ಜೂ 1ರಿಂದ ರಾಜ್ಯದಲ್ಲಿ ಮಳೆಗಾಲ ಶುರು
ಬೆಂಗಳೂರು: ರಾಜ್ಯದಲ್ಲಿ ಮೇ 31ಕ್ಕೆ ಬೇಸಿಗೆಗಾಲ ಮುಕ್ತಾಯವಾಗಲಿದೆ. ಮಾ.1ರಿಂದ ಶುರುವಾದ ಬೇಸಿಗೆಗಾಲ ಮೇ 31ಕ್ಕೆ ಕೊನೆಗೊಳ್ಳಲಿದೆ. ಆದರೆ, ಬೇಸಿಗೆ ಮುಗಿಯಲು 2 ದಿನ ಬಾಕಿ ಇದ್ದರೂ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಇನ್ನೂ ಕಾಡುತ್ತಿದೆ. ಇದರ ನಡುವೆ ಮುಂದಿನ 5 ದಿನ ರಾಜ್ಯದ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.
ಇಲಾಖೆ ಪ್ರಕಾರ ಜೂ 1ರಿಂದ ರಾಜ್ಯದಲ್ಲಿ ಮಳೆಗಾಲ ಶುರುವಾಗಲಿದೆ. ವಾಡಿಕೆಯಂತೆ ಕರ್ನಾಟಕದ ಕರಾವಳಿ ಭಾಗಕ್ಕೆ ನೈಋತ್ಯ ಮಾನ್ಸೂನ್ (ಮುಂಗಾರು)ಆಗಮಿಸುವ ಸಾಧ್ಯತೆ ಇದೆ. ಈ ಬಾರಿ ‘ಸೂಪರ್ ಎಲ್‌ನಿನೋ’ ಆತಂಕ ಹಿನ್ನೆಲೆಯಲ್ಲಿ ಮಳೆ ಅಭಾವ ಎದುರಾಗುವ ಸಂಭವ ಇದೆ.
ಪೆಸಿಫಿಕ್ ಸಾಗರದಲ್ಲಿ ಪ್ರಸ್ತುತ ‘ಲಾ-ನಿನಾ’ ಸ್ಥಿತಿ ಇದೆ. ಆದರೆ, ಜುಲೈ ವೇಳೆಗೆ ಇದು ‘ಎಲ್ ನಿನೋ’ ಆಗಿ ಪರಿವರ್ತನೆಗೊಳ್ಳಲಿದೆ. ಈ ಬದಲಾವಣೆಯು ಮುಂಗಾರು ಮಳೆ ಮೇಲೆ ನೇರ ಪರಿಣಾಮ ಬೀರಲಿದೆ. ಜೂನ್, ಜುಲೈನಲ್ಲಿ ವಾಡಿಕೆಯಷ್ಟೇ ಮಳೆಯಾದರೆ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ ) ಈಗಾಗಲೇ ಭವಿಷ್ಯ ನುಡಿದಿದೆ.
ದಕ್ಷಿಣ ಕರ್ನಾಟಕದಲ್ಲಿ ಮಳೆ ಬಿರುಸು:
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ದಕ್ಷಿಣ ಕನ್ನಡದ ಬಹುತೇಕ ಜಿಲ್ಲೆಗಳಲ್ಲಿ ಬಿರುಸಾಗಿ ವರ್ಷಧಾರೆಯಾಗಲಿದೆ.ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು. ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಮೇ 30ರಿಂದ ಜೂ 1ವರೆಗೆ ರಭಸದಿಂದ ಮಳೆ ಸುರಿಯಲಿದೆ.
ಕೆಲ ಜಿಲ್ಲೆಗಳಲ್ಲಿ ಮೇ 30ರಂದು ಬಿರುಗಾಳಿ ಸಹಿತ ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ಇಲಾಖೆ, ಯೆಲ್ಲೋ ಅಲರ್ಟ್ ಕೊಟ್ಟಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ.ಉತ್ತರ ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದೆ.