ಲಾಲ್​ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿರುವ ಸಿಬ್ಬಂದಿ. 
ಬೆಂಗಳೂರು

ಸಸ್ಯಕಾಶಿ ಫಲಪುಷ್ಪ ಪ್ರದರ್ಶನದಲ್ಲಿ ಗಂಗರ ಸಾಮ್ರಾಜ್ಯದ ಗತವೈಭವ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ನಾಳೆ ಸಿಎಂ ಡಿ.ಕೆ. ಶಿವಕುಮಾರ್​ ಚಾಲನೆ
  • ಬಣ್ಣಬಣ್ಣದ ಹೂವಿನ ಕಲಾಕೃತಿಗಳ ಆಕರ್ಷಣೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು


ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕದ ಮೊದಲ ರಾಜಮನೆತನಗಳಲ್ಲಿ ಒಂದಾದ ಗಂಗರ ಸಾಮ್ರಾಜ್ಯದ ಗತವೈಭವ ಹೂಗಳ ಮೂಲಕ ಮೂಡಿಬರಲಿದೆ.
ಆ. 6ರಿಂದ 17ರವರೆಗೆ 12 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಭರದ ಸಿದ್ಧತೆ ನಡೆಸಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಆರ್​. ಗಿರೀಶ್​ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಂಗ ದೊರೆಗಳ ಬಲಿಷ್ಠ ಗಜಸೇನೆ, ಯುದ್ಧದ ಸನ್ನಿವೇಶ, ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆ ಹಾಗೂ ತಲಕಾಡಿನ ದೇವಾಲಯಗಳ ಪ್ರತಿಕೃತಿಗಳನ್ನು ಹೂಗಳಿಂದ ನಿರ್ಮಿಸಲಾಗುತ್ತಿದೆ. ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ ಹಾಗೂ ಶಿಲ್ಪಕಲೆಗೆ ಗಂಗರ ಕೊಡುಗೆಯನ್ನು ಪರಿಚಯಿಸುವ ವಿನೂತನ ಕಲಾಕೃತಿಗಳನ್ನೂ ಪ್ರದರ್ಶಿಸಲಾಗುವುದು. ಇತಿಹಾಸವನ್ನು ಹೂಗಳ ಮೂಲಕ ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಥೀಮ್​ ರೂಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜಗದೀಶ್​ ತಿಳಿಸಿದರು.
ಒಟ್ಟು ಖರ್ಚು <2.75 ಕೋಟಿ:
ಈ ಬಾರಿ ಫಲಪುಷ್ಪ ಪ್ರದರ್ಶನಕ್ಕಾಗಿ ಸುಮಾರು 2.75 ಕೋಟಿ ರೂ. ಬಜೆಟ್​ ಮೀಸಲಿಡಲಾಗಿದೆ. ಪ್ರದರ್ಶನಕ್ಕೆ ಅಗತ್ಯವಿರುವ ಹೂಗಳನ್ನು ಕುಂಡಗಳಲ್ಲಿ ಹಾಗೂ ನೆಲದಲ್ಲಿ ಬೆಳೆಸಲಾಗಿದ್ದು, ವಿವಿಧ ರಾಜ್ಯಗಳಿಂದ ಅಪರೂಪದ ಹೂಗಳನ್ನು ತರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಬಾಕ್ಸ್​
ಮೂರು ಲಕ್ಷ ಹೂವುಗಳ ಬಳಕೆ
ಗಾಜಿನ ಮನೆಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಗಂಗರ ಕಾಲದ ದೇವಾಲಯಗಳ ಆಕರ್ಷಕ ಪ್ರವೇಶದ್ವಾರ ಮತ್ತು ಕಂಬಗಳ ಮಾದರಿ ಇರಲಿದೆ. ಕೇಂದ್ರ ಭಾಗದ ಮುಂಭಾಗ ಇಂಡೋ-&ಅಮೇರಿಕನ್​ ಹೈಬ್ರಿಡ್​ ಸೀಡ್ಸ್​ ಕಂಪನಿಯ ಆಕರ್ಷಕ ಹೂ ಜೋಡಣೆ ಕಣ್ಮನ ಸೆಳೆಯಲಿದೆ. ಕ್ಯಾಲಿದ್ರೋಚಿ, ವೈವಿಧ್ಯಮಯ ಜಿರೇನಿಯಂಗಳು, ಇಂಪೇಷನ್ಸ್​, ಆಂಥೋರಿಯಂಗಳು ಗಾರಿವಿನಿಯಾ, ಜೆರ್​ಬೆರಾ, ವಿವಿಧ ಬಗೆಯ ಎಕ್ಸಾಟಿಕ್​ ಹೂವುಗಳು, ವಿವಿಧ ಫೋಲಿಯೇಜ್​ ಗಿಡಗಳ ಜೋಡಣೆ ಇರುತ್ತದೆ. ಒಟ್ಟಾರೆ 2.75 ಲಕ್ಷಕ್ಕೂ ಹೆಚ್ಚಿನ ವಿಶೇಷ ಹೂ ಮತ್ತು ಎಲೆ ಜಾತಿಯ ಗಿಡಗಳನ್ನು ಪ್ರದರ್ಶಿಸಲಿದ್ದಾರೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಗಂಗರ ಕಾಲದ ಬೇಗೂರು ದೇವಾಲಯದ ಪುಷ್ಪ ಮಾದರಿ ಪ್ರಮುಖ ಆಕರ್ಷಣೆಯಾಗಲಿದೆ. ಗಂಗರ ಕಾಲದ ನಗರೇಶ್ವರ ದೇವಾಲಯವು ಸರಳ ಹಾಗೂ ಸುಂದರವಾದ ಚೌಕಾಕಾರದ ಗರ್ಭಗುಡಿ ಮತ್ತು ಮುಖಮಂಟಪವನ್ನು ಹೊಂದಿದೆ. ದೇವಾಲಯದ ಆವರಣದಲ್ಲಿ ಸುಂದರವಾದ ಕೆತ್ತನೆಗಳುಳ್ಳ ಕಂಬಗಳು, ವೀರಗಲ್ಲುಗಳು ಮತ್ತು ಪ್ರಾಚಿನ ಶಿಲ್ಪಗಳನ್ನು ಕಾಣಬಹುದಾಗಿದೆ. ಪ್ರತಿರೂಪವನ್ನು 50 ಅಡಿ ಉದ್ದ, 24 ಅಡಿ ಅಗಲ ಹಾಗೂ 26 ಅಡಿ ಎತ್ತರದಲ್ಲಿ ನಿರ್ಮಿಸಲಿದ್ದು, ಒಂದು ಬಾರಿಗೆ 2.15 ಲಕ್ಷ ಶ್ವೇತ, ಹಳದಿ, ಪಿಂಕ್​ ಮತ್ತು ರಸ್ಟ್​ ವರ್ಣಗಳ ಸೇವಂತಿಗೆ ಹೂಗಳು ಮತ್ತು 90 ಸಾವಿರ ಕೆಂಪು ಮತ್ತು ಕಿತ್ತಳೆ ವರ್ಣದ ಆಕರ್ಷಕ ಗುಲಾಬಿ ಹೂಗಳು ಸೇರಿ ಒಟ್ಟಾರೆ 3.05 ಲಕ್ಷ ಹೂಗಳನ್ನು, ಬಳಸಲಾಗುತ್ತಿದೆ.

ಅರಸ ಶ್ರೀಪುರುಷನ ಶೌರ್ಯ!


ಕೇಂದ್ರಭಾಗದ ದೇವಾಲಯ ಪುಷ್ಪಮಾದರಿಯ ಮುಂಭಾಗ, 63 ವರ್ಷಗಳ ಸುದೀರ್ಘ ಕಾಲ ರಾಜ್ಯಭಾರ ಮಾಡಿದ ಗಂಗವಂಶದ ಪ್ರಸಿದ್ಧ ದೊರೆ ಶ್ರೀಪುರುಷನ 6 ಅಡಿ ಎತ್ತರದ ಶಿಲ್ಪವನ್ನು ಸುಮಾರು 10 ಅಡಿ ಎತ್ತರದ ಆನೆಯ ಶಿಲ್ಪದೊಂದಿಗೆ ಸಂಯೋಜಿಸಿ ಪ್ರದರ್ಶಿಸಲಾಗುವುದು. ಗಂಗರಾಜರಾದ ಕೊಂಗಣಿವರ್ಮ, ತಡಂಗಾಲ ಮಾಧವ, ಅವಿನೀತ ಮತ್ತು ಮಂತ್ರಿ ಚಾವುಂಡರಾಯರ ಸ್ಥಾನಕ ಶಿಲ್ಪಗಳು ಇರಲಿವೆ.

ಆಕರ್ಷಕ ಸೆಲ್ಫಿ ಪಾಯಿಂಟ್​


ಲಾಲ್​ಬಾಗ್​ನ ಕೆರೆ ಸಮೀಪ ಕೃತಕ ಜಲಪಾತ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗಾಗಿ ವಿಶೇಷ ಸೆಲ್ಫಿ ಪಾಯಿಂಟ್​ ಕೂಡ ನಿರ್ಮಿಸಲಾಗಿದೆ. ಹೂವಿನ ಕಲಾಕೃತಿಗಳ ಜತೆಗೆ ಇವು ಕೂಡ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಪ್ರವೇಶ ಶುಲ್ಕ ಎಷ್ಟು?


ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ಮಕ್ಕಳಿಗೆ 30 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ (ಆ. 8, 9 ಮತ್ತು 15) ವಯಸ್ಕರಿಗೆ 100 ರೂ. ಶುಲ್ಕ ಇರಲಿದೆ. 10ನೇ ತರಗತಿವರೆಗಿನ ಶಾಲಾ ಮಕ್ಕಳು ಸಮವಸ್ತ್ರ್ರದಲ್ಲಿ ಆಗಮಿಸಿದರೆ ಉಚಿತ ಪ್ರವೇಶ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಆನ್​ಲೈನ್​ ಟಿಕೆಟ್​, ಪಾರ್ಕಿಂಗ್​ ವ್ಯವಸ್ಥೆ


ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ಬಾರಿ ಆನ್​ಲೈನ್​ ಟಿಕೆಟ್​ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ನಿಲುಗಡೆಗೆ ಪಾರ್ಕಿಂಗ್​ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಲಾಲ್​ಬಾಗ್​ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 136 ಸಿಸಿ ಕ್ಯಾಮರಾಗಳ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.

ಸಿದ್ಧತೆಗಳೇನು?


ತುರ್ತು ಪರಿಸ್ಥಿತಿ ಎದುರಾದಲ್ಲಿ ನೆರವಾಗಲು ನಾಲ್ಕು ದ್ವಾರಗಳಲ್ಲೂ ಆಂಬುಲೆನ್ಸ್​ ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಚ್ಚಿನ ಪೊಲೀಸ್​ ಭದ್ರತೆ ಕಲ್ಪಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಸಮಗ್ರ ಮಾಹಿತಿ


ಎಲ್​ಇಡಿ ಸ್ಕ್ರೀನ್​ಗಳನ್ನು ಬಳಸಿ ಲಾಲ್​ಬಾಗ್​ನ ಆಯ್ದ 6 ಸ್ಥಳಗಳಲ್ಲಿ ಗಂಗರ ಒಟ್ಟಾರೆ ಇತಿಹಾಸವನ್ನು ಬಿಂಬಿಸುವ ಲಾವಣಿಯ ಹಿನ್ನೆಲೆ ಗಾಯನದಲ್ಲಿ ಗಂಗರ ಕಾಲದ ಸ್ಮಾರಕಗಳು, ಶಾಸನಗಳು ಕಲಾಕೃತಿಗಳು, ಅಪರೂಪದ ಪೋಟೋಗಳು, ವಿಡಿಯೋಗಳು, ಎಐ ವಿಡಿಯೋ ತುಣುಕುಗಳನ್ನು ಫಲಪುಷ್ಪ ಪ್ರದರ್ಶನದ ಅವಧಿಯುದ್ದಕ್ಕೂ ಪ್ರದರ್ಶಿಸಲಾಗುವುದು.

ಸಸ್ಯ ಸಂತೆ


ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಸಸ್ಯ ಪ್ರೇಮಿಗಳಿಗಾಗಿ 135ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳಲ್ಲಿ ಸಸ್ಯಸಂತೆ ಜರುಗಲಿದೆ. ತೋಟಗಾರಿಕೆ ಆಸಕ್ತರು ಒಂದೇ ವೇದಿಕೆಯಡಿ ಬೀಜ, ಗಿಡಗಳು, ಗೊಬ್ಬರ, ಸಲಕರಣೆ, ತಾಂತ್ರಿಕ ಮಾಹಿತಿ, ಪರಿಸರ ಪೂರಕ ವಸ್ತುಗಳ ಮಾರಾಟ, ಇತ್ಯಾದಿ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ವೇದಿಕೆಯಾಗಲಿದೆ.

ಮುಖ್ಯಾಂಶಗಳು


* ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ ನವಿಲು
* ಹೃದಯಾಕಾರದ ಹೂವಿನ ಕಮಾನುಗಳು
* ಮೆಗಾ ಫ್ಲೋರಲ್​ ಫ್ಲೋ
* ತೂಗುವ ಹೂಗಳ ಬಾಗುವ ಚೆಲುವು
* ವರ್ಟಿಕಲ್​ ಗಾರ್ಡನ್​ ರೂಪದಲ್ಲಿ ಅರಳುವ ಸ್ವಾಗತ ಕಮಾನುಗಳು