- 3ನೇ ಹಂತದ ಕಾಮಗಾರಿ ಗಡುವು ವಿಸ್ತರಣೆಯಿಂದ ಯೋಜನಾ ವೆಚ್ಚ ಅಧಿಕವಾಗುವ ಸಾಧ್ಯತೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣಗೊಳ್ಳುತ್ತಿದ್ದು, ಸಾರ್ವಜನಿಕ ಸಾರಿಗೆ ಅವಲಂಬನೆ ಹೆಚ್ಚುತ್ತಿದೆ. ಹೊಸ ಮೆಟ್ರೋ ಮಾರ್ಗಗಳ ಉದ್ಘಾಟನೆಗೆ ಪ್ರಯಾಣಿಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿ ಗಡುವು ಒಂದು ವರ್ಷ ವಿಸ್ತರಣೆಗೊಂಡಿದ್ದು, ಈ ಹಂತದ ಅಂದಾಜು ವೆಚ್ಚವೂ ವಿಪರೀತ ಏರಿಕೆಯಾಗುವ ಆತಂಕವಿದೆ.
ಮೂರು "ಎ' ಹಂತದ ಯೋಜನೆಗೆ ಒಪ್ಪಿಗೆ ವಿಚಾರದಲ್ಲೂ ಕೇಂದ್ರ-&ರಾಜ್ಯ ಸರ್ಕಾರಗಳ ಸಮನ್ವಯದ ಕೊರತೆಯಿಂದ ಯೋಜನೆ ವಿಳಂಬವಾಗುತ್ತಿದ್ದು, ಇದರಿಂದ ಯೋಜನಾ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆ ಇದೆ.
ಒಟ್ಟು 44 ಕಿಲೋ ಮೀಟರ್ ಉದ್ದದ ಎರಡು ಎತ್ತರಿಸಿದ ಕಾರಿಡಾರ್ ಒಳಗೊಂಡಿರುವ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಪೂರ್ಣಗೊಳಿಸಲು 2031ರ ಮೇ ತಿಂಗಳ ವರೆಗೆ ಗಡುವು ಪಡೆದಿದೆ. ಇದರಿಂದ ದಿನವೊಂದಕ್ಕೆ ಸುಮಾರು 1-&2 ಕೋಟಿ ರೂಪಾಯಿ ವೆಚ್ಚ ಹೆಚ್ಚಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಒಂದನೇ ಹಂತದ (42 ಕಿ.ಮೀ.)ಮೆಟ್ರೋ ಕಾಮಗಾರಿಗೆ 2005ರಲ್ಲಿ 6385 ಕೋಟಿ ರೂ. ಅಂದಾಜಿಸಲಾಗಿತ್ತಾದರೂ ಯೋಜನೆ ಪೂಣ್ಗೊಂಡಾಗ 14,133 ಕೋಟಿ ರೂ.ರ್ಖಚಾಗಿತ್ತು. ಬಳಿಕ 72 ಕಿ.ಮೀ.ವರೆಗೆ 2ನೇ ಹಂತದ ವಿಸ್ತರಣೆಗೆ 26,405 ಕೋಟಿ ರೂ. ಅಂದಾಜಿಸಲಾಗಿದ್ದರೂ ಈಗ 40,614.27 ಕೋಟಿ ರೂ. ಮೀರಿದೆ. ಈ 3ನೇ ಹಂತದ ಕಾಮಗಾರಿ ಇನ್ನೂ ಮುಂದುವರಿದಿದ್ದು, ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ.
ಮೆಟ್ರೋ ಯೋಜನೆಗಳಿಗಾಗಿ ಈವರೆಗೆ 67,460 ಕೋಟಿ ರೂ. ರ್ಖಚಾಗಿದ್ದು, ವೆಚ್ಚದಲ್ಲಿ ರಾಜ್ಯ ಸರ್ಕಾರದ ಶೇ.88 (59,376 ಕೋಟಿ ರೂ.) ಪಾಲಿದ್ದು, ಕೇಂದ್ರದ್ದು ಶೇ.12ರಷ್ಟಿದೆ (8084 ಕೋಟಿ ರೂ.) ಎಂದು ಬಜೆಟ್ನಲ್ಲಿ ಮುಖ್ಯಮಂತ್ರಿ ಪ್ರಸ್ತಾಪ ಮಾಡಿದ್ದರು. ಅಂದರೆ ಯೋಜನಾ ವೆಚ್ಚ ಹೆಚ್ಚಾದಂತೆಲ್ಲ ರಾಜ್ಯ ಸರ್ಕಾರದ ಮೇಲಿನ ಹೊರೆಯೂ ಹೆಚ್ಚುವ ಸಾಧ್ಯತೆ ಇದೆ.
ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ 2024ರಲ್ಲಿಅನುಮೋದನೆ ದೊರೆತರೂ 3ನೇ ಹಂತದ ಎರಡು ಕಾರಿಡಾರ್ ಯೋಜನೆಗಳನ್ನು ಈಗಾಗಲೇ 6 ತಿಂಗಳು ವಿಸ್ತರಿಸಲಾಗಿದೆ. ಕಿತ್ತಳೆ ಬಣ್ಣದ ಈ ಮಾರ್ಗ ಕೆಂಪಾಪುರ - ಜೆ.ಪಿ.ನಗರ 4ನೇ ಹಂತ ಹಾಗೂ ಹೊಸಹಳ್ಳಿ- ಕಡಬಗೆರೆವರೆಗಿನ 2 ಕಾರಿಡಾರ್ ಒಳಗೊಂಡಿದೆ. ಕೇಂದ್ರದ ಅನುಮೋದನೆ ದೊರೆತ ಬಳಿಕ ಡಬಲ್ ಡೆಕ್ಕರ್ ಅನ್ನು (ಎಲಿವೇಟೆಡ್ ರಸ್ತೆ ಕಂ ಮೆಟ್ರೋ ಮಾರ್ಗ) ರಾಜ್ಯ ಸರ್ಕಾರ ಸೇರ್ಪಡೆ ಮಾಡಿದೆ. ಇದೂ ಕೂಡ ಎರಡು ಸರ್ಕಾರಗಳ ಅಭಿಪ್ರಾಯ ವ್ಯತ್ಯಾಸಕ್ಕೆ ಕಾರಣವಾಗಿದೆ. ಕೇಂದ್ರದಿಂದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ನಿರಾಸಕ್ತಿ ಸೂಚಿಸಲಾಗಿತ್ತು. ಇದರಿಂದ ಯೋಜನಾ ಸ್ವರೂಪ ಬದಲಾಗಿದೆ. ಮೂಲಗಳ ಪ್ರಕಾರ, ಕಾಮಗಾರಿ ಆರಂಭಕ್ಕೆ ರಾಜ್ಯ ಮತ್ತು ಕೇಂದ್ರದ ನಡುವೆ ಈವರೆಗೆ ಒಪ್ಪಂದ ಏರ್ಪಟ್ಟಿಲ್ಲ. ಈ ನಡುವೆ, 2030ರ ಅಂತ್ಯದ ಗಡುವು 2031ರ ಮೇವರೆಗೆ ವಿಸ್ತರಣೆಯಾಗಿದೆ. ಇದು ಸಹಜವಾಗಿ ಯೋಜನೆಯ 15,611 ಕೋಟಿ ರೂ. ಅಂದಾಜು ವೆಚ್ಚವನ್ನು ಹೆಚ್ಚಿಸಲಿದೆ.