- ಕೋರಮಂಗಲದಿಂದ ಸರ್ಜಾಪುರದ ವರೆಗೆ 5.50 ಕಿ.ಮೀ. ರಸ್ತೆ
- 300 ಕಿ.ಮೀ. ನಿಮಾರ್ಣಕ್ಕೆ ಯೋಜನೆ
- ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಂದಿನ ವರ್ಷ ಮಾರ್ಚ್ ವೇಳೆಗೆ ಕೋರಮಂಗಲದಿಂದ ಸರ್ಜಾಪುರವರೆಗಿನ 5.50 ಕಿ.ಮೀ. ಉದ್ದದ ಬಫರ್ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ರಾಜಕಾಲುವೆ ಪಕ್ಕದಲ್ಲಿ ಬಫರ್ ರಸ್ತೆ ನಿಮಾರ್ಣ ಕಾಮಗಾರಿಗಳನ್ನು ಸೋಮವಾರ ಪರಿಶೀಲನೆ ನಡೆಸಿ ಮಾಧ್ಯಮಗಳ ಜತೆ ಮಾತನಾಡಿದರು.
ಬಫರ್ ರಸ್ತೆಗಳು ನಗರದಲ್ಲಿ ಸಂಚಾರ ಸಿಕ್ಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅನುಕೂಲವಾಗಲಿದೆ. ಕೆರೆಗಳು ಹಾಗೂ ರಾಜಕಾಲುವೆ ಪಕ್ಕದಲ್ಲಿರುವ ಬಫರ್ ವಲಯದಲ್ಲಿ ರಸ್ತೆ ನಿಮಾರ್ಣ ಮಾಡಲಿದ್ದೇವೆ. ಮೊದಲ ಹಂತದಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲು ಎಂ.ಜಿ ರಸ್ತೆಯಿಂದ ಬೆಳ್ಳಂದೂರಿನವರೆಗೆ ಸ್ಥಳ ಗುರುತಿಸಲಾಗಿದೆ ಎಂದರು.
ಭಾರತೀಯ ಸೇನೆ ಈ ಭಾಗದಲ್ಲಿ ರಸ್ತೆ ನಿಮಾರ್ಣಕ್ಕೆ ಜಾಗ ನೀಡಿದ್ದಾರೆ. ಈ ಜಾಗ ಬಿಟ್ಟುಕೊಡುವಂತೆ ನಾವು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೆವು. ಅವರು ಸದ್ಯಕ್ಕೆ ಕೆಲಸ ಮಾಡಿಕೊಳ್ಳಿ ಎಂದು ಅನುಮತಿ ನೀಡಿದ್ದಾರೆ. ಇಲ್ಲಿ ಹೊಸ ರಸ್ತೆ ನಿಮಾರ್ಣವಾಗುತ್ತಿದ್ದು, ಸಾರ್ವಜನಿಕರು ಸೇನಾ ಪ್ರದೇಶದಿಂದ ಸುತ್ತುವ್ಟಜಿದು ಹೋಗುವುದು ತಪ್ಪಲಿದ್ದು, ಸುಮಾರು 10 ಕಿ.ಮೀ. ಪ್ರಯಾಣ ಕಡಿತವಾಗಲಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ರಾಜರಾಜೇಶ್ವರಿನಗರ, ಐಟಿಪಿಎಲ್ ಹಾಗೂ ಈ ಭಾಗ ಸೇರಿ ಅನೇಕ ಕಡೆಗಳಲ್ಲಿ ಕಾಮಗಾರಿ ಮಾಡುತ್ತಿದ್ದೇವೆ. ಈ ಬಫರ್ ವಲಯದಲ್ಲಿ ಯಾರಿಗೂ ಕಟ್ಟಡ ನಿಮಾರ್ಣಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಜಾಗ ಕಳೆದುಕೊಳ್ಳುವವರಿಗೆ ಟಿಡಿಆರ್ ನೀಡುತ್ತಿದ್ದೇವೆ. ಇದರಿಂದ ಅವರಿಗೆ ರಕ್ಷಣೆ ಸಿಗಲಿದೆ. ಮುಂದೆ ಯಾವುದೇ ಕೆಐಎಡಿಬಿ ಸೇರಿದಂತೆ ಇತರ ಆಸ್ತಿಗಳಿದ್ದರೆ, ಬಫರ್ ವಲಯ ರಸ್ತೆಗೆ ಜಾಗ ಬಿಟ್ಟು ಕಟ್ಟಡ ನಿಮಾರ್ಣ ಮಾಡಬೇಕೆಂದು ಸೂಚಿಸಿರುವುದಾಗಿ ಡಿಸಿಎಂ ವಿವರಿಸಿದರು.
ತಪಾಸಣೆ ವೇಳೆ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ತುಷಾರ್ ಗಿರಿನಾಥ್, ಬಿ&ಸ್ಮೆ$ಲ್ ತಾಂತ್ರಿಕ ನಿರ್ದೇಶಕ ಬಿ.ಎಸ್.ಪ್ರಹ್ಲಾದ್, ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಹಾಜರಿದ್ದರು.
ಬಫರ್ ರಸ್ತೆಗಳಲ್ಲಿ ಬಸ್, ಲಾರಿಯಂತಹ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಸಾರ್ವಜನಿಕರು, ಬೈಕ್, ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಭಾರಿ ವಾಹನಗಳಿಂದ ರಸ್ತೆ ಕುಸಿಯುವ ಸಮಸ್ಯೆಯಾಗಬಾರದು ಎಂದು ಈ ತೀಮಾರ್ನ ಕೈಗೊಂಡಿದ್ದೇವೆ.