ಮೆಟ್ರೋ 
ಬೆಂಗಳೂರು

ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬ್ರೇಕ್​!

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ
  • ರೀಲ್ಸ್​, ಗಲಾಟೆ, ಟ್ರ್ಯಾಕ್​ ಪ್ರವೇಶ ಸೇರಿ ಹಲವು ಉಲ್ಲಂಘನೆಗಳಿಗೆ ಬಿಗಿ ಕ್ರಮ
  • ಬಿಎಂಆರ್​ಸಿಎಲ್​ನಿಂದ ಹೊಸ ದಂಡ ಪಟ್ಟಿ ಜಾರಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋವನ್ನು ಸುರಕ್ಷಿತ ಹಾಗೂ ಶಿಸ್ತುಬದ್ಧ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ರೂಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್​ಸಿಎಲ್​) ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ಹಾಗೂ ಇತರರಿಗೆ ಕಿರಿಕಿರಿ ಉಂಟುಮಾಡುವ ವರ್ತನೆಗಳಿಗೆ ಇನ್ನು ಮುಂದೆ ಭಾರೀ ದಂಡ ವಿಧಿಸಲು ನಿರ್ಧರಿಸಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಷತ ದಂಡದ ನಿಯಮಗಳು ಜಾರಿಗೆ ಬಂದಿವೆ.
ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರೀಲ್ಸ್​ ಚಿತ್ರೀಕರಣ, ಜೋರಾಗಿ ಸಂಗೀತ ಕೇಳಿಸುವುದು, ಗಲಾಟೆ, ಟ್ರ್ಯಾಕ್​ ಪ್ರವೇಶ ಸೇರಿ ವಿವಿಧ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದಂಡದ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಯಾಣಿಕರ ನೆಮ್ಮದಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಟ್ರ್ಯಾಕ್​ ಪ್ರವೇಶಕ್ಕೆ ಭಾರೀ ಹೊರೆ
ಮೆಟ್ರೋ ಹಳಿಗಳ ಮೇಲೆ ಅನಧಿಕೃತವಾಗಿ ಓಡಾಡುವುದು ಅಥವಾ ಟ್ರ್ಯಾಕ್​ಗೆ ಇಳಿಯುವುದು ಅತ್ಯಂತ ಗಂಭೀರ ಉಲ್ಲಂಘನೆಯಾಗಿ ಪರಿಗಣಿಸಲಾಗಿದ್ದು, ಇಂತಹ ಪ್ರಕರಣಗಳಲ್ಲಿ ಇನ್ನು ಮುಂದೆ 5,000 ರೂ.ನಿಂದ 25,000 ವರೆಗೆ ದಂಡ ವಿಧಿಸಲಾಗುತ್ತದೆ. ಟಿಕೆಟ್​ ಅಥವಾ ಪಾಸ್​ ದುರ್ಬಳಕೆ ಮಾಡಿದರೂ ಇದೇ ಪ್ರಮಾಣದ ದಂಡ ಅನ್ವಯವಾಗಲಿದೆ. ನಿಲ್ದಾಣದೊಳಗೆ ಅನುಮತಿ ಇಲ್ಲದೆ ವ್ಯಾಪಾರ ನಡೆಸಿದರೆ 5,000 ರೂ. ದಂಡ ಪಾವತಿಸಬೇಕಾಗುತ್ತದೆ.
ರೀಲ್ಸ್​, ಲೌಡ್​ ಮ್ಯೂಸಿಕ್​ಗೆ ಕಠಿಣ ಕ್ರಮ
ಮೆಟ್ರೋ ರೈಲಿನೊಳಗೆ ರೀಲ್ಸ್​ ಚಿತ್ರೀಕರಣ, ಆಹಾರ ಸೇವನೆ, ನೆಲದ ಮೇಲೆ ಕುಳಿತುಕೊಳ್ಳುವುದು ಅಥವಾ ಹೆಡ್​ಫೋನ್​ ಇಲ್ಲದೆ ಜೋರಾಗಿ ಸಂಗೀತ ಹಾಕಿ ಇತರರಿಗೆ ತೊಂದರೆ ನೀಡಿದರೆ, ಈ ಹಿಂದೆ ಇದ್ದ 500 ರೂ. ದಂಡವನ್ನು 2,500ರಿಂದ 10,000 ರೂ. ವರೆಗೆ ಹೆಚ್ಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಿಗಾಗಿ ಮೆಟ್ರೋವನ್ನು ಚಿತ್ರೀಕರಣದ ತಾಣವನ್ನಾಗಿಸುವ ಪ್ರವೃತ್ತಿಗೆ ಇದು ಬ್ರೇಕ್​ ಹಾಕುವ ಪ್ರಯತ್ನವಾಗಿದೆ.
ಗೋಡೆ ಹಾಳು ಮಾಡಿದರೆ 10 ಸಾವಿರ ರೂ. ದಂಡ:
ಮೆಟ್ರೋ ನಿಲ್ದಾಣದ ಗೋಡೆಗಳ ಮೇಲೆ ಬರೆಯುವುದು, ಪೋಸ್ಟರ್​ ಅಂಟಿಸುವುದು ಅಥವಾ ಚಿತ್ರ ಬಿಡಿಸಿ ಸಾರ್ವಜನಿಕ ಆಸ್ತಿಯ ಸೌಂದರ್ಯ ಹಾಳು ಮಾಡಿದರೆ ಈ ಹಿಂದೆ ಇದ್ದ  1,000 ರೂ.  ದಂಡವನ್ನು 10,000ಕ್ಕೆ ಏರಿಸಲಾಗಿದೆ.
ಮದ್ಯಪಾನ, ಅಪಾಯಕಾರಿ ವಸ್ತು ಸಾಗಾಟಕ್ಕೂ ಶಿಕ್ಷೆ
ಮದ್ಯಪಾನ ಮಾಡಿ ಪ್ರಯಾಣಿಸುವುದು, ಅಸಭ್ಯ ವರ್ತನೆ, ಉಗುಳುವುದು ಅಥವಾ ಇತರ ಪ್ರಯಾಣಿಕರೊಂದಿಗೆ ಜಗಳವಾಡಿದರೆ ವಿಧಿಸಲಾಗುತ್ತಿದ್ದ 500 ರೂ. ದಂಡವನ್ನು 2,500ಕ್ಕೆ ಹೆಚ್ಚಿಸಲಾಗಿದೆ. ಪಟಾಕಿ, ಸ್ಫೋಟಕ ವಸ್ತುಗಳು ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಮೆಟ್ರೋದಲ್ಲಿ ಸಾಗಿಸಿದರೂ ಇದೇ ಪ್ರಮಾಣದ ದಂಡ ವಿಧಿಸಲಾಗುತ್ತದೆ.
ಪ್ರತಿ 3 ವರ್ಷಕ್ಕೊಮ್ಮೆ ದಂಡ ಏರಿಕೆ
ಹೊಸ ನಿಯಮದ ಮತ್ತೊಂದು ವಿಶೇಷ ಅಂಶವೆಂದರೆ, ಜಾರಿಯಲ್ಲಿರುವ ಎಲ್ಲ ದಂಡದ ಮೊತ್ತವನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.10 ಸ್ವಯಂಚಾಲಿತವಾಗಿ ಪರಿಷ್ಕರಿಸಲು ನಿರ್ಧರಿಸಲಾಗಿದೆ. ನಿಯಮ ಉಲ್ಲಂಘನೆಗೆ ತಡೆ ಹಾಕುವ ಜತೆಗೆ, ಸುರಕ್ಷಿತ ಮತ್ತು ಶಿಸ್ತುಬದ್ಧ ಮೆಟ್ರೋ ಸೇವೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.