- ಮೆಟ್ರೋ ನಿಲ್ದಾಣ ಕೈಬಿಟ್ಟ ಕ್ರಮಕ್ಕೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೆಟ್ರೋ ಕೆಂಪು ಮಾರ್ಗ 3ಎ ಹಂತದ ಯೋಜನೆಯಲ್ಲಿದ್ದ ಪಶುವೈದ್ಯಕಿಯ ಕಾಲೇಜು (ವೆರ್ಟನರಿ ಕಾಲೇಜು) ಮೆಟ್ರೋ ನಿಲ್ದಾಣವನ್ನು ಕೈಬಿಟ್ಟಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್ಸಿಎಲ್) ಕ್ರಮಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಎಂಆರ್ಸಿಎಲ್ ಕಡಿಮೆ ಪ್ರಯಾಣಿಕರ ಸಂಖ್ಯೆ ಕಾರಣ ನೀಡಿ ನಿಲ್ದಾಣ ಕೈಬಿಟ್ಟಿದೆ. ಆದರೆ ಸಂಸ್ಥೆಯೇ ಸಿದ್ಧಪಡಿಸಿರುವ ವಿವರವಾದ ಯೋಜನಾ ವರದಿ (ಡಿಪಿಆರ್) ಪ್ರಕಾರ 2031ರ ವೇಳೆಗೆ ಈ ನಿಲ್ದಾಣದಲ್ಲಿ ಪ್ರತಿದಿನ 18,303 ಮಂದಿ ಪ್ರಯಾಣಿಕರು ಏರಿಳಿಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ಹಲವು ಪ್ರಸ್ತಾವಿತ ನಿಲ್ದಾಣಗಳಿಗಿಂತಲೂ ಹೆಚ್ಚಾಗಿದೆ ಎಂದು ಸೂರ್ಯ ಹೇಳಿದ್ದಾರೆ.
ಶಾರ್ಟ್ ಟನಲ್ ರಸ್ತೆ ಯೋಜನೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೊದಲು ಭೂಗತ ನಿಲ್ದಾಣವಾಗಿ, ಬಳಿಕ ಮೇಲ್ದರ್ಜೆ ನಿಲ್ದಾಣವಾಗಿ ಪರಿವರ್ತಿಸಲ್ಪಟ್ಟಿದ್ದ ಈ ನಿಲ್ದಾಣವನ್ನು ಇದೀಗ ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಅವರು ಆರೋಪಿಸಿದರು.
2033ರ ವೇಳೆಗೆ ರೆಡ್ಲೈನ್ನಲ್ಲಿ ಪ್ರತಿ ದಿಕ್ಕಿಗೆ ಗಂಟೆಗೆ 24 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದ್ದು, ದಿನಕ್ಕೆ 8 ಲಕ್ಷಕ್ಕೂ ಹೆಚ್ಚು ಮಂದಿ ಈ ಮಾರ್ಗವನ್ನು ಬಳಸಲಿದ್ದಾರೆ. ಆದರೆ ಕಾರುಗಳಿಗೆ ಮಾತ್ರ ಮೀಸಲಾದ ಸುರಂಗ ರಸ್ತೆ ಯೋಜನೆಯ ಸಾಮರ್ಥ್ಯ ಪ್ರತಿ ದಿಕ್ಕಿಗೆ ಕೇವಲ 6,500 ವಾಹನಗಳಷ್ಟೇ ಎಂದು ತಿಳಿಸಿದರು.
ಯೋಜನೆಯ ವಿಳಂಬ ಹಾಗೂ ಸುರಂಗ ರಸ್ತೆ ಪ್ರಸ್ತಾವದಿಂದ ಉಂಟಾದ ಗೊಂದಲದಿಂದ ಮೆಟ್ರೋ ಯೋಜನೆ ವೆಚ್ಚ ಹೆಚ್ಚಾಗಿದೆ. ಇದೀಗ ಅದನ್ನೇ ನೆಪವಾಗಿಸಿಕೊಂಡು ನಿಲ್ದಾಣ ಕೈಬಿಡಲಾಗುತ್ತಿದೆ ಎಂದು ದೂರಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ನಗರ ಸಂಚಾರ ಯೋಜನೆಗಳಲ್ಲಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರಕ್ಕೆ (ಬಿಎಂಎಲ್ಟಿಎ) ಹೆಚ್ಚಿನ ಅಧಿಕಾರ ನೀಡಬೇಕೆಂದೂ ಅವರು ಒತ್ತಾಯಿಸಿದರು.