ಬೆಂಗಳೂರು: ಲಿವಿಂಗ್ ಸಂಬಂಧದಲ್ಲಿದ್ದ ವ್ಯಕ್ತಿಯೊಬ್ಬ ಸ್ನೇಹಿತನ ಮಗನನ್ನೇ ಹತ್ಯೆಗೈದ ಪ್ರಕರಣದಲ್ಲಿ ಹಲವು ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿದ್ದು, ‘ಸ್ನೇಹಿತೆ ಜತೆಗೆ ಬೆರೆಯಲು ಬಿಡದಿರುವುದು ಮತ್ತು ಮನೆಗೆ ಬರದಂತೆ ತಾಕೀತು ಮಾಡಿದ್ದರಿಂದಲೇ ಹತ್ಯೆ ಮಾಡಿದ್ದನೆಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಪದ್ಮನಾಭನಗರದ ಮನೆಯೊಂದರಲ್ಲಿ ಸೋಹಮ್ ದಾಸ್ (18) ಎಂಬ ಯುವಕನ ಕೊಲೆಯಾಗಿತ್ತು. ಆಗ ಮೃತ ಯುವಕನ ತಾಯಿ ಮೇಲೂ ಕೊಲೆಗೆ ಯತ್ನ ನಡೆದಿತ್ತು. ಈ ಸಂಬಂಧ ಸುದೀಪ್ ಎಂಬಾತನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆ ನಡೆಸಿದ್ದು, ಈ ವೇಳೆ ತಾನು ಯಾಕೆ ಕೊಲೆ ಮಾಡಿದನೆಂದು ಪೊಲೀಸರಿಗೆ ತಿಳಿಸಿದ್ದಾನೆ.
ಇಂಜಿನಿಯರಿಂಗ್ ಓದುತ್ತಿದ್ದ ಸ್ನೇಹಿತೆಯ ಮಗನಿಗೆ ತನ್ನ ತಾಯಿ ಲಿವಿಂಗ್ ಸಂಬಂಧದಲ್ಲಿರುವುದು ಇಷ್ಟವಿರಲಿಲ್ಲ. ಹಾಗಾಗಿ ಸುದೀಪ್ ಜತೆಗಿನ ಸ್ನೇಹ ಮೊಟಕುಗೊಳಿಸುವಂತೆ ಮೃತ ಯುವಕ ತನ್ನ ತಾಯಿಗೆ ಸೂಚಿಸಿದ್ದ. ಜತೆಗೆ ಸುದೀಪ್ಗೂ ಮನೆಗೆ ಬರದಂತೆ ಎಚ್ಚರ ನೀಡಿದ್ದ. ಇದೇ ವಿಚಾರ ಸಂಬಂಧ 6 ತಿಂಗಳ ಕಾಲ ಮನೆಯಲ್ಲಿ ಗಲಾಟೆ ಮಾಡಿದ್ದಾಗಿ ಆರೋಪಿ, ಪೊಲೀಸರಿಗೆ ತಿಳಿಸಿದ್ದಾನೆ.
ಸ್ನೇಹಿತೆಯ ಮಗನ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದ ಆರೋಪಿ, ಆಕೆಯ ಮನೆಗೆ ಬರುತ್ತಿದ್ದ. ಆಗ ವಿವಾಹಿತ ಮಹಿಳೆ, ಸುದೀಪ್ನಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದಾಗ ಆತ ಕೋಪಗೊಂಡು ‘ನಿನಗಾಗಿ ನನ್ನ ಕುಟುಂಬವನ್ನೇ ಬಿಟ್ಟು ಬಂದಿನಿ. ಈಗ ನನ್ನನ್ನೇಕೆ ದೂರ ಮಾಡುತ್ತಿದ್ದಿ’ ಎಂದು ಪ್ರಶ್ನಿಸಿ, ನ.16ರಂದು ರಾತ್ರಿ ಜಗಳ ತೆಗೆದಿದ್ದ. ಆಕೆಯ ಮಗ ಸೋಹನ್ದಾಸ್ ಹಾಗೂ ಸುದೀಪ್ ನಡುವೆ ವಾಗ್ವಾದ ನಡೆದಾಗ ಮಚ್ಚಿನಿಂದ ಕೊಲೆ ಮಾಡಿದ್ದಾನೆ. ಬಳಿಕ ವಿವಾಹಿತ ಮಹಿಳೆಗೂ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದಿದೆ.
ವಿವಾಹಿತ ಮಹಿಳೆ ಆರೋಪಿಯಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ತನ್ನ ಇತರ ಸ್ನೇಹಿತರ ಜತೆಗೆ ಆತ್ಮೀಯತೆಯಿಂದ ಇರುತ್ತಿದ್ದಳು. ಇದನ್ನು ತಪ್ಪಾಗಿ ಭಾವಿಸುತ್ತಿದ್ದ ಆರೋಪಿ, ಆಕೆಯ ನಡತೆ ಸರಿಯಿಲ್ಲ. ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆಕೆಯ ನಡತೆ ಮೇಲೆ ಅನುಮಾನ ವ್ಯಕ್ತ ಪಡಿಸಿ ಕೊಲೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ ಪತಿಯಿಂದ ದೂರವಾಗಿ ಮಗನೊಂದಿಗೆ ಒಂಟಿ ಜೀವನ ನಡೆಸುತ್ತಿದ್ದ ವಿವಾಹಿತ ಮಹಿಳೆಗೆ ಮೈಸೂರಿನಲ್ಲಿ ಸುದೀಪ್ ಪರಿಚಯವಾಗಿದ್ದ. ಇಬ್ಬರು ಒಂದೇ ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾದಾಗ ಇಬ್ಬರೂ 3 ವರ್ಷಗಳ ಕಾಲ ಲಿವಿಂಗ್ ಸಂಬಂಧದಲ್ಲಿದ್ದರು.