- ಆಗಸ್ಟ್ನಲ್ಲಿ 2.71 ಕೋಟಿ ಪ್ರಯಾಣಿಕರ ಸಂಚಾರ
- 309.37 ಲಕ್ಷ ರೂ. ಮಾಸಿಕ ಬೋರ್ಡಿಂಗ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರ ಸಾರಿಗೆ ವ್ಯವಸ್ಥೆಯ ಪ್ರಮುಖ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಆಗಸ್ಟ್ನಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ. ಒಟ್ಟು 96.1 ಕಿ.ಮೀ. ವ್ಯಾಪ್ತಿಯ ಮೆಟ್ರೋ ಜಾಲದಲ್ಲಿ ಆಗಸ್ಟ್ನಲ್ಲಿ 2.71 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಮೆಟ್ರೋ ಸೇವೆಯ ಮೇಲಿನ ಜನರ ಅವಲಂಬನೆ ಮತ್ತಷ್ಟು ಹೆಚ್ಚಿರುವುದು ಖಚಿತವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಇಎಲ್) ತಿಳಿಸಿದೆ.
ಮೆಟ್ರೋ ರೈಲುಗಳು ಶೇ. 99.77 ಸಮಯಪಾಲನೆ ಕಾಯ್ದುಕೊಂಡಿದ್ದು, ಪ್ರಯಾಣಿಕರಿಗೆ ವಿಶ್ವಾಸಾರ್ಹ ಸೇವೆ ಒದಗಿಸುವಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ. ಇದೇವೇಳೆ ಒಟ್ಟು 309.37 ಲಕ್ಷ ಮಾಸಿಕ ಬೋರ್ಡಿಂಗ್ಗಳು ದಾಖಲಾಗಿವೆ. ಆಗಸ್ಟ್ 14ರಂದು ಒಂದೇ ದಿನದಲ್ಲಿ 27,119 ಸಂಚಾರಗಳು ನಡೆದಿದ್ದು, ಈ ಅವಧಿಯಲ್ಲಿ 9,97,773 ಸರಣಿ ದೈನಂದಿನ ಬೋರ್ಡಿಂಗ್ಗಳು ಹಾಗೂ 11,87,825 ಗರಿಷ್ಠ ದೈನಂದಿನ ಬೋರ್ಡಿಂಗ್ಗಳು ದಾಖಲಾಗಿವೆ.
ದಟ್ಟಣೆಯ ಸಮಯದಲ್ಲಿ ಹೆಚ್ಚುವರಿ ರೈಲು:
ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಉದ್ದೇಶದಿಂದ ನೇರಳೆ ಮಾರ್ಗದಲ್ಲಿ 3.3 ನಿಮಿಷ, ಹಸಿರು ಮಾರ್ಗದಲ್ಲಿ 5 ನಿಮಿಷ ಹಾಗೂ ಹಳದಿ ಮಾರ್ಗದಲ್ಲಿ 6 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಒದಗಿಸಲಾಗಿದೆ. ಸೆ.15ರಿಂದ ಹಳದಿ ಮಾರ್ಗದ ರೈಲುಗಳ ಸಂಖ್ಯೆ 10ರಿಂದ 12ಕ್ಕೆ ಹೆಚ್ಚಿಸುವುದರ ಜತೆಗೆ, ದಟ್ಟಣೆಯ ಸಮಯದ ಅಂತರವನ್ನು 7ರಿಂದ 6 ನಿಮಿಷಕ್ಕೆ ಇಳಿಸಲು ಕ್ರಮ ಕೈಗೊಳ್ಳಲಾಗಿದೆ.
ಆಗಸ್ಟ್ನಲ್ಲಿ 27,119 ಸಿಬ್ಬಂದಿ ಅಥವಾ ಸಂಬಂಧಿತ ಸಂಖ್ಯೆಯ ಸೇವಾ ಅಂಶಗಳ ಉಲ್ಲೇಖದೊಂದಿಗೆ, ಪ್ರತಿ 60 ಸಾವಿರ ಸಂಚಾರಗಳಿಗೆ 62 ಘಟನೆಗಳು ದಾಖಲಾಗಿದ್ದು, ಘಟನೆ ಪ್ರಮಾಣ ಶೇ. 0.33 ಎಂದು ಮಾಹಿತಿ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಡಿಜಿಟಲ್ ಟಿಕೆಟ್ಗೆ ಹೆಚ್ಚಿದ ಒಲವು
ಟಿಕೆಟ್ ವಹಿವಾಟಿನಲ್ಲೂ ಡಿಜಿಟಲ್ ಪಾವತಿಗೆ ಪ್ರಯಾಣಿಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್ ಮೂಲಕ ಶೇ. 30.88, ಕ್ಯೂಆರ್ ಟಿಕೆಟ್ ಮೂಲಕ ಶೇ. 25.23 ಹಾಗೂ ಎನ್ಸಿಎಂಸಿ ಕಾರ್ಡ್ ಮೂಲಕ ಶೇ. 15.88 ವಹಿವಾಟು ನಡೆದಿದೆ. ಒಟ್ಟು 49,429 ಎನ್ಸಿಎಂಸಿ ಕಾರ್ಡ್ಗಳು ಮಾರಾಟವಾಗಿವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.