- ನಗರ ಸುಧಾರಣೆ ಬದಲು ಹಾಳು ಮಾಡಲೆಂದೇ ಕೆಲಸ ಮಾಡುತ್ತಿದ್ದೀರೆಂದು ಗರಂ
- ಬೆಂಗಳೂರು ನಗರ ಅಭಿವೃದ್ಧಿ ಕುರಿತು ಪಂಚ ಪಾಲಿಕೆಗಳ ಅಧಿಕಾರಿಗಳ ಸಭೆ
ಬೆಂಗಳೂರು: ಮಹಾನಗರದಲ್ಲಿರುವ ಪಾರ್ಕ್‌ಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ, ಬದಲಾಗಿ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ನಿರ್ವಹಣೆಯ ಹೆಸರಿನಲ್ಲಿ ಹಣ ಖರ್ಚು ಮಾಡಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪಾಲಿಕೆ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.
ಈ ಹಿಂದೆ ಬೆಂಗಳೂರು ಉದ್ಯಾನಗಳಿಗೆ ಹೆಸರುವಾಸಿಯಾಗಿತ್ತು. ಆದರೀಗ ಪಾರ್ಕ್‌ಗಳ ಸ್ಥಿತಿ ಶೋಚನೀಯವಾಗಿವೆ. ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ನೀವೇ ನೇರ ಜವಾಬ್ದಾರರಾಗುತ್ತೀರಿ ಎಂದು ತೋಟಗಾರಿಕಾ ವಿಭಾಗದ ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದರು.
ಪಂಚ ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿ, ವಿವಿಧ ಯೋಜನೆಗಳ ಬಗ್ಗೆ ಜಿಬಿಎ ಆವರಣದಲ್ಲಿರುವ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೊರವಲಯ ರಸ್ತೆಯಲ್ಲಿ ಹೈಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳಲ್ಲಿ ಪ್ರತಿ 20 ಮೀ.ಗೆ ಒಂದು ವಿದ್ಯುತ್ ಕಂಬ ಅಳವಡಿಸಬೇಕಿದೆ. ಆದರೆ, ಕೆಲವೆಡೆ 5ರಿಂದ 10 ಮೀ.ಗೊಂದು ಕಂಬಗಳನ್ನು ಅಳವಡಿಸಲಾಗಿದೆ. ಇದು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡುತ್ತಿರುವ ಕಾಮಗಾರಿಯೇ ಅಥವಾ ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಉದ್ದೇಶದಿಂದ ಮಾಡುತ್ತಿರುವ ಕಾಮಗಾರಿಯೇ ಎಂದು ಪ್ರಶ್ನಿಸಿದರು.
ಬೆಂಗಳೂರು ಸುಧಾರಣೆಯಾಗಬೇಕೆಂದು ನೀವು ಕೆಲಸ ಮಾಡುತ್ತಿಲ್ಲ. ಹಾಳು ಮಾಡಲೆಂದೇ ಕೆಲಸ ಮಾಡುತ್ತಿದ್ದೀರಾ? ಎಂದು ಬಿ-ಸ್ಮೈಲ್ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ವೈಟ್ ಟಾಪಿಂಗ್ ಕಾಮಗಾರಿಗೆ ವೇಗ ನೀಡಿ:
ನಗರದಲ್ಲಿ ಪ್ರಸ್ತುತ 1,700 ಕೋಟಿ ರೂ. ವೆಚ್ಚದಲ್ಲಿ 120 ಕಿ.ಮೀ. ಉದ್ದದ 117 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ 61 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿಯಿರುವ ಕೆಲಸವನ್ನು ಬೇಗನೆ ಪೂರ್ಣಗೊಳಿಸಬೇಕು. ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ವೇಳೆ ಫುಟ್‌ಪಾತ್‌ಗಳನ್ನು ಅತಿಯಾಗಿ ಎತ್ತರಿಸುವ ಬದಲು, ವೀಲ್ಹ್‌ಚೇರ್‌ಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳ ಹಾಜರಾತಿಗೆ ಹೊಸ ವ್ಯವಸ್ಥೆ:
ಐದು ಪಾಲಿಕೆಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಖಚರ್ಯೆ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಬೇಕು. ಈಗಾಗಲೇ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಪಾಲಿಕೆ ಶಾಲೆಗಳಲ್ಲಿಯೂ ಅಳವಡಿಸಿಕೊಳ್ಳಲು ಶಿಕ್ಷಣ ವಿಭಾಗದ ಅಧಿಕಾರಿಗಳು ಗಮನ ಹರಿಸಬೇಕು. ಪಾಲಿಕೆಗಳಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಆಯೋಜಿಸುವಂತೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುಷಮಾ ಗೋಡಬೋಲ್, ನಿತೀಶ್, ವೆಂಕಟಾಚಲಪತಿ, ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಜಿ.ಜಗದೀಶ್, ಡಾ. ಕೆ.ವಿ. ರಾಜೇಂದ್ರ ಹಾಗೂ ಇತರ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.