್ಎಲ್) ಪೂರೈಸುತ್ತಿರುವ 23 ಹೊಸ ರೈಲುಗಳ ಪೈಕಿ ಪ್ರೊಟೋಟೈಪ್ ಸೇರಿ ಮೂರು ರೈಲುಗಳು ಈಗಾಗಲೇ ಬೆಂಗಳೂರಿಗೆ ತಲುಪಿವೆ. ಇವು ಡಿಸ್ಟೆನ್ಸ್- ಟು -ಗೋ (ಡಿಟಿಜಿ) ತಂತ್ರಜ್ಞಾನ ಹೊಂದಿದ್ದು, ಗ್ರೀನ್ಲೈನ್ನಲ್ಲಿ ಅಂತಿಮ ಹಂತದ ಪರೀಕ್ಷೆಗಳನ್ನು ಪೂರ್ಣಗೊಳಿಸುತ್ತಿವೆ.
ಹಸಿರು ಮಾರ್ಗದಲ್ಲಿ ಈಗಾಗಲೇ ವಾಣಿಜ್ಯ ಸಂಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಮಾತ್ರ ಪರೀಕ್ಷಾ ಓಡಾಟ ನಡೆಸಬೇಕಾದ ಕಾರಣ ಪ್ರಕ್ರಿಯೆ ವಿಳಂಬವಾಗಿತ್ತು. ಆದರೂ ಆಸಿಲೇಷನ್, ಸಿಗ್ನಲಿಂಗ್ ಸೇರಿ ಪ್ರಮುಖ ಪರೀಕ್ಷೆಗಳು ಪೂರ್ಣಗೊಂಡಿದ್ದು, ರೈಲ್ವೆ ಮಂಡಳಿಯಿಂದ ರೋಲಿಂಗ್ ಸ್ಟಾಕ್ಗೆ ಅನುಮೋದನೆಯೂ ದೊರೆತಿದೆ. ಈಗ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (ಸಿಎಂಆರ್ಎಸ್) ಅನುಮತಿ ದೊರೆತ ಬಳಿಕ ಆಗಸ್ಟ್ನಲ್ಲೇ ಪ್ರಯಾಣಿಕರ ಸೇವೆಗೆ ಇಳಿಸುವ ಗುರಿ ಹೊಂದಲಾಗಿದೆ ಎಂದು ನಿಗಮ ತಿಳಿಸಿದೆ.
ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪನೆ ವಿಳಂಬಗೊಂಡ ಕಾರಣ ಕೋಚ್ಗಳ ತಯಾರಿಕೆ ಹಲವು ವರ್ಷಗಳ ಕಾಲ ನನೆಗುದಿಗೆ ಬಿದ್ದಿತ್ತು. 2019ರಲ್ಲಿ 1,578 ಕೋಟಿ ರೂ. ವೆಚ್ಚದಲ್ಲಿ 216 ಮೆಟ್ರೋ ಕೋಚ್ಗಳನ್ನು ತಯಾರಿಸಲು ಸಿಆರ್ಆರ್ಸಿಗೆ ಬಿಎಂಆರ್ಸಿಎಲ್ ಗುತ್ತಿಗೆ ನೀಡಿತ್ತು. ಬಳಿಕ ತಿತಾಗಢ ರೈಲ್ ಸಿಸ್ಟಮ್ಸ್ ಜತೆಗಿನ ಪಾಲುದಾರಿಕೆಯಿಂದ ಯೋಜನೆಗೆ ಮರುಜೀವ ಸಿಕ್ಕಿದ್ದು, ಇದೀಗ ಹೊಸ ರೈಲುಗಳ ಸೇರ್ಪಡೆಗೆ ದಾರಿ ಸುಗಮವಾಗಿದೆ.
ಹೊಸ ರೈಲುಗಳು ಹಸಿರು ಮಾರ್ಗದಲ್ಲಿ ಕಾರ್ಯಾರಂಭಿಸಿದ ಬಳಿಕ ಅಲ್ಲಿನ ಹಾಲಿ ರೈಲುಗಳನ್ನು ಹೆಚ್ಚಿನ ಪ್ರಯಾಣಿಕರ ದಟ್ಟಣೆ ಇರುವ ನೇರಳೆ ಮಾರ್ಗಕ್ಕೆ ವರ್ಗಾಯಿಸಲಾಗುತ್ತದೆ. ಈ ಕ್ರಮದಿಂದ ಎರಡೂ ಮಾರ್ಗಗಳಲ್ಲಿ ರೈಲು ಸಂಚಾರದ ಆವರ್ತನ ಹೆಚ್ಚಲಿದ್ದು, ಜನದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.