- ಮೆಟ್ರೋ ಪ್ರಯಾಣಿಕರ ಮೇಲೆ ಹಣಕಾಸಿನ ಹೊರೆ?
- ಎಡಿಬಿಯಿಂದ ಪಡೆದ 500 ದಶಲಕ್ಷ ಡಾಲರ್ ಸಾಲ
ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ನಮ್ಮ ಮೆಟ್ರೋ ಯೋಜನೆಗಳು ವಿಳಂಬವಾಗುವುದು ರಾಜಧಾನಿ ನಿವಾಸಿಗಳಿಗೆ ಹೊಸ ವಿಷಯವೇನಲ್ಲ. ಆದರೆ, ಈ ಬಾರಿ ಅದರ ಪರಿಣಾಮ ಸಂಚಾರದ ಅಸೌಕರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬಹುನಿರೀಕ್ಷಿತ ಹಂತ- 2ಎ ಮತ್ತು 2ಬಿ ಮಾರ್ಗಗಳು ಇನ್ನೂ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳದಿದ್ದರೂ, ಅವುಗಳ ನಿಮಾರ್ಣಕ್ಕಾಗಿ ಪಡೆದಿರುವ ವಿದೇಶಿ ಸಾಲದ ಮರುಪಾವತಿ ಆರಂಭವಾಗಿದೆ. ಇದರಿಂದ ಯೋಜನಾ ವಿಳಂಬದ ನೈಜ ಬೆಲೆಯನ್ನು ಯಾರು ಪಾವತಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.
ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ (ಎಡಿಬಿ) ಪಡೆದಿರುವ 500 ದಶಲಕ್ಷ ಡಾಲರ್ ಸಾಲದ ಕಂತು ಜೂ.1ರಿಂದ ಆರಂಭವಾಗಿದೆ. ಸಾಮಾನ್ಯವಾಗಿ ಯೋಜನೆ ಕಾರ್ಯಾರಂಭವಾದ ಬಳಿಕ ಅದರ ಆದಾಯದಿಂದ ಸಾಲ ಮರುಪಾವತಿಸಲಾಗುತ್ತದೆ. ಆದರೆ, ಇಲ್ಲಿ ಆದಾಯದ ಮೂಲ ಇನ್ನೂ ಸೃಷ್ಟಿಯಾಗದಿದ್ದರೂ, ಸಾಲದ ಪಾವತಿ ಆರಂಭವಾಗಿದೆ. ಇದಕ್ಕೆ ಪ್ರಮುಖ ಕಾರಣ ಯೋಜನೆಯ ಪುನರಾವರ್ತಿತ ವಿಳಂಬವಾಗಿದೆ.
ಇನ್ನೊಂದೆಡೆ, 2021ರಲ್ಲಿ ಪ್ರತಿ ಡಾಲರ್ಗೆ ಅಂದಾಜು 75 ರೂ. ಇದ್ದ ವಿನಿಮಯ ದರ ಈಗ 95ರ ಆಸುಪಾಸು ತಲುಪಿದೆ. ಅಂದರೆ ಸಾಲ ಪಡೆದುದಕ್ಕಿಂತ ಈಗ ಪ್ರತಿ ಡಾಲರ್ಗೆ 20 ರೂ. ಹೆಚ್ಚುವರಿ ಪಾವತಿಸಬೇಕಾಗಿದೆ. ಇದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಹಣಕಾಸು ಒತ್ತಡ ಮತ್ತಷ್ಟು ಹೆಚ್ಚಿದೆ. ವಿದೇಶಿ ಸಾಲದ ಅಪಾಯವನ್ನು ತಗ್ಗಿಸಲು ಅಗತ್ಯವಾದ ಕರೆನ್ಸಿ ಹೆಡ್ಜಿಂಗ್ ನೀತಿಯ ಕೊರತೆ ಕೂಡ ತಜ್ಞರ ಆತಂಕಕ್ಕೆ ಕಾರಣವಾಗಿದೆ.
ಈ ಹೆಚ್ಚುವರಿ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸುತ್ತದೆಯೇ, ಭವಿಷ್ಯದಲ್ಲಿ ಮೆಟ್ರೋ ಪ್ರಯಾಣ ದರ ಹೆಚ್ಚಳದ ರೂಪದಲ್ಲಿ ಪ್ರಯಾಣಿಕರ ಮೇಲೆ ವರ್ಗಾಯಿಸಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ ಮೆಟ್ರೋ ದರ ಏರಿಕೆ ಬಗ್ಗೆ ಪ್ರಯಾಣಿಕರಲ್ಲಿ ಅಸಮಾಧಾನ ಇರುವಾಗ ಹಣಕಾಸಿನ ಒತ್ತಡ ಮತ್ತಷ್ಟು ಹೆಚ್ಚಾದರೆ ದರ ಪರಿಷ್ಕರಣೆಯ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ನೀಲಿ ಮಾರ್ಗ ನಿರ್ಮಾಣಕ್ಕೆ ಬಳಕೆ
2021ರ ಆ.19ರಂದು ಎಡಿಬಿಯೊಂದಿಗೆ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. 25 ವರ್ಷಗಳ ಅವಧಿಯ ಈ ಸಾಲಕ್ಕೆ ಐದು ವರ್ಷಗಳ ವಿನಾಯಿತಿ ಅವಧಿ ನೀಡಿದ್ದು, 2045ರ ಡಿ.1ರ ವರೆಗೆ ಕಂತುಗಳ ಮೂಲಕ ಮರುಪಾವತಿಸಬೇಕಿದೆ. 2024&-25ನೇ ಸಾಲಿನ ವಾರ್ಷಿಕ ವರದಿ ಪ್ರಕಾರ, ಮಂಜೂರಾದ 500 ದಶಲಕ್ಷ ಡಾಲರ್ ಸಾಲದಲ್ಲಿ ಈಗಾಗಲೇ 335.12 ದಶಲಕ್ಷ ಡಾಲರ್ ಮೊತ್ತವನ್ನು ಬಿಎಂಆರ್ಸಿಎಲ್ ಬಳಸಿಕೊಂಡಿದ್ದು, ಅದರ ಭಾರತೀಯ ಮೌಲ್ಯ ಸುಮಾರು 2,748.67 ಕೋಟಿ ರೂ. ಆಗಿದೆ. ಈ ಹಣವನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗಿನ 58.19 ಕಿ.ಮೀ. ಉದ್ದದ ಹಂತ-2ಎ ಹಾಗೂ 2ಬಿ ಮಾರ್ಗಗಳ ನಿಮಾರ್ಣಕ್ಕೆ ಬಳಸಲಾಗುತ್ತಿದೆ.