ಮಲೆನಾಡು ಗಿಡ್ಡ ತಳಿಯ ಹಸುವಿನ ಜತೆ ಪಾಲಕ ಪ್ರವೀಣ್ ಬೆಳ್ಳಾರೆ
- ಅಪರೂಪದ ತಳಿಗಳ ಸಂರಕ್ಷಣೆಗೆ ಪ್ರಯತ್ನ
- ಗಮನ ಸೆಳೆದ ಕುಬ್ಜಗಾತ್ರದ, ಚಿಕ್ಕಕೊಂಬಿನ ಕರು
ಪವನ್ ಆಚಾರ್ಯ ನೀರ್ಚಾಲು, ಬೆಂಗಳೂರು
ಮಲೆನಾಡು ಗಿಡ್ಡ ತಳಿಯ ಅಪ್ಪಟ ದೇಸಿ ಗೋವುಗಳ ಸಂವರ್ಧನೆಗೆ ಕರಾವಳಿ ಭಾಗದಲ್ಲಿ ವಿವಿಧ ಪ್ರಯೋಗಗಳು ನಡೆಯುತ್ತಿದ್ದು, ಅಪರೂಪದ ಬಿತ್ತನೆ ಹೋರಿ ಹಾಗೂ ಅಂತಹದೇ ವರ್ಗದ ಹಸುಗಳನ್ನು ಜೋಡಿ ಮಾಡಿಸಿ ಅವುಗಳಿಂದ ಯೋಗ್ಯ ಕರುಗಳನ್ನು ಪಡೆಯುವ ಮೂಲಕ ಸಂವರ್ಧನೆ ಮಾಡುತ್ತಿದ್ದಾರೆ.
ಅದರಲ್ಲಿಯೂ ಕುಬ್ಜಗಾತ್ರದ, ಸಾಧುಗುಣವುಳ್ಳ, ಚಿಕ್ಕ ಕೊಂಬಿನ, ಹೆಚ್ಚಿನ ಹಾಲಿನ ಇಳುವರಿ ನೀಡುವ, ಅಪರೂಪವಾಗಿ ಜನಿಸುವ ಕಪಿಲವರ್ಣದ ಆನುವಂಶಿಕ ಹಿನ್ನೆಲೆಯಿಂದ ಹುಟ್ಟಿದ ಕರುಗಳು ಗಮನ ಸೆಳೆದಿದೆ.
ಮಲೆನಾಡಗಿಡ್ಡ ಗೋವುಗಳು ಗುಡ್ಡ ಪ್ರದೇಶ, ದಟ್ಟ ಕಾಡಿರುವ ಮಲೆನಾಡು, ಕರಾವಳಿ, ಒಳನಾಡುಗಳಅತಿ ಮಳೆ, ಅತಿ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಂಡ ಜಾತಿಯ ಗೋವುಗಳಾಗಿದೆ.
ವಿವಿಧ ಸೊಪ್ಪುಗಳನ್ನು ಮೇದು ಸತ್ವಭರಿತವಾದ ಹಾಲನ್ನು ನೀಡುವ ಇವುಗಳ ಹಾಲು ಸೆಗಣಿ ಗೋಮೂತ್ರ ಎಲ್ಲವೂ ಉಪಯುಕ್ತವಾಗಿದೆ. ರಾಜ್ಯದ ಹಲವು ಜಿಲ್ಲೆಗಳ ಗೋ ಆಸಕ್ತರಿಗೆ, ಗೋಶಾಲೆ, ಆಶ್ರಮ, ದೇವಾಲಯಗಳಿಗೆ ಉತ್ತಮ ಗೋವುಗಳನ್ನು ಒದಗಿಸಿಕೊಡುವ ಮೂಲಕ ಪ್ರವಿಣ್ ಬೆಳ್ಳಾರೆ ಎಂಬ ಗೋಪಾಲಕರು ಈ ತಳಿಯ ಗೋ ಸಂವರ್ಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ನೆರೆಯ ರಾಜ್ಯಗಳಿಗೂ ಗೋವುಗಳನ್ನು ನೀಡುವ ಮೂಲಕ ದೇಶದ ಯಾವುದೇ ಭಾಗದಲ್ಲೂ ಇರಬಲ್ಲ ಈ ವಿಶೇಷ ತಳಿಯನ್ನು ದೇಶಾದ್ಯಂತ ವ್ಯಾಪಿಸುವಂತೆ ಮಾಡುವ ಗುರಿಯನ್ನು ಹೊಂದಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸಲು ಬೇಕಾದ ದೇಹ ರಚನೆ, ಗಟ್ಟಿಮುಟ್ಟಾದ ಗೊರಸುಗಳು ಚಂಗನೆ ನೆಗೆಯುವ ಸಾಮರ್ಥ್ಯ, ಕಡಿಮೆ ಆಹಾರ, ಗುಡ್ಡಗಾಡಿನಲ್ಲಿ ಮೇಯುವ ಕಾರಣದಿಂದ ಔಷಧಿಯ ಗುಣಗಳನ್ನೊಳಗೊಂಡಿರುವ ಗವ್ಯ ಉತ್ಪನ್ನಗಳು ಮಲೆನಾಡು ಗಿಡ್ಡ ತಳಿಗಳಿಂದ ಪಡೆಯಬಹುದಾಗಿದೆ. ಅಲ್ಲದೆ ಸಾವಯವ ಕೃಷಿಗೂ ಈ ತಳಿಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.
ಮಲೆನಾಡಗಿಡ್ಡ ತಳಿಯ ಅಪ್ಪಟ ದೇಸಿ ತಳಿಗಳು ಅಳಿವಿನಂಚಿನಲ್ಲಿದ್ದು, ಕೆಲವೊಂದು ಅಪರೂಪದ ತಳಿಗಳನ್ನು ಸಂವರ್ಧನೆ ಮಾಡುವ ಪ್ರಯತ್ನದಲ್ಲಿ ಗೋಪಾಲಕರಿದ್ದಾರೆ. ಅದರಲ್ಲಿ ವ್ಯಾಘ್ರವರ್ಣದ ಗೋವು ಕೂಡ ಒಂದಾಗಿದೆ. ಹುಲಿಯ ಮೈಬಣ್ಣವನ್ನು ಹೊಂದಿರುವ ಈ ಗೋವು ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ. ಹುಲಿಯ ರೀತಿಯ ಕಪು ರೇಖೆಗಳು ಅದರ ಮೈಮೇಲೆ ಕಾಣ ಬಹುದು. ಇದೀಗ ಈ ವಿಶೇಷ ತಳಿಯ ಸಂವರ್ಧನೆಯಲ್ಲಿ ಪ್ರವಿಣ್ ಅವರು ನಿರತರಾಗಿದ್ದಾರೆ.
ಉತ್ತಮ ತಳಿ ಪಡೆಯಬೇಕಾದರೆ ಉತ್ತಮ ಗಣಲಕ್ಷಣಗಳುಳ್ಳ ಹಸುವಿನಿಂದ ಜನಿಸಿದ ಹೋರಿಯನ್ನು ಆಯ್ಕೆ ಮಾಡಿ, ಅದರ ತಾಯಿಯ ಗುಣಲಕ್ಷಣಗಳುಳ್ಳ ಕರುಗಳೇ ಜನಿಸುತ್ತದೆ ಎಂಬುದು ಅಧ್ಯಯನಗಳ ಮೂಲಕ ಸಾಭೀತಾಗಿದೆ. ಆ ಪ್ರಕಾರ ಉತ್ತಮ ಗುಣ ಸ್ವಭಾವಗಳಿರುವ ಹಸುಗಳಿಗೆ ಸಂವರ್ಧನೆ ಮಾಡಿಸಿ ಪಡೆದಂತಹ ಹೆಣ್ಣು ಹಾಗು ಅದರಲ್ಲೂ ವಿಶೇಷವಾಗಿ ಗಂಡು ಕರುಗಳಿಗೆ ಹಲವಾರು ರಾಜ್ಯಗಳಿಂದ ಬೇಡಿಕೆ ಬರುತ್ತಿದೆ. ಸುಮಾರು 6 ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು, ವಿವಿಧ ಹೊಸ ಪ್ರಯೋಗಗಳು ನಡೆಯುತ್ತಿದೆ.