ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ಗೆ ಮತ್ತೇ ಬೆನ್ನು ನೋವು ಶುರುವಾಗಿದ್ದು, ಈ ಕುರಿತು ನ್ಯಾಯಾಧೀಶರ ಬಳಿ ಅಳಲು ತೋಡಿಕೊಂಡಿದ್ದಾನೆ.
59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಬುಧವಾರವೂ ಪ್ರಕರಣ ವಿಚಾರಣೆ ನಡೆದಿದ್ದು, ಈ ವೇಳೆ ಆರೋಪಿ ನಟ ದರ್ಶನ್, ತೀವ್ರ ಚಳಿಯಿಂದಾಗಿ ಬೆನ್ನು ನೋವು ತಡೆದುಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ಪಿಸಿಯೋ ಥೆರಪಿಗೆ ಅನುಮತಿ ನೀಡಿ ಎಂದಿದ್ದಾನೆ.
ಮೊದಲಿನಿಂದಲೂ ಬೆನ್ನು ನೋವಿದ್ದರೂ ಸಣ್ಣ ಪ್ರಮಾಣದ ನೋವನ್ನು ಸಹಿಸಿಕೊಳ್ಳುತ್ತಿದ್ದೆ. ಆದರೆ ಚಳಿಗಾಲ ಶುರುವಾದ ಕಾರಣ ನೋವಿನ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ ನಿತ್ಯವೂ ತೊಂದರೆ ಆಗುತ್ತಿದೆ ಎಂದು ನ್ಯಾಯಾಧೀಶರ ಬಳಿ ಆರೋಪಿ ದರ್ಶನ್ ವಿವರಿಸಿದ್ದಾನೆ.
ಆರೋಪಿಯ ಮನವಿ ಆಲಿಸಿದ ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿಯವರು, ಈ ಬಗ್ಗೆ ವಕೀಲರ ಮೂಲಕ ಕೋರ್ಟಿಗೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ತೀವ್ರ ಚಳಿಗೆ ಬೆನ್ನು ನೋವು ತಡೆದುಕೊಳ್ಳಲು ಆಗುತ್ತಿಲ್ಲ. ಪಿಸಿಯೋ ಥೆರಪಿಗೆ ಅನುಮತಿ ನೀಡುವಂತೆಯೂ ದರ್ಶನ್, 59ನೇ ಸಿಸಿಎಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಸ್ವೀಕರಿಸಿದ ನ್ಯಾಯಾಧೀಶರು, ಜೈಲಿನಲ್ಲಿ ಆರೋಪಿಗೆ ಅಗತ್ಯ ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕೆಂದು ನಿರ್ದೇಶಿಸಿದ್ದಾರೆ. ಜತೆಗೆ ವೈದ್ಯಕೀಯ ದಾಖಲೆಗಳೊಂದಿಗೆ ಸಲ್ಲಿಸಿದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ್ದಾರೆ.
59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಪ್ರದೋಷ್ ಜಾಮೀನು ಅರ್ಜಿ ವಿಚಾರಣೆ ಬುಧವಾರವೂ ನಡೆದಿದ್ದು, ಶುಕ್ರವಾರ (ಅ.30ರಂದು) ಆದೇಶ ಕಾಯ್ದಿರಿಸಲಾಗಿದೆ.
ವರ್ಷದ ಹಿಂದೆ ಪ್ರದೋಷ್ ತಂದೆ ಮೃತಪಟ್ಟಿದ್ದರು. ಇದೀಗ ಅವರ ತೀಥಿ ಕಾರ್ಯ ಮಾಡಲು ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ, ಎಸ್ಪಿಪಿ ಪ್ರಸನ್ನ ಕುಮಾರ್ ಅವರು, ಪ್ರಕರಣದ ಟ್ರಯಲ್ ಇನ್ನು ಮುಗಿದಿಲ್ಲ. ಅಲ್ಲಿಯ ವರೆಗೆ ಪ್ರದೋಷ್ ಜೈಲಿನಲ್ಲಿರಲಿ. ಇದೀಗ ಪ್ರದೋಷ್ ಆರೋಪಿಯಲ್ಲ. ಜೈಲು ವಾಸಿಯಷ್ಟೇ. ಅವನ ಸುರಕ್ಷತೆ ದೃಷ್ಟಿಯಿಂದಾಗಿ ಜೈಲಿನಲ್ಲಿರುವುದು ಸೂಕ್ತ ಎಂದಿದ್ದಾರೆ.
ಪ್ರದೋಷ್ ಜಾಮೀನಿಗೆ ಪ್ರಾಸಿಕ್ಯೂಷನ್ ವಿರೋಧಿಸುದು ಇಲ್ಲ. ಸಮರ್ಥಿಸುವುದೂ ಇಲ್ಲ. ಆದರೆ ಕಾನೂನಿನಲ್ಲಿರುವ ಕೆಲ ಅಂಶಗಳನ್ನು ವಿವರಿಸಿದ್ದೇನೆ. ಅವನ ಸುರಕ್ಷತೆ ಮೇಲೆ ಗಮನವಿಟ್ಟು ಕೋರ್ಟ್ ಕ್ರಮ ಕೈಗೊಳ್ಳಲಿ ಎಂದು ವಾದ ಮಂಡಿಸಿದ್ದಾರೆ. ವಾದ ವಿವಾದ ಆಲಿಸಿದ ಕೋರ್ಟ್ ತೀರ್ಪನ್ನು ಅ.30ಕ್ಕೆ ಕಾಯ್ದಿರಿಸಿದೆ.
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಸ್ವಾಮಿಗೆ ಚಿತ್ರಹಿಂಸೆ ನೀಡಿ ನಟ ದರ್ಶನ್ ಮತ್ತು ಅವರ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿದ್ದ ದಿನ ಸ್ಥಳದಲ್ಲೇ ಇದ್ದ ಪ್ರಮುಖ ಸಾಕ್ಷಿಯಲ್ಲೊಬ್ಬನಾದ ಪುನಿತ್ ನ್ಯಾಯಾಧೀಶರ ಮುಂದೆ ವ್ಯತರಿಕ್ತ ಹೇಳಿಕೆ ನೀಡಿರುವುದು ಅಚ್ಚರಿಯುಂಟು ಮಾಡಿದೆ.
ಪ್ರಕರಣದಲ್ಲಿ ಸಾಕ್ಷಿ ಸಂಖ್ಯೆ 91 ಆಗಿರುವ ಎಂ.ಜೆ. ಪುನೀತ್, ಬುಧವಾರ ಕೋರ್ಟ್ಗೆ ಹಾಜರಾಗಿ ಸಾಕ್ಷಿ ನುಡಿದ್ದು, ‘ಶೆಡ್ನಲ್ಲಿ ದರ್ಶನ್ ಮತ್ತು ಪವಿತ್ರಾಗೌಡ’ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಇದರ ಜತೆಗೆ ಕೆಲ ಆರೋಪಿಗಳನ್ನು ಗುರುತಿಸುವಲ್ಲಿ ವಿಲನಾಗಿದ್ದಾನೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ಸಾಕ್ಷಿ ಕಿರಣ್ ಹೇಳಿಕೆಯನ್ನೂ ಕೋರ್ಟ್ ದಾಖಲಿಸಿಕೊಂಡಿತು.
ವಾರಂಟ್ ಜಾರಿಯಾಗಿತ್ತು: ಸಾಕ್ಷಿ ಪುನೀತ್ಗೆ ನ್ಯಾಯಾಲಯ ಸಮನ್ಸ್ ನೀಡಿತ್ತು. ಆತ ಅದನ್ನು ಸಂಪೂರ್ಣ ನಿರ್ಲಕ್ಷಿಸಿದ್ದ. ಹಾಗಾಗಿ ಆತನ ಬಂಧನಕ್ಕಾಗಿ ಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆ ಆತ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದಾನೆ.