- ಅತ್ತಿಬೆಲೆವರೆಗೆ ಹಳದಿ ಮಾರ್ಗ ವಿಸ್ತರಣೆ
- 9 ನಿಲ್ದಾಣಗಳ ನಿಮಾರ್ಣ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ವಿಸ್ತರಿಸುವ ಯೋಜನೆಗೆ ಕಾರ್ಯಸಾಧ್ಯತಾ ವರದಿ ಸಿದ್ಧವಾಗಿದ್ದು, ಇದು ಬೆಂಗಳೂರು&ಹೊಸೂರು ಅಂತಾರಾಜ್ಯ ಮೆಟ್ರೋ ಸಂಪರ್ಕದ ಕನಸಿಗೆ ಮುನ್ನುಡಿಯಾಗುವ ಸಾಧ್ಯತೆ ಇದೆ.
ತಮಿಳುನಾಡು ಸರ್ಕಾರ ಹೊಸೂರು&ಬೊಮ್ಮಸಂದ್ರ ಮೆಟ್ರೋ ಸಂಪರ್ಕಕ್ಕೆ ಪ್ರಸ್ತಾವನೆ ಮುಂದಿಟ್ಟಿರುವ ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ 10.5 ಕಿ.ಮೀ. ಉದ್ದದ ಎತ್ತರಿಸಿದ ಮೆಟ್ರೋ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಮಾರ್ಗದಲ್ಲಿ 9 ನಿಲ್ದಾಣಗಳ ನಿಮಾರ್ಣ ಪ್ರಸ್ತಾಪವಿದ್ದು, ಚಂದಾಪುರ, ತಿರುಮಗೊಂಡನಹಳ್ಳಿ, ಬಾಳಗಾನಹಳ್ಳಿ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಯಾದವನಹಳ್ಳಿ ಸೇರಿ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಹೊಸೂರು ರಸ್ತೆಯ ಕೈಗಾರಿಕಾ ವಲಯ, ವಸತಿ ಪ್ರದೇಶಗಳು ಹಾಗೂ ಪ್ರತಿನಿತ್ಯ ಬೆಂಗಳೂರು ಕಡೆಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ತಮಿಳುನಾಡು ಸರ್ಕಾರದ ಪ್ರಸ್ತಾವನೆಯಂತೆ ಹೊಸೂರು&ಬೊಮ್ಮಸಂದ್ರ ನಡುವೆ 23 ಕಿ.ಮೀ. ಮೆಟ್ರೋ ಮಾರ್ಗ ನಿಮಾರ್ಣವಾಗಬೇಕಿದೆ. ಇದರಲ್ಲಿ 12 ಕಿ.ಮೀ. ಕರ್ನಾಟಕ ಹಾಗೂ 11 ಕಿ.ಮೀ. ತಮಿಳುನಾಡು ವ್ಯಾಪ್ತಿಯಲ್ಲಿರಲಿದೆ. ಹೀಗಾಗಿ ಅತ್ತಿಬೆಲೆವರೆಗೆ ಹಳದಿ ಮಾರ್ಗ ವಿಸ್ತರಣೆಯಾದರೆ ಭವಿಷ್ಯದಲ್ಲಿ ಬೆಂಗಳೂರು ಮೆಟ್ರೋ ಮತ್ತು ತಮಿಳುನಾಡಿನ ಮೆಟ್ರೋ ವ್ಯವಸ್ಥೆಗಳನ್ನು ಗಡಿ ಭಾಗದಲ್ಲಿ ಸಂಪರ್ಕಿಸುವ ಅವಕಾಶ ಸೃಷ್ಟಿಯಾಗಲಿದೆ.
ಆದರೆ, ಎರಡೂ ರಾಜ್ಯಗಳ ಮೆಟ್ರೋ ವ್ಯವಸ್ಥೆಗಳ ನಡುವೆ ತಾಂತ್ರಿಕ ವ್ಯತ್ಯಾಸವೇ ದೊಡ್ಡ ಸವಾಲಾಗಿದೆ. ಬಿಎಂಆರ್ಸಿಎಲ್ 750 ವೋಲ್ಟ್ ಡಿಸಿ ಥರ್ಡ್-ರೈಲ್ ವ್ಯವಸ್ಥೆ ಬಳಸುತ್ತಿದ್ದರೆ, ತಮಿಳುನಾಡು ಮೆಟ್ರೋ 25 ಕೆವಿ ಎಸಿ ಓವರ್ಹೆಡ್ ವ್ಯವಸ್ಥೆ ಬಳಸುತ್ತಿದೆ. ರೈಲುಗಳ ವಿನ್ಯಾಸದಲ್ಲಿಯೂ ವ್ಯತ್ಯಾಸವಿದೆ. ಜತೆಗೆ ಭೂಸ್ವಾಧಿನ, ಯೋಜನಾ ವೆಚ್ಚ ಹಾಗೂ ಪ್ರಯಾಣ ದರದ ಆದಾಯ ಹಂಚಿಕೆ ಕುರಿತು ಅಂತಿಮ ಸ್ಪಷ್ಟತೆ ಅಗತ್ಯವಿದೆ.
ಎರಡೂ ರಾಜ್ಯಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮೆಟ್ರೋ ಮಾರ್ಗ ನಿರ್ಮಿಸಿ, ಅತ್ತಿಬೆಲೆಯಲ್ಲಿ ಎರಡೂ ನಿಲ್ದಾಣಗಳನ್ನು ಪಾದಚಾರಿ ಮೇಲ್ಸೇತುವೆ ಮೂಲಕ ಸಂಪರ್ಕಿಸುವ ಪರ್ಯಾಯವೂ ಚರ್ಚೆಯಲ್ಲಿದೆ. ಈ ಮಾದರಿ ಜಾರಿಯಾದರೆ ನೇರವಾಗಿ ರೈಲು ವ್ಯವಸ್ಥೆಗಳನ್ನು ಜೋಡಿಸುವ ತಾಂತ್ರಿಕ ಸವಾಲು ಕಡಿಮೆಯಾಗಲಿದೆ. ಇದೀಗ ಬಿಎಂಆರ್ಸಿಎಲ್ ಡಿಪಿಆರ್ ಸಿದ್ಧಪಡಿಸಲು ಮುಂದಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯಿದೆ. ಹಳದಿ ಮಾರ್ಗ ಅತ್ತಿಬೆಲೆ ತಲುಪಿದರೆ ಅದು ಕೇವಲ ಬೆಂಗಳೂರು ನಗರದ ಮೆಟ್ರೋ ವಿಸ್ತರಣೆಯಾಗದೆ, ಭವಿಷ್ಯದ ಬೆಂಗಳೂರು&ಹೊಸೂರು ಅಂತಾರಾಜ್ಯ ಸಾರ್ವಜನಿಕ ಸಾರಿಗೆ ಸಂಪರ್ಕಕ್ಕೆ ಪ್ರಮುಖ ಕೊಂಡಿಯಾಗುವ ನಿರೀಕ್ಷೆ ಮೂಡಿಸಿದೆ.
ಬೊಮ್ಮಸಂದ್ರದಿಂದ ನಾರಾಯಣ ಹೃದ್ರೋಗ ವಿಜ್ಞಾನಗಳ ಸಂಸ್ಥೆ ಬಳಿ ವಿಸ್ತರಿತ ಮಾರ್ಗದ ಮೊದಲ ನಿಲ್ದಾಣ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಬಳಿಕ ಮುಂದೆ ಚಂದಾಪುರ ಸರ್ಕಲ್, ಹಳೇ ಚಂದಾಪುರ, ತಿರುಮಗೊಂಡನಹಳ್ಳಿ, ಬಾಳಗಾನಹಳ್ಳಿ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಯಾದವನಹಳ್ಳಿ, ಅತ್ತಿಬೆಲೆ ಹಾಗೂ ಅತ್ತಿಬೆಲೆ ರ್ಟಮಿನಲ್ ನಿಲ್ದಾಣಗಳು ಬರಲಿವೆ. ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಾದ ನೇರಳೂರು, ಚಂದಾಪುರ, ಮಸ್ರೂರು ಮತ್ತು ಸೂರ್ಯನಗರ, ಜಿಗಲ, ಗಿಡ್ಡೇನಹಳ್ಳಿ ಮತ್ತು ಕೃಷ್ಣಸಾಗರಕ್ಕೂ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ.