- ಬಿಎಂಟಿಸಿಗೆ 4,500 ಇ-&ಬಸ್ಗಿಲ್ಲ ಅನುಮತಿ
- ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು: ಕೇಂದ್ರ ಸರ್ಕಾರ ಬೆಂಗಳೂರಿಗೆ 4,500 ವಿದ್ಯುತ್ಚಾಲಿತ ಬಸ್ಗಳನ್ನು ಮಂಜೂರು ಮಾಡಿದ್ದರೂ, ಅವುಗಳನ್ನು ರಸ್ತೆಗಿಳಿಸಲು ಅಗತ್ಯವಿರುವ ಸಚಿವ ಸಂಪುಟದ ಅನುಮೋದನೆಯನ್ನು ರಾಜ್ಯ ಸರ್ಕಾರ ಇದುವರೆಗೂ ನೀಡಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಸೋಮವಾರ ಬನಶಂಕರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ವಿಐಪಿ ಯೋಜನೆಗಳಿಗೆ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಾಗೂ ಅದರ ಪ್ರಯಾಣಿಕರನ್ನು ಕಡೆಗಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಾರ್ವಜನಿಕ ಸಾರಿಗೆಯ ಬಲವರ್ಧನೆಗಿಂತ ಸುರಂಗ ರಸ್ತೆಗಳಂತಹ ದುಬಾರಿ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಟೀಕಿಸಿದ ಅವರು, ಸದ್ಯ ಬಿಎಂಟಿಸಿ ಬಸ್ಗಳ ಕೊರತೆ ಹೆಚ್ಚಾಗಿದೆ. ಪ್ರತಿನಿತ್ಯ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
1,300 ಕಿ.ಮೀ. ಸುರಂಗ ರಸ್ತೆ, ಕಾರುಗಳಿಗೆ ಮಾತ್ರ ಮೀಸಲಾದ ಸುರಂಗ ಮಾರ್ಗಗಳಂತಹ ವಿಐಪಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡಲು ಸರ್ಕಾರ ಸಿದ್ಧವಾಗಿದೆ. ಆದರೆ ಮೆಟ್ರೋ ಹಾಗೂ ಬಿಎಂಟಿಸಿ ಮೂಲಕ ಸಂಚರಿಸುವ ಸಾಮಾನ್ಯ ನಾಗರಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲ. ಈ ಸರ್ಕಾರದ ದೃಷ್ಟಿಯಲ್ಲಿ ಸಾರ್ವಜನಿಕ ಸಾರಿಗೆ ಬಳಸುವವರು ಎರಡನೇ ದರ್ಜೆಯ ಪ್ರಜೆಗಳಂತಾಗಿದ್ದಾರೆ ಎಂದು ಸೂರ್ಯ ಆರೋಪಿಸಿದರು.
ಈ ವೇಳೆ ಸಂಸದರು ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು. ಬಸ್ಗಳ ಕೊರತೆ, ನಿಗದಿತ ಸಮಯಕ್ಕೆ ಸೇವೆ ಸಿಗದಿರುವುದು ಹಾಗೂ ಪೀಕ್ ಅವಧಿಯಲ್ಲಿ ಸೂಕ್ತ ಸಂಪರ್ಕದ ಅಭಾವದಿಂದ ತೀವ್ರ ತೊಂದರೆ ಅನುಭವಿಸುತ್ತಿರುವುದಾಗಿ ಹಲವರು ಅಳಲು ತೋಡಿಕೊಂಡರು.
ನಗರದ ರಸ್ತೆಗಳ ಅಭಿವೃದ್ಧಿಗೆ 3 ವರ್ಷಗಳಲ್ಲಿ 5,500 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ರಸ್ತೆಗಳ ಗುಂಡಿಗಳು ಹಾಗೆಯೇ ಉಳಿದಿವೆ. ಸಾರ್ವಜನಿಕರ ತೆರಿಗೆ ಹಣ ಎಲ್ಲಿ ರ್ಖಚಾಯಿತು ಎಂಬ ಬಗ್ಗೆ 30 ದಿನಗಳೊಳಗೆ ಸಮಗ್ರ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಈ ಹಿಂದೆಯೇ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇನೆ ಎಂದು ತೇಜಸ್ವಿ ಸೂರ್ಯ ನೆನಪಿಸಿದರು. "ಬೆಂಗಳೂರು ಪಾರದರ್ಶಕ ಆಡಳಿತಕ್ಕೆ ಅರ್ಹವಾಗಿದೆ. ತೆರಿಗೆದಾರರ ಹಣಕ್ಕೆ ಸರ್ಕಾರ ಉತ್ತರ ನೀಡಲೇಬೇಕು ಎಂದು ಆಗ್ರಹಿಸಿದರು.