- ಅಕ್ಟೋಬರ್ನಲ್ಲಿ ಆರಂಭಿಸಲು ಜಿಬಿಎ ಯೋಜನೆ
- ಮೆಟ್ರೋ ನೀಲಿ ಮಾರ್ಗ ಚಾಲನೆ ಮತ್ತಷ್ಟು ವಿಳಂಬ ಸಾಧ್ಯತೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಿಲ್ಕ್ಬೋರ್ಡ್ನಿಂದ ಕೆ.ಆರ್. ಪುರ ಸಂಪರ್ಕಿಸುವ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಮುಕ್ತಾಯದ ಗಡುವು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಹೊರವರ್ತುಲ ರಸ್ತೆಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ವೈಟ್ಟಾಪಿಂಗ್ ಕೈಗೆತ್ತಿಕೊಳ್ಳಲು ಮುಂದಾಗಿರುವುದು ಈ ಭಾಗದಲ್ಲಿ ಸಂಚಾರ ಸಂಕಷ್ಟ ಉಲ್ಬಣಿಸುವ ಆತಂಕ ಮೂಡಿಸಿದೆ.
ಹೊರವರ್ತುಲ ರಸ್ತೆಯಲ್ಲಿ ಜಿಬಿಎ ವೈಟ್ಟಾಪಿಂಗ್ ಕಾಮಗಾರಿ ಯೋಜನೆಯ ಪ್ರಸ್ತಾವನೆಗೆ ಶೀಘ್ರದಲ್ಲೇ ಸಚಿವ ಸಂಪುಟದ ಅನುಮೋದನೆ ನೀಡುವ ನಿರೀಕ್ಷೆಯಿದೆ. ಕಾಮಗಾರಿ ಅವಧಿಯಲ್ಲಿ ಒಆರ್ಆರ್ ವ್ಯಾಪ್ತಿಯ ಕಂಪನಿಗಳಲ್ಲಿ ಶೇ.50 ವರ್ಕ್ ಫ್ರಂ ಹೋಮ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಪರಿಶೀಲಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಆರ್ಆರ್ ಸುತ್ತಮುತ್ತ ನೂರಾರು ಐಟಿ ಕಂಪನಿಗಳಲ್ಲಿ ಅಂದಾಜು 8&10 ಲಕ್ಷ ಮಂದಿ ಉದ್ಯೋಗದಲ್ಲಿದ್ದು, ಈಗಾಗಲೇ ಸಂಚಾರ ಸಿಕ್ಕಿನಲ್ಲಿ ಸಿಲುಕಿ ಬಳಲುತ್ತಿದ್ದಾರೆ. ಈ ಕಾರಿಡಾರ್ನಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ವೈಟ್ ಟಾಪಿಂಗ್ ಆರಂಭವಾದರೆ, ನಿತ್ಯದ ಪ್ರಯಾಣ ಮತ್ತಷ್ಟು ಹೈರಾಣಾಗಿಸಬಹುದು ಎನ್ನುತ್ತಾರೆ ನಾಗರಿಕರು.
19 ಕಿ.ಮೀ. ಉದ್ದದ ಕೆ.ಆರ್. ಪುರ& ಸಿಲ್ಕ್ಬೋರ್ಡ್ ಮಾರ್ಗದಲ್ಲಿ ವಯಾಡಕ್ಟ್, ನಿಲ್ದಾಣ ಹಾಗೂ ಸಿಸ್ಟಂ ಕಾಮಗಾರಿಗಳು ಇನ್ನೂ ಹಲವು ಕಡೆ ಬಾಕಿ ಉಳಿದಿವೆ. ಕೆ.ಆರ್. ಪುರದಿಂದ ಎಚ್ಎಸ್ಆರ್ ಲೇಔಟ್ವರೆಗೆ ಅಕ್ಟೋಬರ್ನಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್ಸಿಎಲ್ ಹೊಂದಿದ್ದರೂ, ಅದು ಸಾಕಾರವಾಗುವುದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಕಾಮಗಾರಿ 2027ರ ಜೂನ್ವರೆಗೂ, ಮುಂದೂಡುವ ಸಾಧ್ಯತೆ ಇದೆ ಎಂಬುದು ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ.
ಬೈಯಪ್ಪನಹಳ್ಳಿ ಡಿಪೋಗೆ ನೀಲಿ ಮಾರ್ಗ ಸಂಪರ್ಕ ಕಲ್ಪಿಸುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮಾರತ್ತಹಳ್ಳಿ ಮತ್ತು ಸೆಂಟ್ರಲ್ ಸಿಲ್ಕ್ಬೋರ್ಡ್ ಬಳಿ ವಯಾಡಕ್ಟ್ ಕಾಮಗಾರಿ ಬಾಕಿಯಿದ್ದು, ಕೆಲ ನಿಲ್ದಾಣಗಳ ನಿಮಾರ್ಣವೂ ತಾಂತ್ರಿಕ ಹಾಗೂ ಸ್ಥಳಿಯ ಸಮಸ್ಯೆಗಳಿಂದ ನಿಧಾನಗೊಂಡಿದೆ. ಇಬ್ಬಲೂರು ನಿಲ್ದಾಣದ ಬಳಿ ಗೇಲ್ ಅನಿಲ ಕೊಳವೆ, ನೀರಿನ ಪೈಪ್ಲೈನ್ ಸೇರಿ ಹಲವು ಭೂಗತ ಜಾಲಗಳಿದ್ದ ಕಾರಣ ಕಾಮಗಾರಿ ತಡವಾಗಿ ಆರಂಭವಾಗಿದೆ. ಭೂಸ್ವಾಧಿನ ಸಮಸ್ಯೆ ಹಾಗೂ ಪ್ರಸ್ತಾವಿತ ಸರ್ಜಾಪುರ& ಹೆಬ್ಬಾಳ ಮೆಟ್ರೋ ಮಾರ್ಗದೊಂದಿಗೆ ನೀಲಿ ಮಾರ್ಗ ಸಂಯೋಜನೆಗೆ ಸಂಬಂಧಿಸಿದ ವಿನ್ಯಾಸ ಅಂತಿಮಗೊಳಿಸುವಲ್ಲಿನ ವಿಳಂಬವೂ ಯೋಜನೆ ಮೇಲೆ ಪರಿಣಾಮ ಬೀರಿದೆ.
ಹಳದಿ ಮಾರ್ಗ ಸಂಪರ್ಕಕ್ಕೂ ತಡೆ:
ನಮ್ಮ ಮೆಟ್ರೋ ನೀಲಿ ಮಾರ್ಗ ನಿಲ್ದಾಣವನ್ನು ಕಾರ್ಯಾಚರಣೆಯಲ್ಲಿರುವ ಹಳದಿ ಮಾರ್ಗದ ನಿಲ್ದಾಣಕ್ಕೆ ಸಂಪರ್ಕಿಸುವ ಟ್ರಾವೆಲೇಟರ್ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಸದ್ಯ ಟೆಂಡರ್ ಹಂತದಲ್ಲಿದೆ. ಮತ್ತೊಂದೆಡೆ, ಹಳದಿ ಮಾರ್ಗದ ರೈಲುಗಳ ಕೊರತೆಯಿಂದ ವಿಳಂಬವಾಗಿದ್ದರೆ, ನೀಲಿ ಮಾರ್ಗದ ರೈಲು ಸೆಟ್ಗಳು ಈಗಾಗಲೇ ಬರಲಾರಂಭಿಸಿರುವುದು ಉತ್ತಮ ಬೆಳವಣಿಗೆ.