new-road 
ಬೆಂಗಳೂರು

ಹೊಸ ರಸ್ತೆ ಅಭಿವೃದ್ಧಿಪಡಿಸಲು ಶಾಸಕ ಎಸ್‌.ಆರ್‌.ವಿಶ್ವನಾಥ್​​ ಮನವಿ

ಪ್ರಮುಖ ಮುಖ್ಯಾಂಶಗಳು

  • ಯಲಹಂಕ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಆಯುಕ್ತರ ಭರವಸೆ
  • ಯಲಹಂಕ ಮತಕ್ಷೇತ್ರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಬೆಂಗಳೂರು: ಯಲಹಂಕದಲ್ಲಿ ರೈಲ್ವೆ ಟರ್ಮಿನಲ್ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಹೊಸದಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಉತ್ತರ ಪಾಲಿಕೆ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.
ಯಲಹಂಕ ಮಿನಿ ವಿಧಾನಸೌಧದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಶಾಸಕರು, ಯಲಹಂಕ ರೈಲ್ವೆ ಸ್ಟೇಷನ್‌ನಿಂದ ಜಕ್ಕೂರುವರೆಗೆ ಹೊಸ ರಸ್ತೆ ನಿರ್ಮಾಣ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಅತಿದೊಡ್ಡ ರೈಲ್ವೆ ಟರ್ಮಿನಲ್ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಸಂಚಾರ ಸಿಕ್ಕು ಹೆಚ್ಚಾಗದಿರಲು ಅಗಲವಾದ ರಸ್ತೆ, ಅಂಡರ್‌ಪಾಸ್ ಹಾಗೂ ಫ್ಲೈಓವರ್ ನಿರ್ಮಿಸುವ ಅಗತ್ಯವಿದೆ ಎಂದು ತಿಳಿಸಿದರು.
ಹಾಲಿ ಪ್ರಗತಿಯಲ್ಲಿರುವ ಯಲಹಂಕ ಫ್ಲೈಓವರ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಇದಕ್ಕೆ ಸಂಬಂಧಿಸಿದ ಬಾಕಿ ಉಳಿದಿರುವ ಕೆಲಸವನ್ನು ತ್ವರಿತವಾಗಿ ಕೈಗೊಳ್ಳುವ ಜತೆಗೆ ಉತ್ತಮ ಗುಣಮಟ್ಟದ ಲೈಟಿಂಗ್ ಹಾಗೂ ಮಾದರಿ ಫ್ಲೈಓವರ್ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಅವರು ಆಯುಕ್ತರಿಗೆ ವಿನಂತಿಸಿದರು.

ಅನಧಿಕೃತ ಕಟ್ಟಡಗಳಿಗೆ ಅವಕಾಶ ನೀಡಬೇಡಿ:

ನಕ್ಷೆ ಅನುಮೋದನೆ ಇಲ್ಲದೆ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಖಾಸಗಿ ಸಂಸ್ಥೆಗಳ ನಿರ್ಮಾಣ ಕಾಮಗಾರಿಗಳೂ ಕಾನೂನುಬದ್ಧವಾಗಿಯೇ ನಡೆಯಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ಎಲ್ಲ ಜನರಿಗೂ ಒಂದೇ ರೀತಿಯ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಟ್ಟಡಗಳು, ಸಮುದಾಯ ಭವನ, ಈಜುಕೊಳ, ಶೌಚಾಲಯಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆಗೂ ಗಮನ ಹರಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಫುಡ್ ಸ್ಟ್ರೀಟ್ ಅಭಿವೃದ್ಧಿ ಯೋಜನೆ

ಯಲಹಂಕ ಉಪನಗರದಲ್ಲಿ 51 ಅಂಗಡಿಗಳನ್ನು ಒಳಗೊಂಡ ಫುಡ್ ಕೋರ್ಟ್ ಮತ್ತು ಫುಡ್ ಸ್ಟ್ರೀಟ್ ಅಭಿವೃದ್ಧಿಗೊಳಿಸುವ ಪ್ರಸ್ತಾಪ ಇದೆ. ವಿವಿಧ ರೀತಿಯ ಆಹಾರ ಮಳಿಗೆಗಳಿಗೆ ಅವಕಾಶ ಕಲ್ಪಿಸಿ, ಸಾರ್ವಜನಿಕರಿಗೆ ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ಮಾದರಿಯಾಗಿ ನಿರ್ಮಿಸಬೇಕು. ಅಳ್ಳಾಳಸಂದ್ರ ಕೆರೆಯ ಮಾದರಿಯಲ್ಲಿ ಇತರ ಕೆರೆ, ಉದ್ಯಾನಗಳನ್ನೂ ಅಭಿವೃದ್ಧಿಪಡಿಸಿ ನಾಗರಿಕರಿಗೆ ಮುಕ್ತಗೊಳಿಸಬೇಕು ಎಂದು ಶಾಸಕ ವಿಶ್ವನಾಥ್ ಸೂಚನೆ ನೀಡಿದರು.
ಸಭೆಯಲ್ಲಿ ಉತ್ತರ ಪಾಲಿಕೆಯ ಅಪರ ಆಯುಕ್ತೆ (ಅಭಿವೃದ್ಧಿ) ಆರ್.ಲತಾ, ಅಪರ ಆಯುಕ್ತ (ಕಂದಾಯ) ಪಲ್ಲವಿ, ಮುಖ್ಯ ಅಭಿಯಂತರ ಯಮುನಾ ಸೇರಿ ವಿವಿಧ ವಿಭಾಗಗಳ ಅಧಿಕಾರಿಗಳು ಹಾಜರಿದ್ದರು.

ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿರಲಿ

ಕೆಲವು ಮಾಂಸ ಹಾಗೂ ಮೀನಿನ ಅಂಗಡಿಗಳು ಮಾಂಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಖಾಲಿ ಜಾಗಗಳಲ್ಲಿ ಎಸೆಯುತ್ತಿದ್ದಾರೆ. ಇಂತಹ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಬೇಕು. ವ್ಯಾಪಾರಸ್ಥರು ಅಂಗಡಿ ಮುಂಭಾಗದ ಫುಟ್‌ಪಾತ್‌ಗಳನ್ನು ಪಾರ್ಕಿಂಗ್‌ಗೆ ಬಳಸುತ್ತಿದ್ದಲ್ಲಿ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಡಬೇಕು ಎಂದು ಶಾಸಕರು ಸೂಚಿಸಿದರು.
ಜಿಬಿಎ ನಿಯಮಾವಳಿ ಪ್ರಕಾರ ಅನುಮತಿ ಪಡೆದ ಸ್ಥಳ ಹೊರತುಪಡಿಸಿ ಇತರೆಡೆ ಹಾಕುವ ಅನಧಿಕೃತ ಬ್ಯಾನರ್/ಪೋಸ್ಟರ್‌ಗಳನ್ನು ತಕ್ಷಣ ತೆರವುಗೊಳಿಸಿ, ಸಂಬಂಧಿಸಿದವರ ವಿರುದ್ಧ ದಂಡ ವಿಧಿಸಬೇಕು. ವಿಶೇಷವಾಗಿ ಪಿಜಿ, ಅಂಗಡಿಗಳು ಹಾಗೂ ಇತರ ಖಾಸಗಿ ಸಂಸ್ಥೆಗಳವರು ಅಂಟಿಸುವ ಅನಧಿಕೃತ ಪೋಸ್ಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ಎಸ್.ಆರ್. ವಿಶ್ವನಾಥ್, ಶಾಸಕ
ಯಲಹಂಕ ಕ್ಷೇತ್ರದ ಅಭಿವೃದ್ಧಿಗೆ ಪಾಲಿಕೆಯಿಂದ ಅಗತ್ಯವಿರುವ ಎಲ್ಲ ಸಹಕಾರ ಹಾಗೂ ಬೆಂಬಲವನ್ನು ನೀಡಲಾಗುವುದು. ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಆಯಾ ಇಲಾಖೆಯ ಅಧಿಕಾರಿಗಳು ದಕ್ಷತೆ ಹಾಗೂ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗುವುದು. ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು.
- ಪಿ.ಸುನೀಲ್ ಕುಮಾರ್, ಉತ್ತರ ಪಾಲಿಕೆಯ ಆಯುಕ್ತ