- 37 ಕಿ.ಮೀ. ಬದಲು 11 ಕಿ.ಮೀ.ಗೆ ಸೀಮಿತ ಸಾಧ್ಯತೆ
- ಆರ್ಐಟಿಇಎಸ್ ವರದಿ ಹಿನ್ನೆಲೆ ಮೆಟ್ರೋ ನಿಗಮ ಚಿಂತನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೆಟ್ರೋ ಕಿತ್ತಳೆ ಮಾರ್ಗದ ಉದ್ದಕ್ಕೂ 37 ಕಿ.ಮೀ. ಡಬಲ್ ಡೆಕ್ಕರ್ ನಿರ್ಮಿಸುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಯೋಜನೆ ಬದಲಾಗುವ ಸಾಧ್ಯತೆಯಿದ್ದು, ಪ್ರಮುಖ ಟ್ರಾಫಿಕ್ ಜಂಕ್ಷನ್ಗಳಲ್ಲಿ ಮಾತ್ರ ಮೆಟ್ರೋ ಮಾರ್ಗ&ರಸ್ತೆ ಸಂಯೋಜಿತ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆದಿದೆ.
ಇಂಜಿನಿಯರಿಂಗ್ ಸಲಹಾ ಸಂಸ್ಥೆ ಆರ್ಐಟಿಇಎಸ್ ನೀಡಿರುವ ಸಲಹೆಗಳ ಹಿನ್ನೆಲೆ ಈ ಬದಲಾವಣೆಗೆ ಬಿಎಂಆರ್ಸಿಎಲ್ ಮುಂದಾಗಿದೆ. ನಿರಂತರವಾಗಿ ಹೆಚ್ಚುವರಿ ರಸ್ತೆ ಸಾಮರ್ಥ್ಯ ಕಲ್ಪಿಸುವುದರಿಂದ ಖಾಸಗಿ ವಾಹನಗಳ ಬಳಕೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಮೆಟ್ರೋ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಬಹುದು ಎಂಬ ಆತಂಕವನ್ನು ಆರ್ಐಟಿಇಎಸ್ ವ್ಯಕ್ತಪಡಿಸಿದೆ.
ಡಬಲ್ ಡೆಕ್ಕರ್ ನಿಮಾರ್ಣಕ್ಕೆ ಹಲವು ತಾಂತ್ರಿಕ ಅಡಚಣೆಗಳಿವೆ. ಈಗಾಗಲೇ ಇರುವ ಮೇಲ್ಸೇತುವೆಗಳು ಹಾಗೂ ಮೆಟ್ರೋ ಮಾರ್ಗಗಳನ್ನು ದಾಟಬೇಕಾಗುತ್ತದೆ. ಅದಕ್ಕಾಗಿ ಸುಮಾರು 35 ಮೀಟರ್ ಎತ್ತರಕ್ಕೆ ಮಾರ್ಗವನ್ನು ಏರಿಸಬೇಕಾಗಬಹುದು. ಇದರಿಂದ ನಿಮಾರ್ಣ, ನಿರ್ವಹಣೆ ಹಾಗೂ ಸಂಚಾರ ನಿರ್ವಹಣೆ ಮತ್ತಷ್ಟು ಸಂಕೀರ್ಣವಾಗಲಿದೆ. ಹೀಗಾಗಿ 37 ಕಿ.ಮೀ. ಯೋಜನೆಯನ್ನು ಸುಮಾರು 11 ಕಿ.ಮೀ.ಗೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಹೆಬ್ಬಾಳ, ಬಿಇಎಲ್ ಸರ್ಕಲ್, ಗೊರಗುಂಟೆಪಾಳ್ಯ, ಸುಮನಹಳ್ಳಿ ಕ್ರಾಸ್, ನಾಗರಬಾವಿ, ನಾಯಂಡಹಳ್ಳಿ, ಕಾಮಾಕ್ಯ ಜಂಕ್ಷನ್, ಸರಕ್ಕಿ ಜಂಕ್ಷನ್, ಡೆಲ್ಮಿಯಾ ಫ್ಲೈಓವರ್ ಹಾಗೂ ವೆಗಾ ಸಿಟಿ ಮಾಲ್ ಸುತ್ತಮುತ್ತಲಿನ ಸಂಚಾರದ ಒತ್ತಡದ ಆಧಾರದ ಮೇಲೆ ಅಂತಿಮವಾಗಿ ಮಾರ್ಗಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಮೆಟ್ರೋ ಮಾತ್ರ ಇರುವ ಯೋಜನೆಗೆ ಆರ್ಥಿಕ ಆಂತರಿಕ ಪ್ರತಿಫಲ ದರ ಸುಮಾರು ಶೇ.17 ಇದೆ. ಆದರೆ ಡಬಲ್ಡೆಕ್ಕರ್ ರಸ್ತೆ ಭಾಗವನ್ನು ಸೇರಿಸಿದಾಗ ಈ ಪ್ರಮಾಣ ಶೇ.14ರ ಮಾನದಂಡಕ್ಕಿಂತ ಕೆಳಗೆ ಇಳಿಯುತ್ತದೆ ಎಂದು ಆರ್ಐಟಿಇಎಸ್ ವರದಿ ಸೂಚಿಸಿದೆ.
ಸಿಲ್ಕ್ಬೋರ್ಡ್ ಅನುಭವವೇ ಹೊಸ ಪಾಠ
ನಗರದ ಪ್ರಥಮ ಡಬಲ್ ಡೆಕ್ಕರ್ ಮಾದರಿಯಾದ ಸಿಲ್ಕ್ಬೋರ್ಡ್& ರಾಗಿಗುಡ್ಡ ಮಾರ್ಗ 2026ರಲ್ಲಿ ಸಂಚಾರಕ್ಕೆ ಮುಕ್ತವಾಗಿದೆ. ಸುಮಾರು 3.5 ಕಿ.ಮೀ. ಉದ್ದದ ಈ ಮಾರ್ಗವು ಸಿಲ್ಕ್ಬೋರ್ಡ್ ಭಾಗದ ಸಂಚಾರವನ್ನು ಕೆಲ ಮಟ್ಟಿಗೆ ಸುಗಮಗೊಳಿಸಿದರೂ ನಿರ್ಗಮನ ಸ್ಥಳಗಳು ಹಾಗೂ ಸಮೀಪದ ರಸ್ತೆಗಳತ್ತ ಸಂಚಾರದ ಒತ್ತಡ ವರ್ಗಾವಣೆಯಾಗುತ್ತಿರುವುದು ಹೊಸ ಸವಾಲಾಗಿ ಪರಿಣಮಿಸಿದೆ. ಇನ್ನು ಅಂತಹ ಪ್ರದೇಶಗಳ ಸಮಸ್ಯೆ ಪರಿಹರಿಸಲು ಮತ್ತೆ ರಸ್ತೆ ವಿಸ್ತರಣೆ ಅಥವಾ ಅಂಡರ್ಪಾಸ್ ನಿರ್ಮಾಣದ ಅಗತ್ಯವಿದೆ ಎಂದು ಹೇಳಲಾಗುತಿದೆ. ಇದೇ ಅನುಭವ ಕಿತ್ತಳೆ ಮಾರ್ಗದ ಯೋಜನೆಗೂ ಪ್ರಮುಖ ಪಾಠವಾಗಬಹುದು.
ಹಂತ-&3 ಕಾಮಗಾರಿ ಶುರುವಾಗಿಲ್ಲ
ಮೆಟ್ರೋ ಹಂತ-&3ರಲ್ಲಿ ಕೆಂಪಾಪುರ& ಜೆ.ಪಿ. ನಗರ ಹಾಗೂ ಹೊಸಹಳ್ಳಿ& ಕಡಬಗೆರೆ ಎಂಬ ಎರಡು ಕಾರಿಡಾರ್ಗಳಿದ್ದು, 45 ಕಿ.ಮೀ. ಉದ್ದ ಹೊಂದಿವೆ. 2025ರ ಆಗಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರೂ, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಹೊಸ ಡಬಲ್ ಡೆಕ್ಕರ್ ಪ್ರಸ್ತಾವನೆ ಸೇರಿ ಕಾರ್ಯಸಾಧ್ಯತೆ, ವಿನ್ಯಾಸ ಮತ್ತಿತರ ಅಧ್ಯಯನಗಳು ನಡೆಯುತ್ತಿವೆ.