ಮೆಟ್ರೋ 
ಬೆಂಗಳೂರು

ಮೆಟ್ರೋ ಹಳೇ ರೈಲುಗಳ ಕಾರ್ಯಕ್ಷಮತೆ ತಪಾಸಣೆ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಸೇವೆ ಆರಂಭಿಸಿ 15 ವರ್ಷಗಳ ಬಳಿಕ ಹೊಸ ಹೆಜ್ಜೆ
  • ಹಂತಹಂತವಾಗಿ ತಾಂತ್ರಿಕ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜಧಾನಿಯ ಸಾರಿಗೆ ವ್ಯವಸ್ಥೆಯ ಜೀವನಾಡಿ ಎನಿಸಿರುವ ನಮ್ಮ ಮೆಟ್ರೋ ರೈಲುಗಳು 15 ವರ್ಷಗಳ ಸೇವಾ ಹಂತ ತಲುಪಿದ್ದು, ಇದೀಗ ಹಳೆಯ ರೈಲುಗಳಿಗೆ ಬೃಹತ್​ ಪುನಶ್ಚೇತನ ಕಾರ್ಯಾಚರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಸಜ್ಜಾಗಿದೆ.
2011ರಲ್ಲಿ ಸೇವೆ ಆರಂಭಿಸಿದ ರೈಲುಗಳ ತಾಂತ್ರಿಕ ಸ್ಥಿತಿಗತಿ ಪರಿಶೀಲಿಸಿ, ಅಗತ್ಯವಿರುವ ಬಿಡಿಭಾಗಗಳ ಬದಲಾವಣೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಸಂಚರಿಸುತ್ತಿರುವ ಹಳೆಯ ರೈಲುಗಳ ದುರಸ್ತಿಗೆ ಆದ್ಯತೆ ನೀಡಲಾಗುತ್ತದೆ. ಈ ಮಾರ್ಗಗಳಲ್ಲಿನ ಹಲವು ರೈಲುಗಳು ಈಗಾಗಲೇ 10 ಲಕ್ಷ ಕಿ.ಮೀ.ಗೂ ಅಧಿಕ ಸಂಚರಿಸಿರುವ ಹಿನ್ನೆಲೆ ಪರಿಶೀಲನೆ ಅಗತ್ಯವಾಗಿದೆ.
57 ರೈಲುಗಳಿಗೆ ಮೊದಲ ಆದ್ಯತೆ: 
ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 57 ರೈಲುಗಳು ಸಂಚರಿಸುತ್ತಿವೆ. ಇದೇ ವೇಳೆ, ಸಿಆರ್​ಆರ್​ಸಿ& ತಿತಾಗಢ ಒಕ್ಕೂಟ ನಿರ್ಮಿಸಿರುವ ಹೊಸ ರೈಲುಗಳ ಸೇರ್ಪಡೆ ಪ್ರಕ್ರಿಯೆಯೂ ನಡೆಯುತ್ತಿದೆ. ಈಗಾಗಲೇ ನಾಲ್ಕು ಹೊಸ ರೈಲುಗಳು ಬಂದಿದ್ದು, ಮುಂದಿನ ಹಂತದಲ್ಲಿ ಇನ್ನೂ 21 ರೈಲುಗಳು ಹಸಿರು ಮಾರ್ಗದ ಪಡೆ ಸೇರಲಿವೆ. ಹೊಸ ರೈಲುಗಳ ಸೇರ್ಪಡೆಯಿಂದ ಹಳೆಯ ರೈಲುಗಳನ್ನು ಹಂತ ಹಂತವಾಗಿ ಸೇವೆಯಿಂದ ಹಿಂದಕ್ಕೆ ಪಡೆದು ನಿರ್ವಹಣೆ ನಡೆಸಲು ಬಿಎಂಆರ್​ಸಿಎಲ್​ಗೆ ಹೆಚ್ಚಿನ ಅವಕಾಶ ಸಿಗಲಿದೆ. ಹಸಿರು ಮಾರ್ಗದಲ್ಲಿರುವ ಕೆಲವು ಹಳೆಯ ರೈಲುಗಳನ್ನು ಮುಂದಿನ ದಿನಗಳಲ್ಲಿ ನೇರಳೆ ಮಾರ್ಗಕ್ಕೆ ವರ್ಗಾಯಿಸುವ ಸಾಧ್ಯತೆಯೂ ಇದೆ.
ಏನೆಲ್ಲ ಪರಿಶೀಲನೆ?: 
ಸಮಗ್ರ ತಾಂತ್ರಿಕ ತಪಾಸಣೆ (ಮಿಡ್​ಲೈಫ್​ ಓವರ್​&ಹಾಲ್​) ರೈಲಿನ ಪ್ರತಿಯೊಂದು ಪ್ರಮುಖ ವ್ಯವಸ್ಥೆಯನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಹಾಳಾದ ಅಥವಾ ಸವೆದಿರುವ ಬಿಡಿಭಾಗಗಳನ್ನು ಬದಲಾಯಿಸಲಾಗುತ್ತದೆ. ಟ್ರಾಕ್ಷನ್​ ಮೋಟಾರ್​ ಹಾಗೂ ಡ್ರೆವ್​ ವ್ಯವಸ್ಥೆ, ವಿದ್ಯುತ್​ ಉಪಕರಣ, ಕೇಬಲ್​ ಮತ್ತು ಬ್ಯಾಟರಿ, ಚಕ್ರ, ಆ್ಯಕ್ಸಲ್​ ಹಾಗೂ ಬ್ರೇಕ್​ ವ್ಯವಸ್ಥೆ, ಬಾಗಿಲು ಮತ್ತು ಪ್ರಯಾಣಿಕರ ಸುರಕ್ಷತಾ ವ್ಯವಸ್ಥೆ, ಹವಾನಿಯಂತ್ರಣ ಹಾಗೂ ಗಾಳಿ ಸಂಚಾರ ವ್ಯವಸ್ಥೆ, ಸಿಗ್ನಲಿಂಗ್​, ನಿಯಂತ್ರಣ ಮತ್ತು ಎಲೆಕ್ಟ್ರಾನಿಕ್​, ಆಸನ, ಒಳಾಂಗಣ ಹಾಗೂ ಬೋಗಿಯ ಇತರೆ ಉಪಕರಣ ವ್ಯವಸ್ಥೆ ಪರಿಶೀಲನೆಗೆ ಒಳಪಡಲಿದೆ.

ಒಂದೊಂದು ರೈಲಿಗೆ 15 ದಿನ

ಮಿಡ್​ಲೈಫ್​ ಓವರ್​ಹಾಲ್​ ಅನ್ನು ಹಂತ ಹಂತವಾಗಿ ನಡೆಸಲು ಉದ್ದೇಶಿಸಲಾಗಿದೆ. ಒಂದೇ ಬಾರಿಗೆ ಹೆಚ್ಚಿನ ರೈಲುಗಳನ್ನು ಸೇವೆಯಿಂದ ಹೊರಗಿಡದೆ, ಪ್ರತಿ ರೈಲಿನ ನಿರ್ವಹಣೆ ಹಾಗೂ ಪರೀಕ್ಷಾ ಪ್ರಕ್ರಿಯೆಗೆ ಸರಾಸರಿ 15 ದಿನ ಬೇಕಾಗುವ ನಿರೀಕ್ಷೆ ಇದೆ. ಹೊಸ ರೈಲುಗಳ ಸೇರ್ಪಡೆ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹೊಸ ರೈಲುಗಳು ಸೇವೆಗೆ ಲಭ್ಯವಾಗುವುದರಿಂದ ಹಳೆಯ ರೈಲುಗಳನ್ನು ಒಂದೊಂದಾಗಿ ನಿರ್ವಹಣೆಗೆ ಕಳುಹಿಸಿಯೂ ದಿನನಿತ್ಯದ ಮೆಟ್ರೋ ಸೇವೆ ಮುಂದುವರಿಸಲು ಸಾಧ್ಯವಾಗಲಿದೆ.