ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 
ಬೆಂಗಳೂರು

ವಿಶ್ವಾಸಾರ್ಹತೆ ಗಳಿಸಲು ಪಾರದರ್ಶಕತೆಯತ್ತ ಕೆಪಿಎಸ್‌ಸಿ ಹೆಜ್ಜೆ

ಆನ್‌ಲೈನ್‌ನಲ್ಲಿ ಒಎಂಆರ್ ಐದೇ ದಿನದಲ್ಲಿ ಪೂರ್ವಭಾವಿ ಪರೀಕ್ಷೆ ಕೀ ಉತ್ತರ ಶೀಘ್ರದಲ್ಲೇ 1:15 ಪಟ್ಟಿ

ಬೆಂಗಳೂರು: ಅಕ್ರಮಗಳ ಸುಳಿಗೆ ಸಿಲುಕಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ತನ್ನ ಮೇಲಿನ ಕಳಂಕ ತೊಡೆದು ಹಾಕಿ ವಿಶ್ವಾಸಾರ್ಹತೆಯನ್ನು ಮರಳಿ ಸ್ಥಾಪಿಸುವ ನಿಟ್ಟಿನಲ್ಲಿ ಒಂದಷ್ಟು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಂಡಿದೆ.

ಕೆಪಿಎಸ್‌ಸಿ ಇತಿಹಾಸದಲ್ಲೇ ಮೊದಲ ಬಾರಿಗೆ, ಪರೀಕ್ಷೆ ನಡೆದ ಐದೇ ದಿನಗಳಲ್ಲಿ ಕೀ ಉತ್ತರ ಪ್ರಕಟಿಸಿ ಹೊಸ ಭರವಸೆ ಬಿತ್ತುವ ಪ್ರಯತ್ನ ಮಾಡಿದೆ.

319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ನ.15ರಂದು ಪೂರ್ವಭಾವಿ ಪರೀಕ್ಷೆ ನಡೆದಿತ್ತು. ನ.16ರಂದು ಕೀ ಉತ್ತರಗಳನ್ನು ಕೆಪಿಎಸ್‌ಸಿ ಪ್ರಕಟಿಸಿತ್ತು. ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಕೆಗೆ ನ.23ರವರೆಗೆ ಕಾಲಾವಕಾಶ ಕೂಡ ನೀಡಿತ್ತು. ಪರೀಕ್ಷೆ ಹಾಗೂ ಲಿತಾಂಶದ ವಿಧಾನಕ್ಕೆ ಇಷ್ಟೊಂದು ವೇಗ ನೀಡಿದ್ದು ಇದೇ ಮೊದಲು. ಶೀಘ್ರದಲ್ಲೇ 1:15ರ ಅನುಪಾತದಡಿ ಲಿತಾಂಶ ಪ್ರಕಟಿಸಲು ಆಯೋಗ ಸಜ್ಜಾಗಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಕೆಪಿಎಸ್‌ಸಿ ಅಧ್ಯಕ್ಷರಾದಿಯಾಗಿ ಐಎಎಸ್ ಅಧಿಕಾರಿಗಳು ಹಾಗೂ ಸಂಸ್ಥೆಯ ಸದಸ್ಯರೇ ಜೈಲು ಸೇರಿದ್ದರು. ಇದರಿಂದ ಉದ್ಯೋಗಾಕಾಂಕ್ಷಿಗಳಲ್ಲಿ ಆಯೋಗದ ಮೇಲಿನ ನಂಬಿಕೆಯೇ ಮಣ್ಣು ಪಾಲಾಗಿತ್ತು. ಇದರಿಂದ ಹೊರಬರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಕುಮಾರ್ ಅವರಿಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರ ಹುದ್ದೆಯ ಜವಾಬ್ದಾರಿ ನೀಡಲಾಗಿತ್ತು.

ಕೋರ್ಟ್ ಮೊರೆಗೆ ಚರ್ಚೆ? ಕೆಲ ಅಭ್ಯರ್ಥಿಗಳು ಕೃಪಾಂಕ ಮತ್ತು ಪ್ರಶ್ನೆ-ಉತ್ತರ ಸ್ವರೂಪ ಬದಲಾವಣೆ ವಿರುದ್ಧ ಕೋರ್ಟ್‌ಗೆ ಹೋಗಲು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಇದಲ್ಲದೆ, ಒಎಂಆರ್ ಶೀಟ್‌ನಲ್ಲಿ 5ನೇ ಆಯ್ಕೆ ಕಡ್ಡಾಯ ಮಾಡಿದ್ದರ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಏಕೆಂದರೆ ನೇಮಕಾತಿ ಅಧಿಸೂಚನೆಯಲ್ಲಿ 5ನೇ ಆಯ್ಕೆ ಬಗ್ಗೆ ಪ್ರಸ್ತಾಪ ಇರಲಿಲ್ಲ. ಏಕಾಏಕಿ ಲಿಖಿತ ಪರೀಕ್ಷೆ ವೇಳೆ ಜಾರಿಗೆ ತರಲಾಗಿದೆ. ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್, ಆಟ ಶುರುವಾದ ಮೇಲೆ ನಿಯಮ ಬದಲಾವಣೆ ಮಾಡಲು ಅವಕಾಶ ಇಲ್ಲವೆಂದು ತೀರ್ಪು ನೀಡಿದೆ. ಇದರ ಆಧಾರದ ಮೇಲೂ ಕೋರ್ಟ್ ಮೊರೆ ಹೋಗಲು ತಜ್ಞರ ಅಭಿಪ್ರಾಯ ಕೇಳುತ್ತಿದ್ದಾರೆ.

202 ಗ್ರೂಪ್ ಬಿ, 117 ಗ್ರೂಪ್ ಎ ಸೇರಿ 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನ.15ರಂದು ಪರೀಕ್ಷೆ ನಡೆಸಿದ ಅವರು, ನ.16 ರಂದು ಕೀ ಉತ್ತರ ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆ ಸಲ್ಲಿಸಲು ನ.19ರವರೆಗೆ ಅವಕಾಶ ನೀಡಿದ್ದರು. ಅಭ್ಯರ್ಥಿಗಳ ಆಕ್ಷೇಪಣೆ ಪರಿಗಣಿಸಿ ನ.21ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿ 23ರ ಒಳಗೆ ಆನ್‌ಲೈನ್ ಮೂಲಕ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಹಿಂದೆ ಪರೀಕ್ಷಾ ಲಿತಾಂಶ 43 ದಿನ ತಡವಾಗಿ ಪ್ರಕಟವಾಗಿತ್ತು. ಒಎಂಆರ್ ಶೀಟ್‌ಗಳನ್ನು ಪ್ರಕಟ ಮಾಡುತ್ತಿರಲಿಲ್ಲ. ಒಎಂಆರ್ ಶೀಟ್ ತಿದ್ದಿದ ಆರೋಪವೂ ಕೇಳಿ ಬಂದಿತ್ತು. ಅಂದೇ ಒಎಂಆರ್ ಶೀಟ್ ಅಪ್‌ಲೋಡ್ ಮಾಡುವ ಮೂಲಕ ಆ ಕಳಂಕಕ್ಕೆ ಮುಕ್ತಿ ನೀಡಲಾಗಿದೆ.

ಯುಪಿಎಸ್ಸಿ ಮಾದರಿ ನಿರೀಕ್ಷೆ ಹುಸಿ 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ಯುಪಿಎಸ್ಸಿ ಮಾದರಿಯಲ್ಲಿ ನಡೆಯಲಿದೆ ಎಂಬುದು ಅಭ್ಯರ್ಥಿಗಳ ನಿರೀಕ್ಷೆ ಆಗಿತ್ತು. ಆದರೆ, ದತ್ತಾಂಶ ಪರಿಕಲ್ಪನೆ ಆಧಾರಿತ ಪ್ರಶ್ನೆಗಳು ಇರಲಿಲ್ಲ. ಭಾರತದ ಸಂವಿಧಾನ, ಭೂಗೋಳ ಶಾಸ, ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಗಣನೀಯವಾಗಿ ಇಳಿಮುಖವಾಗಿದ್ದವು. ಗ್ರೂಪ್-ಸಿ ನೇಮಕಾತಿಗೆ ಕೇಳಬಹುದಾದ ಪ್ರಶ್ನೆಗಳು ಹೆಚ್ಚಾಗಿದ್ದವು. ಆದ್ದರಿಂದ ಯುಪಿಎಸ್‌ಸಿಗೆ ತಯಾರಿ ನಡೆಸಿದ್ದ ಅಭ್ಯರ್ಥಿಗಳಿಗೆ ಕಡಿಮೆ ಅಂಕ ಬಂದಿವೆ ಎನ್ನಲಾಗಿದೆ. ಇದಕ್ಕೆ ಪ್ರಶ್ನೆಪತ್ರಿಕೆ ಮಾದರಿ ಬದಲಾವಣೆಯೇ ಮೂಲ ಕಾರಣ ಎಂಬುದು ಅಭ್ಯರ್ಥಿಗಳ ವಾದ.
8 ಕೃಪಾಂಕ, 16 ಅಂಕ ಸಾಮಾನ್ಯವಾಗಿ 6 ಪ್ರಶ್ನೆಗಳಿಗೆ ಕೃಪಾಂಕ ನೀಡಲು ನಿಯಮದಲ್ಲಿ ಅವಕಾಶ ಇದೆ ಎನ್ನಲಾಗಿದೆ. ಹೀಗಾಗಿ ಕೆಪಿಎಸ್‌ಸಿ ಪರಿಷ್ಕೃತ ಕೀ ಉತ್ತರ ಪ್ರಕಟಣೆಯಲ್ಲಿ ಮೊದಲ ಪತ್ರಿಕೆ-1ರಲ್ಲಿ 4 ಮತ್ತು ಪತ್ರಿಕೆ-2ರಲ್ಲಿ 4 ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗಿದೆ. ಒಟ್ಟಾರೆ 16 ಅಂಕಗಳು ಲಭಿಸಿವೆ. ಹೆಚ್ಚಿನ ಕೃಪಾಂಕ ನೀಡಿದರೆ ನಿಯಮ ಉಲ್ಲಂಘನೆ ಆಗಲಿದೆ ಎಂಬ ಕಾರಣಕ್ಕೆ 4 ಪ್ರಶ್ನೆಗಳಿಗೆ 2-3 ಮತ್ತು 1-3 ಕೀ ಉತ್ತರ ಸರಿ ಇದೆ ಎನ್ನಲಾಗಿದೆ. ಕೆಲವು ಉತ್ತರ ಸರಿ ಇದ್ದರೂ ಆಕ್ಷೇಪಣೆ ಸಲ್ಲಿಸಿದರೆ ಎಂಬ ಕಾರಣಕ್ಕೆ ಕೃಪಾಂಕ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿವೆ. 8 ಕೃಪಾಂಕ ಸೇರಿ 16 ಅಂಕ ನೀಡಿದ್ದಾರೆ. 12 ಪ್ರಶ್ನೆಗಳ ಕೀ ಉತ್ತರ ಬದಲು ಮಾಡಿದ್ದು, ಒಟ್ಟಾರೆ 20 ಪ್ರಶ್ನೆಗಳ ಉತ್ತರ ಸ್ವರೂಪ ಬದಲಾವಣೆ ಮಾಡಿದ್ದಾರೆ. ಪರಿಣಾಮ 1 ಪ್ರಶ್ನೆ ಸರಿ-ತಪ್ಪು ಆದರೂ ಅಭ್ಯರ್ಥಿಗಳ ಭವಿಷ್ಯದಲ್ಲಿ ಏರುಪೇರು ಆಗಲಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.