- ಪ್ರಯಾಣಿಕರ ಜೇಬಿಗೆ ಮತ್ತೆ ಬೀಳಲಿದೆಯೇ ಹೊರೆ!
- 3ಎ ಹಂತದ ಡಿಪಿಆರ್ನಲ್ಲಿ ದರ ಏರಿಕೆ ಲೆಕ್ಕಾಚಾರ
- 3 ವರ್ಷಕ್ಕೊಮ್ಮೆ ಶೇ.12 ಹೆಚ್ಚಳದ ಮಾದರಿ ವಿಶ್ಲೇಷಣೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನ ಮೆಟ್ರೋ ಪ್ರಯಾಣ ಮತ್ತಷ್ಟು ದುಬಾರಿಯಾಗುವ ಸುಳಿವು ಪರಿಷತ ವಿಸತ ಯೋಜನಾ ವರದಿ (ಡಿಪಿಆರ್)ಯಿಂದ ಹೊರಬಿದ್ದಿದೆ. ನಮ್ಮ ಮೆಟ್ರೋ 3ಎ (ಸರ್ಜಾಪುರ-ಹೆಬ್ಬಾಳ) ಮಾರ್ಗದ ಡಿಪಿಆರ್ನಲ್ಲಿ 3 ವರ್ಷಕ್ಕೊಮ್ಮೆ ಶೇ.12 ಪ್ರಯಾಣ ದರ ಹೆಚ್ಚಿಸುವ ಮಾದರಿಯನ್ನು ವಿಶ್ಲೇಷಿಸಲಾಗಿದ್ದು, ಅದರಂತೆ 2033ರ ವೇಳೆಗೆ ಗರಿಷ್ಠ ಮೆಟ್ರೋ ಟಿಕೆಟ್ ದರ 126 ರೂ. ತಲುಪುವ ಸಾಧ್ಯತೆ ಉಲ್ಲೇಖಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆ ಹೆಚ್ಚುವ ಆತಂಕ ವ್ಯಕ್ತವಾಗಿದೆ.
ಡಿಪಿಆರ್ನಲ್ಲಿ ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆ ಹೆಚ್ಚಿಸಲು ವಿವಿಧ ದರ ಪರಿಷ್ಕರಣೆ ಮಾದರಿಗಳ ವಿಶ್ಲೇಷಣೆ ನಡೆಸಲಾಗಿದೆ. ಮೂರು ವರ್ಷಕ್ಕೊಮ್ಮೆ ಶೇ.12 ದರ ಏರಿಸಿದರೆ ಆರ್ಥಿಕ ಆಂತರಿಕ ಆದಾಯದ ದರ (ಎಫ್ಐಆರ್ಆರ್) ಶೇ.7.96 ಆಗಲಿದ್ದು, ಎರಡು ವರ್ಷಕ್ಕೊಮ್ಮೆ ಇದೇ ಪ್ರಮಾಣದಲ್ಲಿ ದರ ಹೆಚ್ಚಿಸಿದರೆ ಅದು ಶೇ.11.11ಕ್ಕೆ ಏರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾರ್ಷಿಕ ಶೇ.5 ದರ ಪರಿಷ್ಕರಣೆ ಮಾಡಿದರೆ ಎಫ್ಐಆರ್ಆರ್ ಶೇ.10.41 ತಲುಪಲಿದೆ ಎಂಬ ಲೆಕ್ಕಾಚಾರವೂ ಇದೆ.
2025ರ ಫೆಬ್ರವರಿಯಲ್ಲಿ ಶೇ.51.55 ದರ ಏರಿಕೆಯ ಬಳಿಕ ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಪ್ರಸ್ತಾಪಿಸಲಾಗಿದ್ದ ಮತ್ತೊಂದು ದರ ಪರಿಷ್ಕರಣೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿತ್ತು. ಈ ನಡುವೆ ಹೊಸ ಡಿಪಿಆರ್ನಲ್ಲಿ ದರ ಏರಿಕೆಯ ಪರ್ಯಾಯ ಮಾದರಿಗಳನ್ನು ಉಲ್ಲೇಖಿಸಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ. ಆದರೆ, ಡಿಪಿಆರ್ನಲ್ಲಿನ ಈ ಲೆಕ್ಕಾಚಾರವೇ ಮುಂದಿನ ದರ ಪರಿಷ್ಕರಣೆಗೆ ಆಧಾರವಾಗುತ್ತದೆಯೇ ಎಂಬ ಬಗ್ಗೆ ಬಿಎಂಆರ್ಸಿಎಲ್ ಯಾವುದೇ ಸ್ಪಷ್ಟನೆ ನೀಡಿಲ್ಲ.
ಡಿಪಿಆರ್ ಪ್ರಕಾರ 2033ರ ವೇಳೆಗೆ ಈ ಮಾರ್ಗದಲ್ಲಿ ಪ್ರತಿದಿನ 6.44 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೆ, ಫೇರ್ಬಾಕ್ಸ್ನಿಂದ 1,837 ಕೋಟಿ ರೂ.ಹಾಗೂ ನಾನ್ಫೇರ್ಬಾಕ್ಸ್ನಿಂದ 327 ಕೋಟಿ ರೂ.ಸೇರಿ ಒಟ್ಟು 2,164 ಕೋಟಿ ರೂ.ಆದಾಯದ ಗುರಿಯನ್ನೂ ನಿಗದಿಪಡಿಸಲಾಗಿದೆ.
ಕಳೆದ ಬಾರಿ ಬೆಲೆ ಏರಿಕೆಗೆ ಶ್ರಮಿಸಿದಾಗ ಟಿಕೆಟೇತರ ಆದಾಯವನ್ನು ಹೆಚ್ಚಿಸುವಂತೆ ಬಿಎಂಆರ್ಸಿಎಲ್ ನೌಕರರಿಂದಲೇ ಸಲಹೆಗಳು ಬಂದಿತ್ತು. ಆದರೆ, ಕಾರ್ಯಾಚರಣೆಯ ಅನುಪಾತ ಸುಧಾರಿಸಲು ಹಾಗೂ ಕೆಲವರ್ಷ ಬಿಟ್ಟು ಏಕಾಏಕಿ ದರ ಏರಿಕೆ ಮಾಡುವ ಬದಲಾಗಿ ಪ್ರತಿವರ್ಷ ಶೇ. 5 ಏರಿಸಬೇಕು. ಇಲ್ಲದಿದ್ದರೆ ಬಿಎಂಆರ್ಸಿಎಲ್ ನಿವ್ವಳ ನಷ್ಟ 577 ಕೋಟಿ ರೂ. ಏರಿಕೆಯಾಗಲಿದೆ ಎಂದು ಎಫ್ಎಫ್ಸಿ ತಿಳಿಸಿತ್ತು. ಹೀಗಾಗಿ, ಮೆಟ್ರೋ ದರವನ್ನು ಫೆಬ್ರವರಿಯಲ್ಲಿ ಕನಿಷ್ಠ ದರ 11 ರೂ., ಗರಿಷ್ಠ ದರ 95 ರೂ. ಏರಿಕೆ ಮಾಡಲಾಗಿತ್ತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ದರ ಏರಿಕೆ ಪ್ರಸ್ತಾವ ಕೈಬಿಟ್ಟಿತ್ತು.