ಮೆಟ್ರೋ 
ಬೆಂಗಳೂರು

ಐಪಿಎಲ್​ ನಿಮಿತ್ತ ಮೆಟ್ರೋ ಸಂಚಾರ ಅವಧಿ ವಿಸ್ತರಣೆ | metro

ಪವನ್ ಆಚಾರ್ಯ ನೀರ್ಚಾಲು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಏ.5) ನಡೆಯಲಿರುವ ಐಪಿಎಲ್​ ಟಿ-20 ಕ್ರಿಕೆಟ್​ ಪಂದ್ಯದ ವೀಕ್ಷಣೆಗೆ ಬರುವವರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ವಿವಿಧ ರ್ಟಮಿನಲ್​ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆಗೊಳಿಸಿದೆ.
ವೈಟ್​ಫೀಲ್ಡ್​ನಿಂದ (ಕಾಡುಗೋಡಿ) ರಾತ್ರಿ 12.30ಕ್ಕೆ, ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ ರ್ಟಮಿನಲ್​ಗಳಿಂದ ರಾತ್ರಿ 12.45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 12.30ಕ್ಕೆ, ಆರ್​.ವಿ.ರಸ್ತೆ ಯಿಂದ ರಾತ್ರಿ 2ಕ್ಕೆ ಕೊನೆ ರೈಲು ಸಂಚರಿಸಲಿದೆ.
ಮೆಜೆಸ್ಟಿಕ್​ನ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್​ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1.30ಕ್ಕೆ ಕೊನೆಯ ರೈಲು ಹೊರಡಲಿದೆ.
ನಮ್ಮ ಮೆಟ್ರೊ 44 ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ. ಈ ಪಾರ್ಕಿಂಗ್​ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಕ್ರೀಡಾಂಗಣಕ್ಕೆ ಮೆಟ್ರೋದಲ್ಲಿ ಸಂಚರಿಸಬಹುದು. ಇದರಿಂದ ವಾಹನದಟ್ಟಣೆ ಕಡಿಮೆಯಾಗಲಿದೆ. ಐಪಿಎಲ್​ ಕ್ರಿಕೆಟ್​ ಇರುವ ದಿನಗಳಲ್ಲಿ ದ್ವಿಚಕ್ರ ವಾಹನಗಳಿಗೆ 30 ರೂ. ಹಾಗೂ ಕಾರುಗಳಿಗೆ 60 ರೂ.ಶುಲ್ಕ ನಿಗದಿ ಮಾಡಲಾಗಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಎಲ್​ ಟಿಕೆಟ್​ ಇದ್ದರೆ ಸಂಚಾರ ಉಚಿತ: ಐಪಿಎಲ್​ ಟಿ-20 ಟಿಕೆಟ್​ ಇರುವವರು ಅಂದು 'ನಮ್ಮ ಮೆಟ್ರೋದಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಎರಡೂ ಕಡೆಯ ಪ್ರಯಾಣಕ್ಕೆ ಐಪಿಎಲ್​ ಪಂದ್ಯದ ಟಿಕೆಟ್​ಗಳಲ್ಲಿ "ನಮ್ಮ ಮೆಟ್ರೊ' ಕ್ಯೂಆರ್​ ಕೋಡ್​ ಮುದ್ರಿತವಾಗಿರುತ್ತದೆ. ಡಿಜಿಟಲ್​ ಐಪಿಎಲ್​ ಟಿಕೆಟ್​ಗಳಲ್ಲಿಯೂ ಲಭ್ಯವಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.