ಬೆಂಗಳೂರು: ಚಿಂದಿ ಆಯುತ್ತಿದ್ದ ವ್ಯಕ್ತಿಯ ಕೈ-ಕಾಲು ಕಟ್ಟಿ ಹಲ್ಲೆ ಮಾಡಿದ್ದಲ್ಲದೆ, ಆತನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣ ಗಿರಿನಗರದಲ್ಲಿ ನಡೆದಿದೆ.
ಪಾದರಾಯನಪುರ ನಿವಾಸಿ ಸೈಯದ್ ಹಾಜಿ (45) ಮೃತ. ಗಿರಿನಗರದ 50 ಅಡಿ ರಸ್ತೆಯ ಈರಣ್ಣ ಗುಡ್ಡದಲ್ಲಿ ಬುಧವಾರ ಬೆಳಗ್ಗೆ 6 ಗಂಟೆಗೆ ಅಮಾನವೀಯ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು, ಸೈಯದ್ ಕೈ ಕಾಲಿಗೆ ಬೆಂಕಿ ಹಚ್ಚಿದಾಗ ತೀವ್ರ ಕಿರುಚುತ್ತಿದ್ದ. ಬೆಂಕಿಯ ಕೆನ್ನಾಲಿಗೆಗೆ ಹಗ್ಗಗಳು ಹರಿದ ಪರಿಣಾಮ ರಸ್ತೆಗೆ ಓಡಿ ಬಂದಿದ್ದಾನೆ. ಸ್ಥಳೀಯರು, ಬೆಂಕಿ ನಂದಿಸಿ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೈಯದ್ ದೇಹದ ಮೇಲೆ ತೀವ್ರ ಸುಟ್ಟ ಗಾಯಗಳಾಗಿದ್ದವು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೇ ಬುಧವಾರ ಮಧ್ಯಾಹ್ನ 3 ಗಂಟೆಗೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೈಯದ್ ಮೃತಪಟ್ಟ ಬಳಿಕ ಕೊಲೆ ಆರೋಪದಡಿ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೃತ್ಯ ನಡೆದ ಸ್ಥಳದ ಸುತ್ತಮುತ್ತ ಇರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಹತ್ಯೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಲು ಮುಂದಾಗಿದ್ದಾರೆ.
ಸೈಯದ್ ತನ್ನ ಮೂರು ಜನ ಸ್ನೇಹಿತರೊಂದಿಗೆ ಮದ್ಯ ಸೇವಿಸಲು ಈರಣ್ಣ ಗುಡ್ಡಕ್ಕೆ ಹೋಗಿದ್ದ ಆ ವೇಳೆ ಕಿತ್ತಾಟ ಉಂಟಾಗಿದ್ದರಿಂ ಕೋಪಗೊಂಡು ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.