ಮೆಟ್ರೋ 
ಬೆಂಗಳೂರು

ಮೆಟ್ರೋದಲ್ಲಿ ವಿಶೇಷ ಜಾಗೃತಿ ಅಭಿಯಾನ| metro

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಪ್ರಮುಖ ನಿಲ್ದಾಣಗಳಲ್ಲಿ ಡಿಜಿಟಲ್​ ಸಂದೇಶ, ಸಹಾಯವಾಣಿ ಮಾಹಿತಿ ಪ್ರದರ್ಶನ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಇತ್ತೀಚಿನ ದಿನಗಳಲ್ಲಿ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಹಳಿಗೆ ಜಿಗಿಯುವ ಘಟನೆಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಇಂತಹ ದುರ್ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಹಾಗೂ ನಿಮ್ಹಾನ್ಸ್​ ಸಹಯೋಗದಲ್ಲಿ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದ್ದು, ಪ್ರಯಾಣಿಕರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ.
2024ರಿಂದ ಇಲ್ಲಿವರೆಗೆ ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ. ಉಳಿದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತಹ ಘಟನೆಗಳಿಂದ ಜೀವಹಾನಿ ಮಾತ್ರವಲ್ಲ, ಮೆಟ್ರೋ ಸಂಚಾರವೂ ಗಂಟೆಗಟ್ಟಲೆ ಸ್ಥಗಿತಗೊಂಡು ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಆಯ್ದ ಸ್ಥಳಗಳಲ್ಲಿ ಬ್ಯಾರಿಕೇಡ್​ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದರೊಂದಿಗೆ ಪ್ರಯಾಣಿಕರ ಮನೋಸ್ಥೆ$ರ್ಯ ಹೆಚ್ಚಿಸುವ ಉದ್ದೇಶದಿಂದ ಡಿಜಿಟಲ್​ ಡಿಸ್​ಪ್ಲೇಗಳು ಹಾಗೂ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ದಣಿವಾಗುವುದು ಸಹಜ, ಸಹಾಯ ಕೇಳುವುದು ಸಹಜ', "ಯೋಚನೆ ಬೇಡ, ಚಿಂತೆ ಬಿಡಿ, ಮಾತನಾಡಿ', ಎಂಬ ಸಂದೇಶಗಳ ಮೂಲಕ ಜೀವನದ ಮಹತ್ವವನ್ನು ಸಾರುವ ಪ್ರಯತ್ನ ನಡೆಯುತ್ತಿದೆ. ಮಾನಸಿಕ ಒತ್ತಡಕ್ಕೆ ಒಳಗಾದವರು ಅಥವಾ ದುಡುಕಿನ ನಿರ್ಧಾರ ಕೈಗೊಳ್ಳುವ ಮನಸ್ಥಿತಿಯಲ್ಲಿರುವವರು ತಕ್ಷಣ ತಜ್ಞರ ನೆರವು ಪಡೆಯುವಂತೆ ಮನವಿ ಮಾಡಲಾಗಿದೆ.
ಸಹಾಯವಾಣಿ ಲಭ್ಯ
ನಿಮ್ಹಾನ್ಸ್​ ಸಹಯೋಗದಲ್ಲಿ ಸಹಾಯವಾಣಿ ಸಂಖ್ಯೆಗಳನ್ನೂ ಪ್ರಮುಖ ನಿಲ್ದಾಣಗಳ ಡಿಜಿಟಲ್​ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಉಚಿತ ಆಪ್ತ ಸಮಾಲೋಚನೆ ಹಾಗೂ ಮಾನಸಿಕ ಆರೋಗ್ಯ ಸಲಹೆ ಪಡೆಯುವ ಅವಕಾಶವಿರುವುದರಿಂದ ಅಗತ್ಯವಿರುವವರು ಯಾವುದೇ ಹಿಂಜರಿಕೆಯಿಲ್ಲದೆ ಸಂಪರ್ಕಿಸಬೇಕು ಎಂದು ಬಿಎಂಆರ್​ಸಿಎಲ್​ ಮನವಿ ಮಾಡಿದೆ.