ವಿಧಾನಸಭೆ ಪ್ರತಿಪಕ್ಷ ನಾಯಕ 
ಬೆಂಗಳೂರು

ಸಚಿವ-ಶಾಸಕರ ದೆಹಲಿ ಪರೇಡ್: ಆರ್.ಅಶೋಕ್ ಟೀಕೆ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಪೈಪೋಟಿ
  • ಅಂತಃಕಲದಿಂದ ರಾಜ್ಯ ಸರ್ಕಾರದಲ್ಲಿ ಗೊಂದಲ
  • ಪ್ರಧಾನಿಗೆ ಸಿಎಂ ಭೇಟಿ ರಾಜಕೀಯ ನಾಟಕ

ಬೆಂಗಳೂರು: ಮೆಕ್ಕೆಜೋಳ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ಬೀದಿಗೆ ಇಳಿದಿದ್ದಾರೆ. ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಸಚಿವ-ಶಾಸಕರು ದೆಹಲಿಗೆ ಪರೇಡ್ ನಡೆಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು. R Ashok

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಒಬ್ಬರು ಸಿಎಂ ಸ್ಥಾನ ಪಡೆಯಲು ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ. ಮತ್ತೊಬ್ಬರು ಸಿಎಂ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ. ಒಟ್ಟಾರೆ ಆಡಳಿತ ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ ಎಂದು ಛೇಡಿಸಿದರು.

ರಾಜ್ಯದ ಜನರ ಬದುಕು-ಬವಣೆ, ಆಡಳಿತ, ಅಭಿವೃದ್ಧಿ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಸಚಿವರು ತಮ್ಮ ಸ್ಯಾನ ಭದ್ರ ಮಾಡಿಕೊಳ್ಳಲು ಬಯಸಿದ್ದಾರೆ. ಆಕಾಂಕ್ಷಿಗಳು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹವಣಿಸಿದ್ದಾರೆ. ಈ ಬೆಳವಣಿಗೆ ಗಮನಿಸಿದರೆ ನವೆಂಬರ್ ಕ್ರಾಂತಿ ಹತ್ತಿರವಾದಂತಿದೆ ಎಂದು ಆರ್.ಅಶೋಕ್ ತರ್ಕಿಸಿದರು.

ಸಂಗೀತ ಕುರ್ಚಿಯಾಟ

ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಸಂಗೀತ ಕುರ್ಚಿಯಾಟ ಬಿರುಸಾಗಿದೆ. ಸಿಎಂ, ಡಿಸಿಎಂ, ಸಚಿವರು ಹಾಗೂ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡುತ್ತಿದ್ದಾರೆ. ಸಂಪುಟ ಪುನಾರಚನೆಯಾದರೆ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಕನಸು ಭಗ್ನವಾಗಲಿದೆ ಎಂದು ಭವಿಷ್ಯ ನುಡಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡುತ್ತಿರುವುದು ರಾಜಕೀಯ ನಾಟಕವಷ್ಟೇ. ಈ ಹಿಂದೆ ಜಿಎಸ್ ಟಿ ಕೌನ್ಸಿಲ್ ಸಭೆಗೆ ಸ್ವತಃ ಪ್ರಧಾನಿ ಆಹ್ವಾನಿಸಿದ್ದರು. ಸಿಎಂ ಸಿದ್ದರಾಮಯ್ಯ ಗೈರು ಹಾಜರಾಗಿ ರಾಜ್ಯಕ್ಕೆ ಮೋಸ ಮಾಡಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದರು.