ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಹಮ್ಮಿಕೊಂಡಿದ್ದ "ವಿದೇಶದಲ್ಲಿ ಅಧ್ಯಯನ-2026' ಕಾರ್ಯಕ್ರಮದಲ್ಲಿ ಕ್ವೀನ್ಸ್ ಲ್ಯಾಂಡ್ ವಿವಿ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಸಚಿವ ಡಾ. ಶರಣಪ್ರಕಾಶ್​ ಪಾಟೀಲ್​, ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ್​, ಸುಬೋಧ್​ ಯಾವದ್​ ಇದ್ದರು.  
ಬೆಂಗಳೂರು

ಉದ್ಯೋಗದಾತರಾಗಲು ಯುವಕರು ಮುಂದೆ ಬರಲಿ

ಬೆಂಗಳೂರು: ಯುವಜನತೆ ಉದ್ಯೋಗದಾತರಾಗಲು ಮುಂದೆ ಬರಬೇಕು. ಅದಕ್ಕಾಗಿಯೇ ವಿದೇಶಿ ಅಧ್ಯಯನಕ್ಕಾಗಿ ಬಾಗಿಲು ತೆರೆದಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.
ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಭಾನುವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ "ವಿದೇಶದಲ್ಲಿ ಅಧ್ಯಯನ-2026' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಮಕ್ಕಳು ಜಾಗತಿಕ ಮಟ್ಟದಲ್ಲಿ ಕಲಿಯುವುದರ ಜತೆಗೆ ಕೌಶಲವಂತರಾಗಿ ಉದ್ಯೋಗದಾತರಾಗಬೇಕು ಎಂಬುದು ನಮ್ಮ ಬಯಕೆ ಎಂದರು. 
ಕಲಿತಿರುವ ವಿದ್ಯೆಯನ್ನು ಮತ್ತೊಬ್ಬರು ಕಸಿಯಲು ಸಾಧ್ಯವಿಲ್ಲ. ಸರ್ಕಾರ ಯುವಕರಿಗೆ ಜಾಗತಿಕ ಮಟ್ಟದ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದು, ಭವಿಷ್ಯವನ್ನು ಉಜ್ವಲಿಸುವಂತೆ ಮಾಡುವುದು ನಮ್ಮ ಗುರಿ. ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದ್ದು, ಇಲ್ಲಿ 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ಸಿಲಿಕಾನ್​ ವ್ಯಾಲಿ ಕ್ಯಾಲಿೋರ್ನಿಯಾದಲ್ಲಿ 16 ಲಕ್ಷ ಐಟಿ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಇದ್ದಾರೆ. ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಇಂಜಿನಿಯರ್​, 14 ಸಾವಿರಕ್ಕೂ ಹೆಚ್ಚು ವೈದ್ಯರು ಸೃಷ್ಟಿಯಾಗುತ್ತಿದ್ದಾರೆ ಎಂದು ಹೇಳಿದರು.
ಮಹಾತ್ಮ ಗಾಂಧಿ, ಅಂಬೇಡ್ಕರ್​, ರಾಜಾರಾಮ್​ ಮೋಹನ್​ರಾಯ್​ ಸೇರಿ ಹಲವು ನಾಯಕರು ವಿದೇಶದಲ್ಲಿ ಓದಿ, ಬಳಿಕ ಸ್ವದೇಶಕ್ಕೆ ಮರಳಿ ಮಹತ್ವದ ಚಳವಳಿಗಳಲ್ಲಿ ಮುನ್ನಡೆಸಿದ್ದಾರೆ. ಈ ಅಂಶ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು ಎಂದು ಸಲಹೆ ನೀಡಿದರು.
ವಿದೇಶದ ವಿವಿಗಳಲ್ಲಿ ಅಧ್ಯಯನ ನಡೆಸಲು ಸರ್ಕಾರವು ಅವಕಾಶ ಕಲ್ಪಿಸಿದೆ. 80ಕ್ಕೂ ಹೆಚ್ಚು ವಿವಿಗಳು ಭಾಗಿಯಾಗಿದ್ದು, 300ಕ್ಕೂ ಹೆಚ್ಚು ವಿಷಯಗಳಲ್ಲಿ ಅಧ್ಯಯನಕ್ಕೆ ಅವಕಾಶ ಇದೆ. ಇದರ ಜತೆಗೆ ವಿವಿಧ ಇಲಾಖೆಗಳಿಂದ ವಿದ್ಯಾರ್ಥಿವೇತನ, ವಿವಿಧ ಬ್ಯಾಂಕ್​ಗಳು ನೆರವು ನೀಡುತ್ತಿದ್ದು, 2 ಕೋಟಿ ರೂ. ವರೆಗೂ ಸಾಲ ಸೌಲಭ್ಯ ದೊರೆಯಲಿದೆ. ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಿಎಂ ಕಿವಿಮಾತು ಹೇಳಿದರು.  
ವೈದ್ಯಕಿಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್​ ಪಾಟೀಲ್​, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ್​, ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಬೋಧ್​ ಯಾದವ್​, ಆಸ್ಟ್ರೆಲಿಯಾದ ಕಾನ್ಸುಲೇಟ್​ ಜನರಲ್​ ಸ್ವಿವನ್​ ಕನೋಲಿ, ಕ್ವೀನ್ಸ್​ಲೆಂಡ್​ ವಿವಿ ನಿರ್ದೇಶಕ ಜೋಗ್ವಾನ್​ ಕ್ಲೆನ್​ ಇತರರಿದ್ದರು.
ಕೋಟ್​:
ವಿದೇಶದ ಅಧ್ಯಯನಕ್ಕಾಗಿ ಸರ್ಕಾರ ಹೊಸ ಬಾಗಿಲು ತೆರೆದಿದೆ. ಜ್ಞಾನದ ಮೇಲಿನ ಹೂಡಿಕೆಯು ಪ್ರತಿಯೊಬ್ಬರಿಗೂ ಅತ್ಯುತ್ತಮ ಆಸ್ತಿಯಾಗುತ್ತದೆ. ಜಾಗತಿಕ ಮಟ್ಟದ ಶಿಕ್ಷಣದ ಅವಕಾಶ ಪಡೆಯುವುದಕ್ಕೆ ಯುವಕರು ಮಾನಸಿಕವಾಗಿ ಗಟ್ಟಿಗರಾಗಬೇಕು.
- ಡಿ.ಕೆ. ಶಿವಕುಮಾರ್​, ಸಿಎಂ