ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲಿ ಜನರ ಅಹವಾಲುಗಳನ್ನು ಆಲಿಸುತ್ತಿರುವ ಸಚಿವ ಬೈರತಿ ಸುರೇಶ್​. 
ಬೆಂಗಳೂರು

ಬಸ್​ ನಿಲ್ದಾಣಗಳಿಗೆ ಬೈರತಿ ಸುರೇಶ್​ ದಿಢೀರ್​ ಭೇಟಿ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಪ್ರಯಾಣಿಕರಂತೆ ಕುಳಿತು ಕುಂದುಕೊರತೆ ಆಲಿಸಿದ ಸಚಿವ
  • ನಮ್ಮ ಕ್ಲಿನಿಕ್​ಗೆ ವೈದ್ಯರ ನೇಮಕಕ್ಕೆ ಸೂಚನೆ

ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್​ ಅವರು ಸೋಮವಾರ ಮೆಜೆಸ್ಟಿಕ್​ನಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್​ ನಿಲ್ದಾಣಗಳಿಗೆ ದಿಢೀರ್​ ಭೇಟಿ ನೀಡಿ, ಪ್ರಯಾಣಿಕರಿಗೆ ಕಲ್ಪಿಸಿರುವ ಸೌಲಭ್ಯಗಳು ಹಾಗೂ ನಿಲ್ದಾಣಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.

ಮೊದಲು ಕೆಎಸ್​ಆರ್​ಟಿಸಿ ನಿಲ್ದಾಣಕ್ಕೆ ತೆರಳಿದ ಸಚಿವರು, ವಿವಿಧ ಮಾರ್ಗಗಳ ಬಸ್​ಗಳ ಸಂಚಾರ ವ್ಯವಸ್ಥೆ ಪರಿಶೀಲಿಸಿದರು. ಬಳಿಕ ಪ್ರಯಾಣಿಕರ ಬಳಿಗೆ ತೆರಳಿ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ನಿಲ್ದಾಣದಲ್ಲಿನ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಬಗ್ಗೆ ಬಹುತೇಕ ಪ್ರಯಾಣಿಕರು ತೃಪ್ತಿ ವ್ಯಕ್ತಪಡಿಸಿದರು.
ಜನಸಾಮಾನ್ಯರಂತೆ ಕುಳಿತು ಆಲಿಕೆ:
ಬಿಎಂಟಿಸಿ ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು, ಪ್ರಯಾಣಿಕರು ಕುಳಿತುಕೊಳ್ಳುವ ಕಲ್ಲು ಬೆಂಚಿನಲ್ಲೇ ಕೆಲಕಾಲ ಕುಳಿತು ಬಸ್​ಗಾಗಿ ಕಾಯುತ್ತಿದ್ದವರೊಂದಿಗೆ ಸಂವಾದ ನಡೆಸಿದರು. ಯಾವುದೇ ಸಮಸ್ಯೆ ಎದುರಾಗುತ್ತಿದೆಯೇ ಎಂದು ಪ್ರಶ್ನಿಸಿ, ಸ್ಥಳದಲ್ಲೇ ಪ್ರಯಾಣಿಕರ ಅಹವಾಲು ಆಲಿಸಿದರು.
ಅಂಗಡಿ ಮುಂಗಟ್ಟುಗಳು ಹಾಗೂ ಲಗೇಜ್​ ಕೌಂಟರ್​ ಪರಿಶೀಲಿಸಿದ ಸಚಿವರು, ಪ್ರಯಾಣಿಕರಿಂದ ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕ ವಿದ್ಯಾರ್ಥಿ ಪಾಸ್​ ಕೌಂಟರ್​ಗೆ ತೆರಳಿ, ಪಾಸ್​ ವಿತರಣೆಯಲ್ಲಿನ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಂದಲೇ ಆಲಿಸಿದರು. ಉಚಿತ ಬಸ್​ ಪಾಸ್​ ವಿತರಣೆಯಲ್ಲಿ ವಿಳಂಬ ಅಥವಾ ಲೋಪವಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ವೈದ್ಯರಿಲ್ಲದ್ದಕ್ಕೆ ಗರಂ

ನಿಲ್ದಾಣದಲ್ಲಿರುವ ಆರೋಗ್ಯ ಇಲಾಖೆಯ "ನಮ್ಮ ಕ್ಲಿನಿಕ್​'ನಲ್ಲಿ ವೈದ್ಯರು ಇಲ್ಲದಿರುವುದನ್ನು ಗಮನಿಸಿದ ಸಚಿವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಆರೋಗ್ಯ ಇಲಾಖೆ ಆಯುಕ್ತರೊಂದಿಗೆ ಚರ್ಚಿಸಿ ವೈದ್ಯರನ್ನು ನಿಯೋಜಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಸೂಚಿಸಿದರು. ಅಗತ್ಯವಿರುವ ಕಡೆ ಪ್ರಥಮ ಚಿಕಿತ್ಸಾ ಸೌಲಭ್ಯ ಕಲ್ಪಿಸುವಂತೆಯೂ ಆದೇಶಿಸಿದರು.