- ಗುಂಪು ಗುಂಪಲ್ಲಿ ದಾಳಿ, ಹೆಚ್ಚಿದ ಆತಂಕ
- ಮನೆಯೆಲ್ಲಾ ಚಲ್ಲಾಪಿಲ್ಲಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಅಪಾರ್ಟ್ಮೆಂಟ್ಗಳಲ್ಲಿ ಕೋತಿಗಳು ಗುಂಪುಗಳಾಗಿ ನುಗ್ಗಿ ಬಾಲ್ಕನಿ, ಕಿಟಕಿಗಳ ಮೂಲಕ ಮನೆಗಳಿಗೆ ಪ್ರವೇಶಿಸಿ, ಹಾಳುಗೆಡವುವ, ಅಡುಗೆಮನೆಗಳಲ್ಲಿ ಇಡಲಾಗಿರುವ ಹಣ್ಣು, ಆಹಾರ ಪದಾರ್ಥಗಳನ್ನು ಕದ್ದೊಯ್ಯುವ ಘಟನೆಗಳು ಹೆಚ್ಚಾಗುತ್ತಿದೆ.
ನಾಯಂಡಹಳ್ಳಿಯ ಬಿರ್ಲಾ ಆ್ಯಪಲ್ ಸ್ಪೆರ್ ಅಪಾರ್ಟ್ಮೆಂಟ್ನಲ್ಲಿ ಸುಮಾರು 15-20 ಕೋತಿಗಳು ನಿವಾಸಿಗಳಿಗೆ ತಲೆನೋವಾಗಿದ್ದು, ಅವುಗಳ ಆರ್ಭಟಕ್ಕೆ ವೃದ್ಧರು ಮತ್ತು ಮಕ್ಕಳು ಭೀತಿಯಿಂದ ನಡೆಯುವ ವಾತಾವರಣ ಸೃಷ್ಟಿಯಾಗಿದೆ.
ಬಾಲ್ಕನಿಯಲ್ಲಿನ ನೆಟ್ಗಳನ್ನು ಕಿತ್ತು ಹಾಕುವುದು, ಒಣಗಲು ಹಾಕಿದ ಬಟ್ಟೆಗಳನ್ನು ಎಳೆದು ಹರಿದು ಹಾಕುವುದು, ಗಿಡಮರಗಳನ್ನು ಹಾನಿಗೊಳಿಸುವುದು ಮುಂತಾದ ಕಿರಿಕಿರಿ ಹೆಚ್ಚಾಗಿದ್ದು, ಕೆಲವೊಮ್ಮೆ ಫ್ರಿಜ್ ಮೇಲಿರುವ ವಸ್ತುಗಳನ್ನು ಕೆಡವುವುದು ಸೇರಿದಂತೆ ಮನೆಗಳಲ್ಲಿ ಅಸ್ವಚ್ಛತೆ ಉಂಟುಮಾಡುವ ಘಟನೆಗಳೂ ವರದಿಯಾಗಿವೆ.
ಬೆಳಗ್ಗೆ ಶಾಲೆಗೆ ಹೋಗುವಾಗ, ಸಂಜೆ ಆಟಕ್ಕೆಂದು ಅಪಾರ್ಟ್ಮೆಂಟ್ನ ಹೊರಗೆ ಇಳಿಯುವ ಮಕ್ಕಳಿಗೆ ಕೋತಿಗಳು ಭೀತಿ ಉಂಟಾಗಿದೆ. ಅಲ್ಲದೆ, ಕೆಲ ನಿವಾಸಿಗಳು ಕೋತಿಗಳು ಹಠಾತ್ ದಾಳಿ ಮಾಡಲು ಮುಂದಾಗಿರುವುದರಿಂದ ಸಣ್ಣಪುಟ್ಟ ಗಾಯಗಳೂ ಸಂಭವಿಸಿರುವುದಾಗಿಯೂ ನಿವಾಸಿಗಳು ತಿಳಿಸಿದ್ದಾರೆ.
ಕಿಟಕಿಗಳನ್ನು ತೆರೆದರೆ ತಕ್ಷಣವೇ ಕೋತಿಗಳು ಒಳಗೆ ನುಗ್ಗುತ್ತವೆ. ಒಂದು ಕ್ಷಣವೂ ಅಜಾಗರೂಕತೆ ತೋರಲು ಸಾಧ್ಯವಿಲ್ಲ ಎಂದು ನಿವಾಸಿಗಳು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಕೋತಿಗಳನ್ನು ಹಾನಿಗೊಳಿಸದೆ ಸುರಕ್ಷಿತವಾಗಿ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸುವ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಜತೆಗೆ, ನಿವಾಸಿಗಳಲ್ಲಿ ಜಾಗೃತಿ ಮೂಡಿಸಿ ಆಹಾರವನ್ನು ಬಹಿರಂಗವಾಗಿ ಇಡುವುದನ್ನು ತಪ್ಪಿಸುವಂತೆ ಸೂಚನೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನಿವಾಸಿಗಳು ಹಾಗೂ ಸ್ಥಳಿಯರು ಹಲವು ಬಾರಿ ಸಹಾಯವಾಣಿ, ಇ&ಮೇಲ್, ಮನವಿ ಪತ್ರಗಳ ಮೂಲಕ ಪಾಲಿಕೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋತಿಗಳು ಕಡಿದು, ಉಪದ್ರ ಮಾಡಿದರೆ ನಿವಾಸಿಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.