ಪ್ರೊಟೊ ಟೈಪ್ ಮೆಟ್ರೋ ಟ್ರೈನ್
- 318 ಬೋಗಿಗಳ ನಿರ್ಮಾಣಕ್ಕೆ ಒಪ್ಪಂದ
- ನೀಲಿ, ಗುಲಾಬಿ ಮಾರ್ಗಕ್ಕೆ ರೈಲುಗಳ ನಿರ್ಮಾಣ
- 3,177 ಕೋಟಿ ರೂ.ಮೌಲ್ಯದ ಒಡಂಬಡಿಕೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಮೆಟ್ರೋ ಜಾಲ ವಿಸ್ತರಣೆಯ ಹಿನ್ನೆಲೆಯಲ್ಲಿ ಬಿಇಎಂಎಲ್ ಸಂಸ್ಥೆ ಗುರುವಾರ ಆಧುನಿಕ ಚಾಲಕ ರಹಿತ ಮೆಟ್ರೋ ಟೆನ್ಸೆಟ್ (5ಆರ್ಎಸ್-ಡಿಎಂ) ಮಾದರಿಯನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್)ದ 2, 2ಎ ಮತ್ತು 2ಬಿ ಹಂತಗಳ ಹೊಸ ಕಾರಿಡಾರ್ಗಳಿಗೆ ವಿನ್ಯಾಸಗೊಳಿಸಿರುವ ಪ್ರೋಟೋಟೈಪ್ ಟ್ರೈನ್ಸೆಟ್ ಅನ್ನು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ರವಿಶಂಕರ್ ಲೋಕಾರ್ಪಣೆಗೊಳಿಸಿದರು.
ಬಳಿಕ ಗಣ್ಯರು ರೈಲಿನ ಪ್ರಯೋಗಾತ್ಮಕ ಸಂಚಲನವನ್ನು ವೀಕ್ಷಿಸಿದರು.
ಬಿಎಂಆರ್ಸಿಎಲ್ನ ಯೋಜನೆಯಡಿ, ಬಿಇಎಂಎಲ್ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಕೋಚ್ಗಳನ್ನು ತಯಾರಿಸಲಿದ್ದು, ಅವುಗಳಲ್ಲಿ ನೀಲಿ ಮತ್ತು ಗುಲಾಬಿ ಮಾರ್ಗದ ರೈಲುಗಳು ಇವೆ. ಸಂಪೂರ್ಣ ವಿನ್ಯಾಸ, ಇಂಜಿನಿಯರಿಂಗ್ ಮತ್ತು ತಯಾರಿಕಾ ಕಾರ್ಯಗಳು ಬೆಂಗಳೂರಿನಲ್ಲಿರುವ ಬಿಇಎಂಎಲ್ ಘಟಕದಲ್ಲೇ ನಡೆಯುತ್ತಿವೆ. ಬಿಎಂಆರ್ಸಿಎಲ್ ವೇಳಾಪಟ್ಟಿಯ ಅನುಸಾರ ಈ ಹೊಸ ಟ್ರೆನ್ಸೆಟ್ಗಳು ಹಲವು ಹಂತಗಳ ಪರೀಕ್ಷೆ, ತಾಂತ್ರಿಕ ಪರಿಶೀಲನೆ ಮತ್ತು ಪ್ರಮಾಣೀಕರಣಕ್ಕೆ ಒಳಪಡುವುದಲ್ಲದೆ, ಸುಮಾರು 15 ವರ್ಷಗಳವರೆಗೆ ನಿರ್ವಹಣಾ ಸಾಮರ್ಥ್ಯ ಹೊಂದಲಿದೆ. ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯ ಮೂಲಕ ಬಿಇಎಂಎಲ್ಗೆ ಲಭ್ಯವಾದ 3,177 ಕೋಟಿ ರೂ.ಮೌಲ್ಯದ ಒಡಂಬಡಿಕೆಯ ಅನುಷ್ಠಾನದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಬಿಇಎಂಎಲ್ ಸಿಎಂಡಿ ಶಾಂತನು ರಾಯ್ ಮಾತನಾಡಿ, ಚಾಲಕ ರಹಿತ ಮೆಟ್ರೋ ಮಾದರಿಯ ಅನಾವರಣವು ಬಿಇಎಂಎಲ್ನ ಮುಂದಿನ ತಲೆಮಾರಿನ ನಗರ ಸಾರಿಗೆ ಪರಿಹಾರಗಳನ್ನು ಒದಗಿಸುವ ಪ್ರಯತ್ನದಲ್ಲಿ ದೊಡ್ಡ ಯೋಜನೆಯಾಗಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ನಿಖರ, ವಿಶ್ವಾಸಾರ್ಹ ಮತ್ತು ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಬಿಎಂಆರ್ಸಿಎಲ್ ನಮಗೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ್ದಾರೆ ಎಂದರು.
ರೈಲಿನ ವಿಶೇಚತೆ
ಬಿಇಎಂಎಲ್ ಅಭಿವೃದ್ಧಿಪಡಿಸಿದ ಹೊಸ ಚಾಲಕ ರಹಿತ ಮೆಟ್ರೋ ಟೆನ್ಸೆಟ್ನ ಒಳಾಂಗಣವನ್ನು ಆಧುನಿಕವಾಗಿ ನಿರ್ಮಿಸಲಾಗಿದೆ. ಅಗಲ ಗ್ಯಾಂಗ್ವೇಗಳು, ಯುಎಸ್ಬಿ ಚಾರ್ಜಿಂಗ್ ಪೋರ್ಟ್ಗಳು, ಸುಧಾರಿತ ಸುಲಭ ಪ್ರವೇಶ ಸೌಲಭ್ಯಗಳು ಹಾಗೂ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳು ಕೂಡಿವೆ. ಚಿಬಿಟಿಸಿ ತಂತ್ರಜ್ಞಾನಕ್ಕೆ ಹೊಂದಿಕೊಂಡಿರುವ ಈ ಟೆನ್ಸೆಟ್ ಸಂಪೂರ್ಣ ಚಾಲಕ ರಹಿತ ಸಂಚಲನಕ್ಕೆ ಸಿದ್ಧವಾಗಿರುವುದೇ ಪ್ರಮುಖ ವಿಶೇಷತೆಯಾಗಿದೆ. ಮಾದರಿ ರೋಲ್ಔಟ್ನೊಂದಿಗೆ ಯೋಜನೆಗೆ ಸಂಬಂಧಿಸಿದ ವಿತರಣಾ ಹಂತಗಳು ಆರಂಭವಾಗಿದ್ದು, ಸರಣಿ ಉತ್ಪಾದನೆ ಒಪ್ಪಂದಿತ ವೇಳಾಪಟ್ಟಿಯಂತೆ ಮುಂದುವರಿಯಲಿದೆ. ಬಿಇಎಂಎಲ್ ಇತ್ತೀಚೆಗೆ ಬಿಎಂಆರ್ಸಿಎಲ್ನಿಂದ 414 ಕೋಟಿ ರೂ. ಹೆಚ್ಚುವರಿ ಆದೇಶ ಪಡೆದಿದ್ದು, ಹಳದಿ ಮಾರ್ಗಕ್ಎಕ 6 ರೈಲುಗಳನ್ನು ಪೂರೈಸಲಿದೆ. ರೀಚ್&6ಗಾಗಿ ಮೊದಲು ಪಡೆದ ಆದೇಶದೊಂದಿಗೆ ಒಟ್ಟು ಪೂರೈಕೆ 66 ಟೆನ್ಸೆಟ್ಗಳಿಗೆ ಏರಿಕೆ ಕಂಡಿದೆ.
ಈ ಮೊದಲ ಪ್ರೋಟೋಟೈಪ್ ರೋಲ್ಔಟ್ ಬಿಇಎಂಎಲ್ನ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ. ಅತ್ಯಾಧುನಿಕ ರೈಲು ರೇಕುಗಳು ಪ್ರಯಾಣಿಕರ ಅನುಭವವನ್ನು ಹೆಚ್ಚು ಸುಧಾರಿಸಲಿದೆ. ಮುಂಬರುವ ಆರ್&6 ಗುಲಾಬಿ ಮಾರ್ಗ ಮತ್ತು ಒಆರ್ಆರ್ ನೀಲಿ ಮಾರ್ಗದಲ್ಲಿ ಈ ರೈಲುಗಳು ಕಾರ್ಯಾಚರಣೆ ನಡೆಸಲಿದೆ. ನಗರಕ್ಕೆ ಗುಣಮಟ್ಟದ ಮೆಟ್ರೋ ಸೇವೆ, ಸಂಚಾರ ಸಿಕ್ಕಿನ ಸಮಸ್ಯೆ ಇಳಿಕೆ ಇತ್ಯಾದಿ ಮುಖ್ಯ ದ್ಯೇಯವಾಗಿದೆ.