ಮೃತ ವ್ಯಕ್ತಿ ಗಜಲಿಂಗಪ್ಪ 
ಬೆಂಗಳೂರು

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಗಾರೆ ಕೆಲಸಗಾರನ ಕೊಲೆ

ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ, ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ಶೋಧ

ಬೆಂಗಳೂರು: ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಗಾರೆ ಕೆಲಸಗಾರನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣ ಚಂದ್ರಾಲೇಔಟ್‌ನಲ್ಲಿ ಗುರುವಾರ ಬೆಳಗಿನ ನಡೆದಿದೆ.

ರಾಯಚೂರು ಜಿಲ್ಲೆಯ ಗಜಲಿಂಗಪ್ಪ (35) ಮೃತ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖಾಧಿಕಾರಿಗಳು ಬಲೆ ಬೀಸಿದ್ದಾರೆ.

ಗಜಲಿಂಗಪ್ಪ ಕಳೆದ 15 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ. ಇಲ್ಲಿಯೇ ಗಾರೆ ಕೆಲಸ ಮಾಡಿಕೊಂಡು ವಿನಾಯಕ ನಗರದ ಲೇಬರ್ ದಂಪತಿ ಸಮೇತ ನೆಲೆಸಿದ್ದ. ಮಕ್ಕಳು ಮತ್ತು ಪತ್ನಿ ಊರಿಗೆ ಹೋಗಿದ್ದರು. ಗಜಲಿಂಗಪ್ಪ ಒಬ್ಬರೇ ಶೆಡ್‌ನಲ್ಲಿದ್ದಾಗ ಗುರುವಾರ ಬೆಳಗಿನ ಜಾವ ಅವರೊಂದಿಗೆ ಕಿಡಿಗೇಡಿಗಳು ಜಗಳ ತೆಗೆದಿದ್ದರು. ಇಬ್ಬರ ನಡುವೆ ಜೋರು ವಾಗ್ವಾದ ನಡೆದಾಗ ಗಜಲಿಂಗಪ್ಪನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೃತ್ಯದಲ್ಲಿ ಎಷ್ಟು ಜನರು ಭಾಗಿಯಾಗಿದ್ದಾರೆ ಮತ್ತು ಯಾವ ವಿಚಾರ ಸಂಬಂಧ ಕೊಲೆ ಮಾಡಲಾಗಿದೆ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಬಿರುಸಿನ ತನಿಖೆ ಕೈಗೊಂಡಿದ್ದಾರೆ.

ಕೊಲೆ ನಡೆದ ಸ್ಥಳ ಹಾಗೂ ಸುತ್ತ-ಮುತ್ತಲಿದ್ದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಆರೋಪಿಗಳ ಗುರುತು ಪತ್ತೆಗೆ ಮುಂದಾಗಿದ್ದಾರೆ. ಈ ಸಂಬಂಧ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.