- ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲು ಮುಂದಾದ ಬಿಎಂಆರ್ಸಿಎಲ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಮೊದಲ ಹಂತ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಬಿಎಂಆರ್ಸಿಎಲ್ ಮುಂದಾಗಿದೆ.
ಈ ಪಾರ್ಕಿಂಗ್ ಕೇಂದ್ರಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಗಳಿಂದ ಟೆಂಡರ್ (ಆರ್ಎಫ್ಪಿ) ಆಹ್ವಾನಿಸಲಾಗಿದೆ.
ದಕ್ಷಿಣ ಬೆಂಗಳೂರಿನ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗದಲ್ಲಿರುವ ತಾವರೆಕೆರೆ, ಐಐಎಂಬಿ, ಹುಳಿಮಾವು ಹಾಗೂ ಕಾಳೇನ ಅಗ್ರಹಾರ ನಿಲ್ದಾಣಗಳಲ್ಲಿ ಈ ಪಾರ್ಕಿಂಗ್ ಸೌಲಭ್ಯ ಲಭ್ಯವಾಗಲಿದೆ. ಒಟ್ಟಾರೆ 575 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ತಾವರೆಕೆರೆ, ಐಐಎಂಬಿ ಹಾಗೂ ಹುಳಿಮಾವು ನಿಲ್ದಾಣಗಳಲ್ಲಿ ತಲಾ 155 ಬೈಕ್ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕಾಳೇನ ಅಗ್ರಹಾರ ನಿಲ್ದಾಣದಲ್ಲಿ 110 ಬೈಕ್ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಈ ಕೇಂದ್ರಗಳನ್ನು ಒಂದು ವರ್ಷದ ಅವಧಿಗೆ ನಿರ್ವಹಣೆ ಮಾಡಬೇಕಿದ್ದು, ಪ್ರತಿ ನಿಲ್ದಾಣಕ್ಕೆ 10 ಲಕ್ಷ ರೂ. ಪರವಾನಗಿ ಶುಲ್ಕ ನಿಗದಿಪಡಿಸಲಾಗಿದೆ. 12 ಲಕ್ಷ ರೂ.ಗಿಂತ ಹೆಚ್ಚಿನ ನಿವ್ವಳ ಆಸ್ತಿ ಹೊಂದಿರುವ ಸಂಸ್ಥೆಗಳು ಮಾತ್ರ ಟೆಂಡರ್ನಲ್ಲಿ ಭಾಗವಹಿಸಲು ಅರ್ಹರಾಗಿವೆ. ಮುಂದಿನ ತಿಂಗಳು ಕಾಳೇನ ಅಗ್ರಹಾರ& ತಾವರೆಕೆರೆ ನಡುವಿನ ಎತ್ತರಿಸಿದ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ತಾವರೆಕೆರೆ& ನಾಗವಾರ ನಡುವಿನ ಭೂಗತ ಮಾರ್ಗ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
ಬಿಎಂಆರ್ಸಿಎಲ್ ಮುಂದಿನ ಹಂತದಲ್ಲಿ ಗುಲಾಬಿ ಮಾರ್ಗದ ಎಲ್ಲ ಎತ್ತರಿಸಿದ ಮೆಟ್ರೋ ನಿಲ್ದಾಣಗಳಲ್ಲೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದೆ. ಈಗಾಗಲೇ ನೇರಳೆ ಹಾಗೂ ಹಸಿರು ಮಾರ್ಗದ ಹಲವು ನಿಲ್ದಾಣಗಳಲ್ಲಿ ಪಾರ್ಕಿಂಗ್ ಕೊರತೆಯಿಂದ ಪ್ರಯಾಣಿಕರು ಎದುರಿಸುತ್ತಿರುವ "ಲಾಸ್ಟ್ ಮೈಲ್ ಕನೆಕ್ಟಿವಿಟಿ' ಸಮಸ್ಯೆಗೆ ಈ ಕ್ರಮ ಪರಿಹಾರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಪ್ರಯಾಣಿಕರಿಗಾಗಿ ಬಿಎಂಆರ್ಸಿಎಲ್ ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸಿದೆ. ಮೊದಲ ನಾಲ್ಕು ಗಂಟೆಗಳಿಗೆ 15 ರೂ., ನಂತರ ಪ್ರತಿ ಹೆಚ್ಚುವರಿ ಗಂಟೆಗೆ 5 ರೂ. ಹಾಗೂ ಒಂದು ದಿನಪೂರ್ತಿ ದ್ವಿಚಕ್ರ ವಾಹನ ನಿಲುಗಡೆಗೆ 30 ರೂ. ಶುಲ್ಕ ವಿಧಿಸಲಾಗುತ್ತದೆ. ಸೈಕಲ್ಗಳಿಗೆ ಪಾರ್ಕಿಂಗ್ ಉಚಿತವಾಗಿರುತ್ತದೆ.