ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ದೆಹಲಿ ಮನೆಯಲ್ಲಿ ಸ್ಟಿಂಗ್ಗೆ ಬಳಕೆಯಾಗಿದ್ದ ಮೊಬೈಲ್ ಹಸ್ತಾಂತರ ಆಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪ್ರಕರಣದ ವಿಚಾರಣೆಗಾಗಿ ತನಿಖಾಧಿಕಾರಿಗಳ ತಂಡ ದೆಹಲಿಯಲ್ಲಿನ ಸಚಿವರ ಮನೆಗೆ ಹೋಗಿತ್ತು. ಅಲ್ಲಿ ರಿತೇಶ್ ಪಾಂಡೆ ಎಂಬಾತನನ್ನು ಬಂಧಿಸಿ ವಿಚಾರಣೆಗೆ ನಡೆಸಿದಾಗ ಸ್ಟಿಂಗ್ಗೆ ಬಳಕೆಯಾಗಿದ್ದ ಮೊಬೈಲ್ ಖರೀದಿ ಪ್ರಕ್ರಿಯೆ ಗೊತ್ತಾಗಿದೆ ಎಂದಿದ್ದಾರೆ.
ಪ್ರಜ್ವಲ್ ಪ್ರಸಾದ್ ಎಂಬಾತನ ಸೂಚನೆ ಮೇರೆಗೆ ಬಂಧಿತ ಆರೋಪಿ ರಿತೇಶನು, ವಿನೋದ್ ಶರ್ಮಾ ಎಂಬಾತನ ಜತೆಗೆ ದೆಹಲಿಯ ಕರೊಲ್ ಬಾಗ್ನ ಅಂಗಡಿಯೊಂದರಲ್ಲಿ ಮೊಬೈಲ್ ಖರೀದಿಸಿದ್ದ. ಆ ಮೊಬೈಲ್ ಅನ್ನು ಎಚ್.ಡಿ ಕುಮಾರಸ್ವಾಮಿಯವರ ದೆಹಲಿ ಮನೆಯಲ್ಲಿ ಪ್ರಜ್ವಲ್ ಪ್ರಸಾದ್ಗೆ ತಲುಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ತನಿಖೆ ವೇಳೆ ಪ್ರಜ್ವಲ್ ಪ್ರಸಾದ್ ಮತ್ತು ರಿತೇಶ್ ಪಾಂಡೆ ನಡುವೆ ಹಣಕಾಸು ವ್ಯವಹಾರ ನಡೆದಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ ಇವರೆಲ್ಲರೂ ಎಷ್ಟು ದಿನಗಳಿಂದ ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಮಾಹಿತಿ ನೀಡಿದ್ದಾರೆ.
ಎಲ್ಲ ಆಯಾಮಗಳಲ್ಲೂ ತನಿಖೆ ನಡೆದಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಸೀಮಂತ್ ಕುಮಾರ್ ಹೇಳಿದ್ದಾರೆ.
ಬಂಧಿತ ರಿತೇಶ್ ಪಾಂಡೆ ಹೇಳಿಕೆ ಆಧಾರದ ಮೇಲೆ ಪ್ರಜ್ವಲ್ ಪ್ರಸಾದ್ ಮತ್ತು ವಿನೋದ್ ಶರ್ಮಾಗೆ ನೋಟಿಸ್ ಜಾರಿ ಮಾಡಿದ್ದೇವೆ. ಆದರೆ ಬಂಧನ ಭೀತಿಯಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಜತೆಗೆ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾರೆ.
ರಿತೇಶ್ ಪಾಂಡೆ ಬಂಧನದಿಂದ ಇಷ್ಟು ಮಾಹಿತಿ ಲಭಿಸಿದೆ. ಇನ್ನಿಬ್ಬರ ಬಂಧನದ ಬಳಿಕ ಮತ್ತಷ್ಟು ಮಾಹಿತಿ ಹೊರಬೀಳಲಿದೆ ಎಂದು ಸೀಮಂತ್ ಕುಮಾರ್ ತಿಳಿಸಿದ್ದಾರೆ.
ಆರೋಪಿಗಳಾದ ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಎಂಬುವವರು ಸೆಪ್ಟೆಂಬರ್ 26ರಂದು ದೆಹಲಿಯಲ್ಲಿ 2 ಮೊಬೈಲ್ ಫೋನ್ಗಳನ್ನು ಖರೀದಿಸಿದ್ದರು. ಖರೀದಿಸುವ ಮೊದಲು ಅದಕ್ಕೆ ಪೆನ್ಡ್ರೈವ್ ಅಳವಡಿಸಿ ಪರೀಕ್ಷೆ ನಡೆಸಿದ್ದರು. ಅದು ಸರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ ಅಂಗಡಿಯಲ್ಲಿದ್ದ ಸಿಮ್ಕಾರ್ಡ್ ಅನ್ನೂ ಅಳವಡಿಸಿ ಪರೀಕ್ಷಿಸಿದ್ದರು ಎಂಬುದು ತನಿಖೆಯಲ್ಲಿ ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಖರೀದಿಸಿದ್ದ ಮೊಬೈಲ್ಗೆ ಹೊಸ ಸಿಮ್ಕಾರ್ಡ್ ಖರೀದಿಸಿರಲಿಲ್ಲ. ಸಿಮ್ಕಾರ್ಡ್ ಬಳಸದೆ ವೈಫೈ ಅಥವಾ ಇತರೆ ತಂತ್ರಜ್ಞಾನದ ಮೂಲಕ ವಿಡಿಯೋ ಅಪ್ಲೋಡ್ ಮಾಡಲಾಗಿದೆಯೇ ಎಂಬ ಅನುಮಾನ ತನಿಖಾಧಿಕಾರಿಗಳಿಗೆ ಎದುರಾಗಿದೆ.