ಮೆಟ್ರೋ 
ಬೆಂಗಳೂರು

ಮೆಟ್ರೋ ಬಂತು... ನಿಲ್ದಾಣಕ್ಕೆ ಹೋಗೋ ದಾರಿ ಎಲ್ಲಿ?

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಗುಲಾಬಿ ಮಾರ್ಗಕ್ಕೆ ಈ ತಿಂಗಳೇ ಚಾಲನೆ ಸಾಧ್ಯತೆ
  • ಕಾಳೇನ ಅಗ್ರಹಾರ-ತಾವರೆಕೆರೆ 7 ಕಿ.ಮೀ. ಮಾರ್ಗ ಸಜ್ಜು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಲವು ಗಡುವುಗಳು ತಪ್ಪಿದ ಬಳಿಕ ನಮ್ಮ ಮೆಟ್ರೋದ ಬಹುನಿರೀಕ್ಷಿತ ಗುಲಾಬಿ ಮಾರ್ಗ ಕಾಳೇನ ಅಗ್ರಹಾರ&ತಾವರೆಕೆರೆ ನಡುವಿನ 7 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ಈ ತಿಂಗಳೇ ರೈಲು ಸಂಚಾರ ಆರಂಭಿಸುವ ವಿಶ್ವಾಸವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್​ಸಿಎಲ್​) ವ್ಯಕ್ತಪಡಿಸಿದೆ. ಆದರೆ, ಮೆಟ್ರೋ ಸೇವೆ ಆರಂಭಕ್ಕೆ ಸಿದ್ಧವಾಗುತ್ತಿದ್ದರೂ ಪ್ರಯಾಣಿಕರು ನಿಲ್ದಾಣ ತಲುಪುವ ಕೊನೆಯ ಮೈಲಿ ಸಂಪರ್ಕ ವ್ಯವಸ್ಥೆ ಮಾತ್ರ ಇನ್ನೂ ಅಪೂರ್ಣವಾಗಿದೆ.
ಬನ್ನೇರುಘಟ್ಟ ರಸ್ತೆಯ ಹಲವು ಭಾಗಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲ. ಇರುವ ಕಡೆ ಕಸ, ಮಣ್ಣು ಹಾಗೂ ತೆರೆದ ಚರಂಡಿಗಳಿಂದ ಪಾದಚಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ವಾಹನ ದಟ್ಟಣೆಯ ರಸ್ತೆಯಲ್ಲೇ ನಡೆದು ಹೋಗುವ ಅನಿವಾರ್ಯತೆ ಹಲವೆಡೆ ಇದೆ. ಹೀಗಾಗಿ ರೈಲು ಸೇವೆ ಆರಂಭಕ್ಕೂ ಮುನ್ನ ರಸ್ತೆ, ಪಾದಚಾರಿ ಮಾರ್ಗ ಹಾಗೂ ನಿಲ್ದಾಣ ಸಂಪರ್ಕ ವ್ಯವಸ್ಥೆ ಸುಧಾರಿಸುವ ಅಗತ್ಯ ಎದುರಾಗಿದೆ.
ಕಾಳೇನ ಅಗ್ರಹಾರದಲ್ಲಿ ಅವ್ಯವಸ್ಥೆ:
ನೈಸ್​ರಸ್ತೆ ಕಡೆಯಿಂದ ಕಾಳೇನ ಅಗ್ರಹಾರದತ್ತ ಸಾಗುವ ರಸ್ತೆಯಲ್ಲಿ ಹಲವು ಕಡೆ ಪಾದಚಾರಿ ಮಾರ್ಗವೇ ಕಾಣುವುದಿಲ್ಲ. ಗುಂಡಿ-&ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಪಾದಚಾರಿಗಳು ಅಪಾಯ ಎದುರಿಸುತ್ತಿದ್ದಾರೆ. ಹಿಮಗಿರಿ ಮುಖ್ಯರಸ್ತೆ&ಬನ್ನೇರುಘಟ್ಟ ರಸ್ತೆ ಜಂಕ್ಷನ್​ನಲ್ಲಿ ತೆರೆದ ಚರಂಡಿ ಪಕ್ಕದಲ್ಲೇ ತಾತ್ಕಾಲಿಕ ಬಸ್​ ನಿಲ್ದಾಣವಿದ್ದು, ರಸ್ತೆ ಬದಿಯಲ್ಲಿ ಕಸದ ರಾಶಿ ಕಂಡುಬರುತ್ತಿದೆ.
ರಾಯಲ್​ ಮೀನಾಕ್ಷಿ ಮಾಲ್​ ಜಂಕ್ಷನ್​ ಬಳಿಯೂ ಪಾದಚಾರಿ ಮಾರ್ಗದ ಸಮಸ್ಯೆ ಮುಂದುವರಿದಿದೆ. ಕೆಲವು ಕಡೆ ಮೆಟ್ರೋ ಕಾಮಗಾರಿಯಿಂದ ಪಾದಚಾರಿ ಮಾರ್ಗದ ಜಾಗ ಕಿರಿದಾಗಿದ್ದು, ಮತ್ತೊಂದೆಡೆ ಕಸ ಸುರಿಯಲಾಗಿದೆ.
ಹುಳಿಮಾವಿನಲ್ಲೂ ಸಮಸ್ಯೆ:
ಹುಳಿಮಾವು ಮೆಟ್ರೋ ನಿಲ್ದಾಣದ ಬಳಿ ಬಸ್​ಗಳು ನಿಲ್ಲುತ್ತಿದ್ದರೂ ಸಮರ್ಪಕ ಬಸ್​ ತಂಗುದಾಣವಿಲ್ಲ. ಹುಳಿಮಾವು ಮುಖ್ಯರಸ್ತೆ, ಬಿಡಿಎ 80 ಅಡಿ ರಸ್ತೆ ಹಾಗೂ ಅರಕೆರೆ ರಸ್ತೆಯಿಂದ ನಿಲ್ದಾಣ ತಲುಪಲು ಸೂಕ್ತ ಪಾದಚಾರಿ ಮಾರ್ಗದ ಕೊರತೆಯಿದೆ. ಐಐಎಂಬಿ ಸಮೀಪದ ನಿಲ್ದಾಣಕ್ಕೆ ಬಿಳೇಕಹಳ್ಳಿ&ಐಐಎಂಬಿ ಎಂದು ಹೆಸರಿಡಬೇಕೆಂಬ ಸ್ಥಳಿಯರ ಬೇಡಿಕೆಯೂ ಈಡೇರಿಲ್ಲ. ಬಿಳೇಕಹಳ್ಳಿ ನಿವಾಸಿಗಳ ಪ್ರಕಾರ, ದೇವರಚಿಕ್ಕನಹಳ್ಳಿ ರಸ್ತೆ ಸೇರಿ ಹಲವು ಸಂಪರ್ಕ ರಸ್ತೆಗಳಲ್ಲೂ ಪಾದಚಾರಿಗಳಿಗೆ ಸುರಕ್ಷಿತ ದಾರಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಜಯದೇವದಲ್ಲಿ 3ನೇ ಇಂಟರ್​ಚೇಂಜ್​
ಮೆಜೆಸ್ಟಿಕ್​ ಹಾಗೂ ಆರ್​.ವಿ. ರಸ್ತೆಯ ಬಳಿಕ ಜಯದೇವ ನಿಲ್ದಾಣ ನಗರದ ಮತ್ತೊಂದು ಪ್ರಮುಖ ಇಂಟರ್​ಚೇಂಜ್​ ಆಗಲಿದೆ. ಗುಲಾಬಿ ಹಾಗೂ ಹಳದಿ ಮಾರ್ಗ ಸಂಪರ್ಕ ಕಲ್ಪಿಸುವ ಈ ನಿಲ್ದಾಣ 6 ಹಂತಗಳಲ್ಲಿ ನಿಮಾರ್ಣಗೊಂಡಿದೆ. ಡಬಲ್​ ಡೆಕ್ಕರ್​ ಮೇಲ್ಸೇತುವೆಯೂ ಇಲ್ಲಿಂದ ಹಾದುಹೋಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ತಾವರೆಕೆರೆ, ಐಐಎಂಬಿ, ಹುಳಿಮಾವು ಹಾಗೂ ಕಾಳೇನ ಅಗ್ರಹಾರ ನಿಲ್ದಾಣಗಳಲ್ಲಿ ಒಟ್ಟು 575 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ.