- ಕಾರ್ಯಕ್ಷಮತೆ, ವ್ಯವಸ್ಥೆಗಳ ಪರಸ್ಪರ ಸಂಯೋಜನೆ ಪರಿಶೀಲನೆ
- ಏಪ್ರಿಲ್ ಮಧ್ಯಭಾಗದೊಳಗೆ ಪೂರ್ಣವಾಗುವ ನಿರೀಕ್ಷೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಇರುವ 7.5 ಕಿಮೀ ಗುಲಾಬಿ ಮಾರ್ಗದಲ್ಲಿ ರೋಲಿಂಗ್ ಸ್ಟಾಕ್ ಪರೀಕ್ಷೆಗಳನ್ನು 11ರಿಂದ ಆರಂಭಿಸಲು ಬಿಎಂಆರ್ಸಿಎಲ್ ತೀರ್ಮಾನಿಸಿದೆ. ಈ ಪರೀೆಗಳು ಏಪ್ರಿಲ್ ಮಧ್ಯಭಾಗದೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ.
ವಾಣಿಜ್ಯ ಸಂಚಾರ ಮಾಡುವ ಮೊದಲು ಕೈಗೊಳ್ಳಲಾಗುವ ಈ ಮುಖ್ಯ ಪರೀಕ್ಷೆಗಳು ರೈಲುಗಳ ಕಾರ್ಯಕ್ಷಮತೆ ಹಾಗೂ ವ್ಯವಸ್ಥೆಗಳ ಪರಸ್ಪರ ಸಂಯೋಜನೆಯ ಸಮಗ್ರ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಶಾಸನಬದ್ಧ ಅನುಮೋದನೆಗಳನ್ನು ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿದೆ. ಮೇಲ್ಕಂಡ ಅವಧಿಯಲ್ಲಿ ಟ್ರಾಕ್ಷನ್ ಮತ್ತು ಬ್ರೇಕ್, ಆಸಿಲೇಷನ್, ಸಿಗ್ನಲಿಂಗ್, ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳೊಂದಿಗೆ ಏಕೀಕರಣ ಸೇರಿ ಹಲವು ಪರೀಕ್ಷೆಗಳು ನಡೆಸಲಾಗುತ್ತವೆ.
ಬಿಇಎಂಎಲ್ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಕೋಚ್ಗಳನ್ನು ತಯಾರಿಸಲಿದ್ದು, ಅವುಗಳಲ್ಲಿ ನೀಲಿ ಮತ್ತು ಗುಲಾಬಿ ಮಾರ್ಗದ ರೈಲುಗಳು ಸೇರಿವೆ. ಸಂಪೂರ್ಣ ವಿನ್ಯಾಸ, ಇಂಜಿನಿಯರಿಂಗ್ ಮತ್ತು ತಯಾರಿಕಾ ಕಾರ್ಯಗಳು ಬೆಂಗಳೂರಿನಲ್ಲಿರುವ ಬಿಇಎಂಎಲ್ ಘಟಕದಲ್ಲೇ ನಡೆಯುತ್ತಿದ್ದು, ನಿಗದಿಯಂತೆ ಹಲವು ಹಂತಗಳ ಪರೀಕ್ಷೆ, ತಾಂತ್ರಿಕ ಪರಿಶೀಲನೆ ಮತ್ತು ಪ್ರಮಾಣೀಕರಣಕ್ಕೆ ಒಳಪಡುವುದಲ್ಲದೆ, ಸುಮಾರು 15 ವರ್ಷಗಳವರೆಗೆ ನಿರ್ವಹಣಾ ಸಾಮರ್ಥ್ಯ ಹೊಂದಲಿದೆ.
ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯ ಮೂಲಕ ಬಿಇಎಂಎಲ್ಗೆ ಲಭ್ಯವಾದ 3,177 ಕೋಟಿ ರೂ. ಮೌಲ್ಯದ ಒಡಂಬಡಿಕೆಯಂತೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಚಾಲಕರಹಿತ ಮೆಟ್ರೋ ಮಾದರಿಯ ಅನಾವರಣವು ಬಿಇಎಂಎಲ್ನ ಮುಂದಿನ ತಲೆಮಾರಿನ ನಗರ ಸಾರಿಗೆ ಪರಿಹಾರಗಳನ್ನು ಒದಗಿಸುವ ಪ್ರಯತ್ನದಲ್ಲಿ ದೊಡ್ಡ ಯೋಜನೆಯಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಇಎಂಎಲ್ ಅಭಿವೃದ್ಧಿಪಡಿಸಿದ ಚಾಲಕರಹಿತ ಮೆಟ್ರೋ ಟ್ರೇನ್ಸೆಟ್ನ ಒಳಾಂಗಣವನ್ನು ಆಧುನಿಕವಾಗಿ ನಿರ್ಮಿಸಲಾಗಿದೆ. ಅಗಲ ಗ್ಯಾಂಗ್ವೇಗಳು, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಸುಧಾರಿತ ಸುಲಭ ಪ್ರವೇಶ ಸೌಲಭ್ಯಗಳು ಹಾಗೂ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿವೆ. ಚಿಬಿಟಿಸಿ ತಂತ್ರಜ್ಞಾನಕ್ಕೆ ಹೊಂದಿಕೊಂಡಿರುವ ಈ ಟ್ರೇನ್ಸೆಟ್ ಸಂಪೂರ್ಣ ಚಾಲಕರಹಿತ ಸಂಚಲನಕ್ಕೆ ಸಿದ್ಧವಾಗಿರುವುದೇ ಪ್ರಮುಖ ವಿಶೇಷತೆಯಾಗಿದೆ. ಮಾದರಿ ರೋಲ್ಔಟ್ನೊಂದಿಗೆ ಯೋಜನೆಗೆ ಸಂಬಂಧಿಸಿದ ವಿತರಣಾ ಹಂತಗಳು ಆರಂಭವಾಗಿದ್ದು, ಸರಣಿ ಉತ್ಪಾದನೆ ಒಪ್ಪಂದಕ್ಕ ಅನುಸಾರವಾಗಿ ಮುಂದುವರಿಯಲಿದೆ.
ತಾವರೇಕೆರೆ, ಜಯದೇವ ಆಸ್ಪತ್ರೆ, ಡೇರಿ ಸರ್ಕಲ್, ಎಂ.ಜಿ. ರಸ್ತೆ, ಕಳೇನ ಅಗ್ರಹಾರ, ನಾಗವಾರ ಮುಂತಾದ ಪ್ರಮುಖ ವಲಯಗಳನ್ನು ಸಂಪರ್ಕಿಸುತ್ತಿರುವ ಗುಲಾಬಿ ಮಾರ್ಗ, 21.26 ಕಿ.ಮೀ ಉದ್ದವಿದ್ದು, 18 ನಿಲ್ದಾಣಗಳನ್ನು ಒಳಗೊಂಡಿದೆ. ಎತ್ತರಿಸಿದ ನಿಲ್ದಾಣಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಒಟ್ಟಾರೆ ಈ ಯೋಜನೆಯನ್ನು ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಉದ್ದೇಶದಿಂದ ರೂಪಿಸಲಾಗಿದೆ.