ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ಸಹಕಾರನಗರದ ಪಾರ್ಕ್ ಸಮೀಪ ರಸ್ತೆ ಗುಡಿಸುವ ಪಾರಂಪರಿಕ ಪೊರಕೆಗಳ ಬದಲಾಗಿ ಯಂತ್ರಗಳ ಬಳಕೆಗೆ ಗುರುವಾರ ಆಯುಕ್ತ ಪಿ.ಸುನೀಲ್ ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶುಚಿಗೊಳಿಸುವ ಯಂತ್ರಗಳನ್ನು ತಾವೇ ಚಲಾಯಿಸಿ ಅದರ ಸಾಧಕ ಬಾಧಕಗಳನ್ನು ಖುದ್ದು ಪರಿವೀಕ್ಷಣೆ ನಡೆಸಿದರು. ಪೌರಕಾರ್ಮಿಕರಿಗೆ ಇವುಗಳ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಯಿತು. ಸ್ವಚ್ಛ ಸುಂದರ ನಗರವನ್ನಾಗಿಸಲು ಯಾವ ರೀತಿಯ ಕೆಲಸಗಳನ್ನು ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ನೀಡಿದರು.
ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತಿಕರಣಗೊಳಿಸಲು ಹಾಗೂ ಪೌರಕಾರ್ಮಿಕರ ಕೆಲಸವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಯಂತ್ರಗಳ ಬಳಕೆ ಮಾಡಲಾಗುತ್ತಿದೆ. 33 ಕಸಗುಡಿಸುವ ಯಂತ್ರಗಳು, 14 ಬ್ಲೋವರ್ ಮಷೀನ್, ರಸ್ತೆ ಕಸವನ್ನು ಶೇಖರಣೆ ಮಾಡಲು 35 ಟ್ರಾಲಿ ಡಸ್ಟ್ಬಿನ್ಗಳನ್ನು ಪ್ರಾಯೋಗಿಕವಾಗಿ ಇನ್ನು ಮುಂದೆ ಉಪಯೋಗಿಸಲಾಗುತ್ತದೆ. ಸುರಕ್ಷತಾ ದೃಷ್ಟಿಯಿಂದ 23 ಜೊತೆ ಟ್ರಾಫಿಕ್ ಕೋನ್ಸ್ಗಳನ್ನು ಸಹ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಪರ ಆಯುಕ್ತೆ ಲತಾ, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಪಲ್ಲವಿ, ಡಿಜಿಎಂ ರಶ್ಮಿ ಇತರರು ಇದ್ದರು.