- ವರ್ಷಾರಂಭ ನಿಮಿತ್ತ ವಾಣಿಜ್ಯ ಸಂಚಾರ ವಿಸ್ತರಣೆ
ಬೆಂಗಳೂರು: ವರ್ಷಾಚರಣೆ ವೇಳೆ ನಮ್ಮ ಮೆಟ್ರೋದಲ್ಲಿ ಲಾಂತರ ಮಂದಿ ಪ್ರಯಾಣ ಬೆಳೆಸಿದ್ದು, ಬುಧವಾರ ಒಂದೇ ದಿನದಲ್ಲಿ 3 ಕೋಟಿ 8 ಲಕ್ಷ ರೂ. ಆದಾಯ ಹರಿದುಬಂದಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಣೆ ಮಾಡಲಾಗಿತ್ತು. ಬುಧವಾರ ಬೆಳಗ್ಗೆ 5 ಗಂಟೆಯಿಂದ ಗುರುವಾರ ಬೆಳಗಿನ ಜಾವ 3.10ರ ವರೆಗೆ 8,93,903 ಮಂದಿ ಈ ಸೇವೆ ಬಳಸಿಕೊಂಡರು. ಹಳದಿ, ನೇರಳೆ ಮತ್ತು ಹಸಿರು ಮಾರ್ಗಗಳ ಎಲ್ಲ ನಿಲ್ದಾಣಗಳಲ್ಲಿ ರಾತ್ರಿ ಜನದಟ್ಟಣೆ ಕಾಣಿಸಿತು. ಕಳೆದ ವರ್ಷ ಮೆಟ್ರೋದಲ್ಲಿ ವರ್ಷಾಚರಣೆ ವೇಳೆ 2.17 ಕೋಟಿ ರೂ. ಸಂಗ್ರಹವಾಗಿತ್ತು.
ಬಿಎಂಟಿಸಿಗೆ 10 ಲಕ್ಷ ರೂ.ಆದಾಯ: ಮತ್ತೊಂದೆಡೆ ಬುಧವಾರ ಒಂದೇದಿನ ಬಿಎಂಟಿಸಿಗೆ 10 ಲಕ್ಷ ರೂ. ಆದಾಯ ಲಭಿಸಿದೆ. ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಹೆಚ್ಚುವರಿ 200 ಟ್ರಿಪ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 4,400 ಕಿ.ಮೀ. ಸಂಚರಿಸಿದ ಬಸ್ಗಳಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆ ತನಕ ಸುಮಾರು ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕೋರಮಂಗಲ, ಇಂದಿರಾನಗರ, ಮಾಲ್ ಆಫ್ ಏಷ್ಯಾ, ಎಂಜಿ ರಸ್ತೆ ಹೀಗೆ ನಾನಾ ಕಡೆಗಳಲ್ಲಿ ಸೇವೆ ವಿಸ್ತರಣೆ ಮಾಡಲಾಗಿತ್ತು ಎಂದು ಬಿಎಂಟಿಸಿ ಮುಖ್ಯ ವ್ಯವಸ್ಥಾಪಕ (ಸಂಚಾರ) ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.