ಬೆಂಗಳೂರು: ಖಾಸಗಿ Photoಗಳನ್ನು ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಪ್ರಿಯಕರ, ತನ್ನ ಪ್ರೇಯಸಿಯಿಂದ ಬರೊಬ್ಬರಿ 9.75 ಲಕ್ಷ ರೂ.ಗಳನ್ನು ಪೀಕಿದ್ದಾನೆ.
ಸಂತ್ರಸ್ತೆಯ ತಂದೆ ಸೂರ್ಯ ಕುಮಾರ್ ನೀಡಿದ ದೂರಿನ ಮೇರೆಗೆ ಸ್ಕಂದ ಲೇಔಟ್ ನಿವಾಸಿಯಾದ ಚಂದನ್, ಚೇತನ್, ಚಂದ್ರಕಲಾ ಎಂಬಾತರ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ರಾಮಮೂರ್ತಿ ನಗರ ನಿವಾಸಿಯಾದ 25 ವರ್ಷದ ಯುವತಿ, ಎಂಬಿಎ ಪದವಿ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು, ಈಕೆಗೆ ಆರೋಪಿ ಚಂದನ್ ಕೆಲ ವರ್ಷಗಳ ಹಿಂದೆ ಪರಿಚಯವಾಗಿದ್ದ. ಇಬ್ಬರ ನಡುವೆ ಉಂಟಾಗಿದ್ದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಹಾಗಾಗಿ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿಯಕರಣನನ್ನೇ ನಂಬಿದ್ದ ಯುವತಿ, ಆತನನ್ನೇ ಮದುವೆಯಾಗುತ್ತೇನೆ ಎಂಬ ಭರವಸೆಯಲ್ಲಿ ಆತ ಕರೆದ ಕಡೆಗೆ ಹೋಗುತ್ತಿದ್ದಳು. ಈ ವೇಳೆ ಇಬ್ಬರು Photo ತೆಗೆದುಕೊಂಡಿದ್ದರು. ಇದನ್ನು ಇಟ್ಟುಕೊಂಡ ಆರೋಪಿ, ಪ್ರೇಯಸಿಯಿಂದ ಲಕ್ಷಗಟ್ಟಲೇ ಹಣ ಪೀಕಿದ್ದಾನೆ.
ಕೆಲದಿನಗಳಿಂದ ಪ್ರೇಯಸಿಗೆ ಬೆದರಿಸಿ ಬರೊಬ್ಬರಿ 9.75 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪಿ ಪ್ರಿಯಕರನು, ಹೆಚ್ಚಿನ ಹಣಕ್ಕಾಗಿ ನಿರಂತರ ಬೇಡಿಕೆಯಿಟ್ಟಿದ್ದ. ಯುವತಿ ಕೊಡುವುದಿಲ್ಲ ಎಂದು ನಿರಾಕರಿಸಿ, ಪೊಲೀಸರಿಗೆ ದೂರು ಕೊಡುತ್ತೇನೆ ಎಂದಿದ್ದಳು. ಇದರಿಂದ ಕೋಪಗೊಂಡಿದ್ದ ಆರೋಪಿ, ಯುವತಿಗೆ ಜೀವ ಬೆದರಿಕೆ ಹಾಕುವ ಜತೆಗೆ ಆಕೆಯ ಕುಟುಂಬವನ್ನೇ ಸಾಯಿಸಿ ನಾಶ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.