southcitycommissioner 
ಬೆಂಗಳೂರು

ಮಳೆಗಾಲದ ಹೊತ್ತಿಗೆ ಪ್ರಮುಖ ರಸ್ತೆಗಳು ಸುಸ್ಥಿತಿಗೆ

ಪ್ರಮುಖ ಮುಖ್ಯಾಂಶಗಳು

  • 42 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಶೀಘ್ರ ಅನುಷ್ಠಾನ
  • ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮಾಹಿತಿ
ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನ ಸಂಚಾರವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರಸ್ತೆಜಾಲವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಇವುಗಳ ಕಾಮಗಾರಿ ಮುಂಬರುವ ಮಳೆಗಾಲಕ್ಕೆ ಮುನ್ನ ಮುಕ್ತಾಯಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ಹೇಳಿದ್ದಾರೆ.
‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ, ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ರಾಜ್ಯ ಸರ್ಕಾರ ಹಾಗೂ ಜಿಬಿಎ ಮಾರ್ಗದರ್ಶನದಲ್ಲಿ ಕಾರ್ಪೋರೇಷನ್ ಪ್ರದೇಶವನ್ನು ಸಾರ್ವಜನಿಕರ ವಾಸಯೋಗ್ಯವಾಗಿಸಲು ಸಂಕಲ್ಪ ಕೈಗೊಳ್ಳಲಾಗಿದೆ. ಇದಕ್ಕಾಗಿ ನಾಗರಿಕರು ಹಾಗೂ ನಿವಾಸಿ ಕಲ್ಯಾಣ ಸಂಘಗಳ (ಆರ್‌ಡಬ್ಲ್ಯುಎ) ಸಹಕಾರ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಹೊಸದಾಗಿ ರಚಿಸಲ್ಪಟ್ಟಿರುವ ಸೌತ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ 2,985.81 ಕಿ.ಮೀ. ಉದ್ದದ 17,389 ರಸ್ತೆಗಳಿವೆ. ಈ ಪೈಕಿ 311.55 ಕಿ.ಮೀ. ಉದ್ದದ 140 ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳು (ಪ್ರಮುಖ ರಸ್ತೆ) ಸೇರಿವೆ. ಇವುಗಳಲ್ಲಿ 82.56 ಕಿ.ಮೀ. ರಸ್ತೆಗಳನ್ನು ಡಾಂಬರೀಕರಣಗೊಳಿಸಲು 288 ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ 144 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನದಲ್ಲಿದ್ದು, ಶೇ.80 ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಏಪ್ರಿಲ್ ಅಂತ್ಯದೊಳಗೆ ಮುಕ್ತಾಯಗೊಳಿಸಿ ಸಂಚಾರಯೋಗ್ಯ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ:
ರಸ್ತೆಜಾಲವನ್ನು ಮೇಲ್ದರ್ಜೆಗೇರಿಸಲು ಆಯ್ದ ಪ್ರಮುಖ ರಸ್ತೆಗಳನ್ನು ವೈಟ್ ಟಾಪಿಂಗ್‌ಗೆ ಬದಲಾಯಿಸಲಾಗುತ್ತಿದೆ. ಈ ರಸ್ತೆಗಳನ್ನು ಗುಣಮಟ್ಟದೊಂದಿಗೆ ನಿರ್ಮಿಸುತ್ತಿದ್ದು, ಒಮ್ಮೆ ನಿರ್ಮಾಣಗೊಂಡ ಬಳಿಕ 20-25 ವರ್ಷ ಬಾಳಿಕೆ ಬರಲಿದೆ. ಬೆಸ್ಕಾಂ, ಜಲಮಂಡಳಿ ಸೇರಿ ದೊಡ್ಡ ಏಜೆನ್ಸಿಗಳು ರಸ್ತೆ ಅಗೆತ ವೇಳೆ ಪ್ರಮಾದ ತಪ್ಪಿಸಲು ‘ಮಾರ್ಕ್ಸ್’ ತಂತ್ರಾಂಶ ರೂಪಿಸಿದ್ದು ಸ್ಥಳಪರಿಶೀಲನೆ ಬಳಿಕವೇ ಅನುಮತಿ ನೀಡಲಾಗುತ್ತಿದೆ. ಜತೆಗೆ ವಿವಿಧ ಇಲಾಖೆಗಳೊಂದಿಗೆ ನಿಯಮಿತವಾಗಿ ಸಮನ್ವಯ ಸಭೆ ನಡೆಸಿ ನೋಡಲ್ ಅಧಿಕಾರಿಗಳನ್ನು ನೇಮಿಸಿರುವುದರಿಂದ ರಸ್ತೆ ಕಾಮಗಾರಿಗಳ ಮೇಲೆ ನಿರಂತರವಾಗಿ ನಿಗಾ ಇಡಲಾಗಿದೆ ಎಂದರು.
ನಾಗರಿಕರ ಸಹಭಾಗಿತ್ವಕ್ಕೆ ಆದ್ಯತೆ:
ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಏರಿಯಾ ವಸತಿ ಪ್ರದೇಶಗಳೇ ಆಗಿವೆ. ಹಾಗಾಗಿ ನಾಗರಿಕರಿಗೆ ಬೇಕಾದ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಕಾರ್ಪೋರೇಷನ್ ಜತೆಗೆ ಸಾರ್ವಜನಿಕರ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ. ಸ್ಥಳೀಯ ನಿವಾಸಿ ಸಂಘಗಳು, ಎನ್‌ಜಿಒ, ನಾಗರಿಕ ವೇದಿಕೆಗಳೊಂದಿಗೆ ಸತತ ಸಭೆಗಳನ್ನು ನಡೆಸಿ ಸೌಲಭ್ಯ ಅನುಷ್ಠಾನ ಮಾಡಲಾಗುತ್ತಿದೆ. ಸ್ಥಳೀಯ ಪರಿಣಿತರೊಂದಿಗೆ ಚರ್ಚಿಸಿ ಅವರ ಸಲಹೆಗಳನ್ನು ಸ್ವೀಕರಿಸಿ ಜಾರಿಗೊಳಿಸಲಾಗುತ್ತಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಕೈಗೊಳ್ಳುವ ಅಧ್ಯಯನ ವರದಿಗಳನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಕೆಲ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆಯ್ದ ಉದ್ಯಾನ, ಫುಟ್‌ಪಾತ್, ಜಂಕ್ಷನ್​​​ ಹಾಗೂ ರಸ್ಉತೆಗಳನ್ನು ಉಚಿತವಾಗಿ ನೀಡುವ ಚಿಂತನೆ ಇದೆ ಎಂದು ಕೆ.ಎನ್. ರಮೇಶ್ ವಿವರಿಸಿದರು.
ಆಯುಕ್ತರ ನಡೆ ಜನರ ಕಡೆಗೆ ಯಶಸ್ವಿ:
ಸ್ಥಳೀಯ ಸಮಸ್ಯೆಗಳನ್ನು ಅಲ್ಲಿನ ಜನರೊಟ್ಟಿಗೆ ಚರ್ಚಿಸಿ ಪರಿಹಾರ ಒದಗಿಸಲು ವಾರಕ್ಕೊಮ್ಮೆ ‘ಆಯುಕ್ತರ ನಡೆ ಜನರ ಕಡೆಗೆ’ ಕಾರ್ಯಕ್ರಮವನ್ನು ಇತ್ತೀಚಿಗೆ ಚಾಲನೆ ನೀಡಲಾಗಿದೆ. ಆಯಾ ಪ್ರದೇಶಗಳಿಗೆ ತೆರಳಿ ಅಲ್ಲಿನ ರಸ್ತೆ, ಚರಂಡಿ, ಬೀದಿ ದೀಪ, ಉದ್ಯಾನ ಅಭಿವೃದ್ಧಿ, ಪಾಲಿಕೆ ಸೌಲಭ್ಯಗಳ ಬಳಕೆ ಇತ್ಯಾದಿ ವಿಷಯಗಳನ್ನು ಸ್ಥಳೀಯ ನಾಗರಿಕರು ಮತ್ತು ಅಧಿಕಾರಿಗಳ ಸಮಕ್ಷಯ ಅಹವಾಲು ಆಲಿಸಲಾಗುತ್ತಿದೆ. ಈಗಾಗಲೇ 6 ಕಾರ್ಯಕ್ರಮ ಪೂರ್ಣಗೊಳಿಸಿದ್ದು, ಜನರಿಂದ ಹೆಚ್ಚಿನ ಸ್ಪಂದನೆ ದೊರೆತಿದೆ. ಕಚೇರಿಗೆ ಅಲೆದಾಡುವ ಬದಲು ಮನೆ ಬಾಗಿಲಲ್ಲೇ ಸಮಸ್ಯೆ ಇತ್ಯರ್ಥವಾಗುತ್ತಿದೆ ಎಂಬ ಮೆಚ್ಚುಗೆಯ ಮಾತು ಸಾರ್ವಜನಿಕರಿಂದ ಬಂದಿದೆ ಎನ್ನುತ್ತಾರೆ ಆಯುಕ್ತರು.
2.1 ಲಕ್ಷ ಇ-ಖಾತಾ ವಿತರಣೆ:
ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 4.55 ಲಕ್ಷ ಸಂಖ್ಯೆಯಷ್ಟು ಸ್ವತ್ತುಗಳಿವೆ. ಈ ಪೈಕಿ 2.1 ಲಕ್ಷ ಸ್ವತ್ತುಗಳಿಗೆ ಇ-ಖಾತಾ ವಿತರಿಸಲಾಗಿದೆ. ‘ಬಿ ಟು ಎ ಖಾತಾ ಅಭಿಯಾನ’ ಅಡಿಯಲ್ಲಿ 1,100 ಅರ್ಜಿಗಳನ್ನು ಸ್ವೀಕರಿಸಿದ್ದು, ದಾಖಲಾತಿ ಪರಿಶೀಲನೆ ಹಂತದಲ್ಲಿವೆ. ಸರ್ಕಾರ ರೂಪಿಸಿರುವ ಮಾರ್ಗಸೂಚಿ ಅನ್ವಯ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿದ ಬಳಿಕ ಎ ಖಾತಾ ಸೌಲಭ್ಯ ನೀಡಲಾಗುವುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ಜನಜಾಗೃತಿ ಹಮ್ಮಿಕೊಳ್ಳಲಾಗುತ್ತದೆ.
500 ಬೀದಿನಾಯಿಗಳಿಗೆ ಆಶ್ರಯತಾಣ:
ಸುಪ್ರೀಂಕೋರ್ಟ್ ಆದೇಶದ ಬಳಿಕ ಬೀದಿ ನಾಯಿಗಳಿಗೆ ಆಶ್ರಯ ತಾಣ ಕಲ್ಪಿಸುವುದಕ್ಕಾಗಿ ಬಿಂಗೀಪುರದಲ್ಲಿ 28 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ 500 ಶ್ವಾನಗಳನ್ನು ನಿಗಾ ವಹಿಸುವ ಕೇಂದ್ರ ನಿರ್ಮಿಸುತ್ತಿದ್ದು, ಶೀಘ್ರ ಮುಕ್ತಾಯವಾಗಲಿದೆ. ಸದ್ಯ 2025ರ ವರದಿ ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿ 54,701 ಬೀದಿ ನಾಯಿಗಳಿವೆ. ಹುಳಿಮಾವು ಹಾಗೂ ಚಾಮರಾಜಪೇಟೆಯಲ್ಲಿ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕೇಂದ್ರಗಳಿದ್ದು, ನಿತ್ಯ 27 ಸಂಖ್ಯೆಯಷ್ಟು ಸಂತಾನಹರಣ ಚಿಕಿತ್ಸೆ ಕೈಗೊಳ್ಳುವ ಸೌಲಭ್ಯವಿದೆ. ಕಳೆದ ವಾರ ಆಹಾರ ವಿತರಿಸುವ 68 ಸ್ಥಳಗಳನ್ನು ಗುರುತಿಸಿದ್ದು, ಜನರಿಗೆ ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಲು ಹಲವು ಉಪಕ್ರಮ ಕೈಗೊಳ್ಳಲಾಗಿದೆ.
ಮಲ್ಟಿಲೆವಲ್ ಕಾರ್ ಪಾರ್ಕಿಂಗ್ ಸೌಲಭ್ಯ:
ಪ್ರಮುಖ ವಾಣಿಜ್ಯ ಪ್ರದೇಶ ಹಾಗೂ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುವುದು. ನಮ್ಮ ಮೆಟ್ರೋ ಜತೆ ಒಡಂಬಡಿಕೆ ಮಾಡಿಕೊಂಡು ಈ ಸೌಲಭ್ಯ ಜಾರಿಗೆ ನಿರ್ಧರಿಸಲಾಗಿದೆ. ಜಯನಗರ ಕಾಂಪ್ಲೆಕ್ಸ್‌ನಲ್ಲಿ ವಾಹನ ನಿಲುಗಡೆಗೆ ಶೀಘ್ರ ಅವಕಾಶ ನೀಡಲಾಗುವುದು. ಜಯನಗರ ಮತಕ್ಷೇತ್ರದಲ್ಲಿ 42 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದ್ದು, 930 ಕಾರುಗಳು ಹಾಗೂ 3,000 ದ್ವಿಚಕ್ರ ವಾಹನಗಳ ನಿಲುಗಡೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪದ್ಮನಾಭನಗರ, ಬಿಟಿಎಂ ಬಡಾವಣೆ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು ದಕ್ಷಿಣ ವಿಭಾಗದಲ್ಲೂ ಪಾರ್ಕಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ. ಈ ಸುಧಾರಣೆಯಿಂದಾಗಿ ವಾರ್ಷಿಕ 30 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ.
ಸಂವಾದದಲ್ಲಿ ವ್ಯಕ್ತವಾದ ಮುಖ್ಯಾಂಶ:
* ಈಜಿಪುರ ಮೇಲ್ಸೇತುವೆ ಮುಂದಿನ ಅಕ್ಟೋಬರ್ ವೇಳೆಗೆ ಸಂಚಾರಮುಕ್ತಕ್ಕೆ ಗುರಿ.
* ಪಾದಚಾರಿ ಮಾರ್ಗಗಳನ್ನು 35 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ.
* ಬನಶಂಕರಿ ಜಂಕ್ಷನ್‌ನಲ್ಲಿ ವರ್ತುಲಾಕಾರದ ಪಾದಚಾರಿ ಸ್ಕೈವಾಕ್ ನಿರ್ಮಾಣ.
* 18 ಸ್ಥಳಗಳಲ್ಲಿ ಪಿಪಿಪಿ ಯೋಜನೆಯಡಿ ಸ್ಕೈವಾಕ್ ಅನುಷ್ಠಾನಕ್ಕೆ ಕ್ರಮ.
* 304 ಉದ್ಯಾನಗಳಲ್ಲಿ ಕೆಲವೊಂದನ್ನು ನಿರ್ವಹಣೆಗಾಗಿ ದತ್ತು ನೀಡಲು ಚಿಂತನೆ.
* ಒಟ್ಟು 59 ಕೆರೆಗಳ ಪೈಕಿ 7 ಮಾತ್ರ ಅಭಿವೃದ್ಧಿಪಡಿಸಬೇಕಿದ್ದು, ಸಮಗ್ರ ಯೋಜನೆ ಸಿದ್ಧ.
* ಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ವಾರ್ಡ್‌ಗಳ ಗಡಿ ಭಾಗದ 58 ಸಾವಿರ ಮತದಾರರ ಹೆಸರು ಅಂತಿಮಗೊಳಿಸುವಿಕೆ ಬಾಕಿ.
* ದಕ್ಷಿಣ ಪಾಲಿಕೆಯ ಎಲ್ಲ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲು ಕ್ರಮ.
* ತ್ಯಾಜ್ಯ ಸಮಸ್ಯೆ ನಿವಾರಣೆಗೆ ‘ಕಸ-ರಸ’ ಘಟಕ/ಬಯೋಗ್ಯಾಸ್ ಘಟಕಗಳ ಸ್ಥಾಪನೆಗೆ ಚಿಂತನೆ.