- ಮಹಿಳೆಯರು, ಅಂಗವಿಕಲರಿಗೆ ಸುರಕ್ಷತೆ ಕೊರತೆ
- ಬಿಎನ್‌ಪಿ ಸಮೀಕ್ಷಾ ವರದಿ ಜಿಬಿಎ ಮುಖ್ಯ ಆಯುಕ್ತರಿಗೆ ಸಲ್ಲಿಕೆ
ಬೆಂಗಳೂರು: ಮಹಾನಗರದಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನವು ಅನೈರ್ಮಲ್ಯದ ಸಮಸ್ಯೆ ಕಾಡುತ್ತಿದ್ದು, ಅವುಗಳನ್ನು ಉಪಯೋಗಿಸಲು ನಾಗರಿಕರು ಹಿಂದೇಟು ಹಾಕುವಂತಿವೆ. ಇಂತಹ ಪಬ್ಲಿಕ್ ಟಾಯ್ಲೆಟ್‌ಗಳಲ್ಲಿ ಮಹಿಳೆಯರು ಹಾಗೂ ಅಂಗವಿಕಲರಿಗೆ ಸುರಕ್ಷತೆ ಇಲ್ಲವಾಗಿದ್ದು, ಪಾಲಿಕೆ ವ್ಯಾಪ್ತಿಯ ಎಲ್ಲ ಶೌಚಾಲಯಗಳನ್ನು ಆಡಿಟ್ ಮಾಡಿಸಿ ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನವನಿರ್ಮಾಣ ಪಕ್ಷವು (ಬಿಎನ್‌ಪಿ) ಜಿಬಿಎಅನ್ನು ಆಗ್ರಹಿಸಿದೆ.
ಇತ್ತೀಚಿಗೆ ಬಿಎನ್‌ಪಿ ತನ್ನ ಏರಿಯಾ ಸಭಾ ಮೂಲಕ ಸಮೀಕ್ಷೆಯನ್ನು ಕೈಗೊಂಡಿತ್ತು. ಪ್ರಮುಖ ಸ್ಥಳಗಳನ್ನು ಒಳಗೊಂಡ 21 ವಾರ್ಡ್‌ಗಳಲ್ಲಿನ 38 ಸಾರ್ವಜನಿಕ ಶೌಚಾಲಯಗಳ ಬಗ್ಗೆ ಪೂರ್ಣ ಪರಿಶೀಲಿಸಿ ಮಾಹಿತಿ ಸಂಗ್ರಹ ಮಾಡಿ ಅಲ್ಲಿನ ತಪ್ಪು ಒಪ್ಪುಗಳನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಲಾಗಿತ್ತು. ಈ ವರದಿಯನ್ನು ಬಿಎನ್‌ಪಿ ಪದಾಧಿಕಾರಿಗಳು ಜಿಬಿಎ ಮುಖ್ಯ ಆಯುಕ್ತರಿಗೆ ಹಸ್ತಾಂತರಿಸಿ ಮಹಾನಗರದೆಲ್ಲೆಡೆ ಟಾಯ್ಲೆಟ್‌ಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸಮೀಕ್ಷೆಗೆ ಒಳಪಡಿಸಿದ ಸಾರ್ವಜನಿಕ ಶೌಚಾಲಯಗಳ ಪೈಕಿ ಶೇ.45 ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿವೆ. ಶೇ.82 ಕಡೆಗಳಲ್ಲಿ ಶುಲ್ಕವನ್ನು ಬೇಕಾಬಿಟ್ಟಿಯಾಗಿ ಸಂಗ್ರಹಿಸಲಾಗುತ್ತಿದೆ. ಶೇ.71 ಶೌಚಾಲಯಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಅಂಗವಿಕರ ಪ್ರವೇಶಕ್ಕೆ ರಾಂಪ್ ಇಲ್ಲದೆ ಅಂತಹವರು ಪಬ್ಲಿಕ್ ಟಾಯ್ಲೆಟ್ ಬಳಸದಂತಾಗಿದೆ. ಶೇ.10ರಷ್ಟು ಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ಎಲ್ಲ ಶೌಚಾಲಯಗಳು ಟ್ಯಾಂಕರ್ ನೀರನ್ನೇ ಆಶ್ರಯಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಗರದೆಲ್ಲೆಡೆ ಆಡಿಟ್ ನಡೆಸಲಿ:
ಮಹಾನಗರದಲ್ಲಿ ಪಬ್ಲಿಕ್ ಟಾಯ್ಲೆಟ್‌ಗಳು ನೈರ್ಮಲ್ಯದ ಕೊರತೆ ಎದುರಿಸುತ್ತಿರುವುದು ಪರಿಸರದ ದೃಷ್ಟಿಯಿಂದ ಸರಿಯಿಲ್ಲ. ನಿರ್ವಹಣೆ ಕಾಟಾಚಾರಕ್ಕಾಗಿ ಮಾಡುತ್ತಿದ್ದು, ಅಲ್ಲಿನ ಸಿಬ್ಬಂದಿಯಿಂದ ಶುಚಿಗೊಳಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಪರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕಡಿಮೆ ಶೌಚಾಲಯಗಳಿದ್ದು, ಪ್ರಮುಖ ಪ್ರದೇಶಗಳಲ್ಲಿ ನಿಸರ್ಗ ಕರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಶೇ.7 ಶೌಚ ಕಟ್ಟಡಗಳ ಹೊರಗೆ ಸಿಸಿಟಿವಿ ಇದ್ದು, ಅಸುರಕ್ಷತೆ ಕಾಡುತ್ತಿದೆ. ಹಾಗಾಗಿ ನಗರದೆಲ್ಲೆಡೆ ಇರುವ ಸಾರ್ವಜನಿಕ ಶೌಚಾಲಯಗಳನ್ನು ಸ್ವತಂತ್ರ ಸಂಸ್ಥೆಯಿಂದ ಆಡಿಟ್ ನಡೆಸಿ ಲೋಪ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಬಿಎಗೆ ಮನವಿ ಮಾಡಲಾಗಿದೆ ಎಂದು ಬಿಎನ್‌ಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.