ಮೆಟ್ರೋ 
ಬೆಂಗಳೂರು

ಮೆಟ್ರೋ ದರ ಪರಿಷ್ಕರಣೆ; ಗೊಂದಲಕ್ಕೆ ಸಿಲುಕಿದ ಬಿಎಂಆರ್​ಸಿಎಲ್​ | metro

ಪವನ್ ಆಚಾರ್ಯ ನೀರ್ಚಾಲು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗೆ ತಾತ್ಕಾಲಿಕ ತಡೆಬಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿರಾಳರಾಗಿದ್ದು, ದರ ಏರಿಕೆ ವಿಚಾರ ಕುರಿತು ಗೊಂದಲದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಸಿಲುಕಿದೆ.
ತ್ರಿಸದಸ್ಯ ಸಮಿತಿಯ ಶಿಫಾರಸ್ಸಿನಂತೆ ದರ ಏರಿಕೆ ಮಾಡಬೇಕೋ ಅಥವಾ ಹೊಸ ದರ ನಿಗದಿ ಸಮಿತಿ ರಚಿಸಿ ಮತ್ತೆ ಬರುವ ಶಿಫಾರಸು ಆಧಾರದಲ್ಲಿ ನಿರ್ಧಾರ ಕೈಗೊಳ್ಳಬೇಕೋ ಅಥವಾ ಪರಿಷತ ದರ ಏರಿಕೆಯ ಶಿಫಾರಸನ್ನು ಮಾತ್ರ ಪುನರ್​ ಪರಿಶೀಲನೆ ಮಾಡಬೇಕೆ ಎಂಬ ವಿಚಾರದಲ್ಲಿ ಸಂಸ್ಥೆಗೆ ಗೊಂದಲ ಉಂಟಾಗಿದೆ.
ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸೋಮವಾರ ಕರೆದಿದ್ದ ಬಿಎಂಆರ್​ಸಿಎಲ್​ ಮಂಡಳಿ ಸಭೆ ಮುಂದೂಡಲಾಗಿದ್ದು, ಶೀಘ್ರದಲ್ಲೇ ಮತ್ತೊಮ್ಮೆ ಸಭೆ ನಡೆಸಲು ತಯಾರಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಾರ್ಷಿಕ ದರ ಪರಿಷ್ಕರಣೆ ಮಾಡದಿದ್ದರೆ, 2029&30ರ ವೇಳೆಗೆ ಬಿಎಂಆರ್​ಸಿಎಲ್​ ನಿವ್ವಳ ನಷ್ಟವು 577 ಕೋಟಿ ರೂ. ತಲುಪಬಹುದು ಎಂಬುದು ದರ ಪರಿಷ್ಕರಣಾ ಸಮಿತಿ ಅಂದಾಜಿಸಿದೆ. 2024-&25ರಲ್ಲಿ ಬಿಎಂಆರ್​ಸಿಎಲ್​ನ ಸಾಲವು 17,071.1 ಕೋಟಿ ರೂ.ಆಗಿದ್ದು, ಹೊಣೆಗಾರಿಕೆ ಮತ್ತು ಪ್ರಾವಿಷನ್​ 8,855.05 ಕೋಟಿ ರೂ. ಇವೆ. 2025& 26 ಮತ್ತು 2029-&30ರ ನಡುವೆ, ಬಿಎಂಆರ್​ಸಿಎಲ್​ 9,651.6 ಕೋಟಿ ರೂ. ಸಾಲ ಮರುಪಾವತಿ ಮತ್ತು 5,721.6 ಕೋಟಿ ರೂ. ಸವಕಳಿ ವೆಚ್ಚಗಳನ್ನು ಎದುರಿಸುತ್ತಿದೆ.
ಮೆಟ್ರೋ ಪ್ರಯಾಣದರ ಹಾಗೂ ಇತರ ಆದಾಯ ಮೂಲಗಳನ್ನು ಹೊಂದಿದೆಯಾದರೂ ಸಾಲವನ್ನು ಸರದೂಗಿಸಲು, ಮುಂದಿನ ದಿನಗಳಲ್ಲಿ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಲು ದರ ಪರಿಷ್ಕರಣೆ ಅನಿವಾರ್ಯವಾಗಿದೆ. ಇದು ಮುಂದಿನ ಬಿಎಂಆರ್​ಸಿಎಲ್​ ಮೆಟ್ರೋ ಯೋಜನೆಗಳ ಪ್ರಕ್ರಿಯೆ ಕಾಮಗಾರಿಗೆ, ಸಾಲ, ಭಾದ್ಯತೆ ಎಲ್ಲದರ ಭಾಗವಾಗಿದೆ. ಹೀಗಾಗಿ ಮುಂದಿನ ನಿರ್ಧಾರ ಏನು ತೆಗೆದುಕೊಳ್ಳಬೇಕು ಎಂಬುದು ಬಿಎಂಆರ್​ಸಿಎಲ್​ಗೆ ಸವಾಲಾಗಲಿದೆ.
ಸರ್ಕಾರದ ಮೇಲೆ ಅವಲಂಬನೆ
ಬಿಎಂಆರ್​ಸಿಎಲ್​ಗೆ ತನ್ನದೆ ಆದ ಆಂತರಿಕ ಚಾಲ್ತಿ ಖಾತೆ ಉಳಿತಾಯವಿಲ್ಲ. ಆದ್ದರಿಂದಲೇ ತುರ್ತು ಅಗತ್ಯತೆಗಳಿಗೆ ಸರ್ಕಾರದ ಮೇಲೆ ಅವಲಂಬಿತವಾಗಿದೆ. 2023&24ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 307.67 ಕೋಟಿ ರೂ. ಲಾಭ ಗಳಿಸಿತ್ತು. ಆದರೆ, 2024&25ರ ಆರ್ಥಿಕ ವರ್ಷದಲ್ಲಿ 652.11 ಕೋಟಿ ರೂ. ಹೆಚ್ಚಿನ ಹಣಕಾಸು ವೆಚ್ಚದ ಕಾರಣದಿಂದಾಗಿ ಮತ್ತೆ 167.41 ಕೋಟಿ ರೂ. ನಷ್ಟ ಹೊಂದುವಂತಾಯಿತು.