voterlist 
ಬೆಂಗಳೂರು

ಮತಪಟ್ಟಿ ತಾಳೆಗೆ ಹೆಚ್ಚಿನ ಸಮಯ ಕೋರಿ ಆಯೋಗಕ್ಕೆ ಪತ್ರ

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ
  • 1,500 ಮತದಾರರಿಗೊಂದು ಮತಗಟ್ಟೆ ಸ್ಥಾಪನೆಗೆ ಸಲಹೆ
ಬೆಂಗಳೂರು: ಜಿಬಿಎ ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿ ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ತಾಳೆ ಮಾಡುವ ಕಾರ್ಯಕ್ಕೆ ಹೆಚ್ಚಿನ ಸಮಯ ವಿಸ್ತರಣೆಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಎಂ.ಮಹೇಶ್ವರ್ ರಾವ್ ಹೇಳಿದ್ದಾರೆ.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ವಾರ್ಡ್‌ವಾರು ಕರಡು ಮತದಾರರ ಪಟ್ಟಿ ಪ್ರಕಟಿಸಿರುವ ಕುರಿತು ಆಯೋಗದ ಪರಿಷ್ಕೃತ ಸುತ್ತೋಲೆಯಲ್ಲಿ ನೀಡಿರುವ ಸೂಚನೆಗಳ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ವೇಳೆ ಅವರು ಈ ವಿಷಯ ತಿಳಿಸಿದರು.
ಚುನಾವಣೆಗೆ ಸಂಬಂಧಿಸಿ ಜ.19ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ, ಜ.22ರಂದು ಆಯೋಗವು ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಆಯಾ ಪಾಲಿಕೆಗಳಲ್ಲಿ ಸಂಬಂಧಿಸಿದ ಕೆಲಸವನ್ನು ಕೈಗೊಳ್ಳಲಾಗುತ್ತಿದೆ. ಶಾಸನಬದ್ಧ ಕಾರ್ಯ ಪೂರ್ಣಗೊಳಿಸಲು ಸಮಯ ವಿಸ್ತರಣೆ ಮಾಡುವಂತೆ ಕೋರಿ ಆಯೋಗಕ್ಕೆ ಕೂಡಲೇ ಪತ್ರ ಬರೆಯುವಂತೆ ಸಭೆಯಲ್ಲಿದ್ದ ಜಿಬಿಎ ಚುನಾವಣಾ ವಿಭಾಗದ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
1,500 ಮತದಾರರಿಗೊಂದು ಮತಗಟ್ಟೆ:
ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಾಮಚಂದ್ರನ್ ಮಾತನಾಡಿ, ಈಗಾಗಲೇ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಬಿಎಲ್ಒಗಳು ಮನೆಮನೆಗೆ ಭೇಟಿ ನೀಡಿ ನಿಗದಿತ ನಮೂನೆಗಳ ಮೂಲಕ ಅರ್ಜಿ ಸ್ವೀಕರಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಗರಿಷ್ಠ 1,500 ಮತದಾರರಿಗೆ ಒಂದು ಮತಗಟ್ಟೆ ಇರಬೇಕೆಂದು ಆಯೋಗವು ನಿರ್ದೇಶಿಸಿದ್ದು, ಅದರಂತೆ ಎಲ್ಲ ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆಗೆ ಅನುಗುಣವಾಗಿ ಮತಗಟ್ಟೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಅವಧಿ ವಿಸ್ತರಣೆಗೆ ಪಕ್ಷಗಳ ಮನವಿ:
ಒಂದು ವಾರ್ಡ್ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಮತದಾರರ ಹೆಸರುಗಳು ಒಂದಕ್ಕಿಂತ ಹೆಚ್ಚಿನ ಕಡೆಗಳಲ್ಲಿ ಮತಪಟ್ಟಿಯಲ್ಲಿ ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವುದು, ವಾರ್ಡ್ ಮತದಾರರ ಪಟ್ಟಿಯನ್ನು ಆಯಾ ವಾರ್ಡ್ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಮತದಾರರ ಪಟ್ಟಿಯೊಂದಿಗೆ ತಾಳೆ ಹಾಕಬೇಕು. ಜತೆಗೆ 2025ರ ಅ.1ರ ನಂತರ ಪ್ರಕಟವಾಗುವ ವಿಧಾನಸಭಾ ಮತದಾರರ ಪೂರಕ ಪಟ್ಟಿಗಳಂತೆ ಮತದಾರರನ್ನು ವಾರ್ಡ್ ಕರಡು ಮತದಾರರ ಪಟ್ಟಿಗೆ ಪೂರಕ ಪಟ್ಟಿ-1 ರೂಪಿಸುವ ಸಲುವಾಗಿ ಆನ್‌ಲೈನ್ ಮ್ಯಾಟ್ರಿಕ್ಸ್ ಸಾಫ್ಟ್​​ವೇರ್‌ನಲ್ಲಿ ಅಳವಡಿಸುವ ಕಾರ್ಯಕ್ಕೆ ಸಮಯ ವಿಸ್ತರಣೆ ನೀಡುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಸಲ್ಲಿಸಿದರು.
ಸಭೆಯಲ್ಲಿ ಜಿಬಿಎ ಚುನಾವಣಾ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಸೆಲ್ವಮಣಿ, ನಗರ ಪಾಲಿಕೆಗಳ ಆಯುಕ್ತರಾದ ಡಿ.ಎಸ್. ರಮೇಶ್, ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ಕೆ.ವಿ. ರಾಜೇಂದ್ರ, ಜಂಟಿ ಆಯುಕ್ತ ಕೆ.ರಂಗನಾಥ್, ಚುನಾವಣೆ ಸಹಾಯಕ ಆಯುಕ್ತ ಮಹೇಶ್ ಹಾಜರಿದ್ದರು.