ಲೀಚೆಟ್​​​ ಸಂಸ್ಕರಣಾ ಘಟಕ  
ಬೆಂಗಳೂರು

ಮಿಟ್ಟಗಾನಹಳ್ಳಿ,ಕಣ್ಣೂರು ಪ್ರದೇಶಗಳಲ್ಲಿ ಲೀಚೆಟ್ ತ್ಯಾಜ್ಯ ಸಂಸ್ಕರಣಾ ಘಟಕ-Leachate

ಬೆಂಗಳೂರು: ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಜಟಿಲವಾಗುತ್ತಿದ್ದ ಕಸದ ಸಮಸ್ಯೆಗೆ ಕೊನೆಗೂ ಬಗೆಹರಿಯುವ ಲಕ್ಷಣ ಗೋಚರಿಸುತ್ತಿದೆ. 
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್), ಹೊಸ ‘ತ್ಯಾಜ್ಯದಿಂದ ಹೊರಬರುವ ದ್ರವತ್ಯಾಜ್ಯ (ಲೀಚೆಟ್) ಸಂಸ್ಕರಣಾ ಘಟಕ’ ನಿರ್ಮಿಸಲು ಮತ್ತು ಲೀಚೆಟ್ ತ್ಯಾಜ್ಯ ಸಂಸ್ಕರಿಸಲು ಮುಂದಾಗಿದೆ. ಇದಕ್ಕಾಗಿ ಬಿಎಸ್‌ಡಬ್ಲ್ಯುಎಂಎಲ್, ಪ್ರತಿ ಲೀಟರ್ ಲೀಚೆಟ್ ತ್ಯಾಜ್ಯ ಸಂಸ್ಕರಣೆಗೆ 1 ರೂ. 65 ಪೈಸೆನಂತೆ 474.89 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ‘ಮುಕ್ಕ ಪ್ರೋಟಿನ್ಸ್ ಲಿಮಿಟೆಡ್’ ನೀಡಿದೆ. ಸಚಿವ ಸಂಪುಟ, ಆರ್ಥಿಕ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗೆ ಟೆಂಡರ್ ಮೊತ್ತಕ್ಕೆ ಈಗಾಗಲೆ ಅನುಮೋದನೆ ಕೊಟ್ಟಿದೆ. 
ಮಿಟ್ಟಗಾನಹಳ್ಳಿ, ಕಣ್ಣೂರು ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿಯ ಪರಿಣಾಮ ಈ ಪ್ರದೇಶಗಳಲ್ಲಿ ಅಂದಾಜು 2,878 ದಶಲಕ್ಷ ಲೀಟರ್ ಲಿಚೆಟ್  ಶೇಖರಣೆಯಾಗಿದೆ. ಆದ್ದರಿಂದ, ಮಿಟ್ಟಗಾನಹಳ್ಳಿ, ಕಣ್ಣೂರುನಲ್ಲಿ ಲಿಚೆಟ್ ಸಂಸ್ಕರಣಾ ಘಟಕ ನಿರ್ಮಿಸಲು, ಲೀಚೆಟ್ ತ್ಯಾಜ್ಯ ಸಂಸ್ಕರಿಸಲು ಬಿಎಸ್‌ಡಬ್ಲ್ಯುಎಂಎಲ್‌ನಿಂದ ಮುಕ್ಕ ಪ್ರೋಟಿನ್ಸ್ ಕಾರ್ಯಾದೇಶ ಪತ್ರ ಪಡೆದಿದೆ.
9 ತಿಂಗಳದೊಳಗೆ ಘಟಕ ನಿರ್ಮಿಸಬೇಕು ಮತ್ತು ಹಂತ ಹಂತವಾಗಿ 2,878 ದಶಲಕ್ಷ ಲೀಟರ್ ತ್ಯಾಜ್ಯವನ್ನು ಸಂಸ್ಕರಿಸಬೇಕು. ಮುಂದಿನ 4 ವರ್ಷದೊಳಗೆ ಈ ಎಲ್ಲ ಕಾರ್ಯವನ್ನು ಮುಗಿಸುವಂತೆ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ( ಕೆಎಸ್‌ಪಿಸಿಬಿ) ಮತ್ತು ಬಿಎಸ್‌ಡಬ್ಲ್ಯುಎಂಎಲ್ ಘನತ್ಯಾಜ್ಯ ನಿಯಮದಂತೆ ಗುತ್ತಿಗೆ ಪಡೆದ ಕಂಪನಿಯು ಕಾರ್ಯನಿರ್ವಹಿಸಲಿದೆ. 
ಹೊಸ ಭೂಭರ್ತಿ ಘಟಕ ಲಭ್ಯ:
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಪ್ರಸ್ತುತ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ ವಿಲೇವಾರಿಗೆ ಯಾವುದೇ ಭೂಭರ್ತಿ ಘಟಕಗಳು ಲಭ್ಯವಿಲ್ಲ. ಬಿರುಸಾಗಿ ಮಳೆಯಾಗುವ ಸಂದರ್ಭದಲ್ಲಿ ಲೀಚೆಟ್ ಶೇಖರಣೆಗೊಂಡಿರುವ ಹೊಂಡಗಳು ಉಕ್ಕಿಹರಿಯುತ್ತಿವೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮ, ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿದೆ. ಗ್ರಾಮಗಳಲ್ಲಿ ವಾಸಿಸುತ್ತಿರುವ ಮಕ್ಕಳಿಂದ ಹಿಡಿದು ಹಿರಿಯರ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಸುತ್ತಮುತ್ತಲಿನ ಕೆರೆಗಳು ಕಲುಷಿತಗೊಂಡಿವೆ. ಮೀನು, ಪಕ್ಷಿ ಸೇರಿ ಅನೇಕ ಜಲಜರ ಪ್ರಾಣಿಗಳು ಮೃತಪಟ್ಟಿವೆ. 
ಭೂಭರ್ತಿ ಘಟಕಗಳಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶೇಖರಣೆಗೊಂಡಿರುವ ಲೀಚೆಟ್ ಸಂಸ್ಕರಿಸಿದರೆ ಹೊಸದಾಗಿ ಭೂಭರ್ತಿ ಘಟಕದ ಸ್ಥಳ ದೊರೆಯಲಿದೆ. ಲೀಚೆಟ್‌ನಲ್ಲಿರುವ ಜೈವಿಕ, ರಾಸಾಯನಿಕ, ಅಲ್ಟ್ರಾಫಿಲ್ಟ್ರೇಷನ್, ರಿವರ್ಸ್ ಆಸ್ಮೋಸಿಸ್‌ನಂತಹ ಕಲ್ಮಶದ ಅಂಶ ತೆಗೆದುಹಾಕಲು ‘ಲೀಚೆಟ್ ಸಂಸ್ಕರಣಾ ಘಟಕ ಕಾರ್ಯನಿರ್ವಹಿಸಲಿದೆ. ಹಾನಿಕಾರಕ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಮೂಲಕ ಪರಿಸರ ಮಾಲಿನ್ಯ ತಡೆಯಲಾಗುತ್ತದೆ. ಸಂಸ್ಕರಿಸಿದ ನೀರನ್ನು ಗಿಡಗಳಿಗೆ ನೀರುಣಿಸಲು, ವಾಹನ ಸ್ವಚ್ಛಗೊಳಿಸಲು ಮತ್ತು ಕೆಲವು ಸಂದರ್ಭಗಳಲ್ಲಿ ಕೆರೆ ತುಂಬಿಸಲು ಬಳಸಲಾಗುತ್ತದೆ. ಸ್ಥಳೀಯರ ಜನರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.