- ಸಾದಹಳ್ಳಿ ಅಂಡರ್ಪಾಸ್ ಕಾಮಗಾರಿಗೆ ಮುಂದಿನ ವಾರ ಚಾಲನೆ
- 2027ರ ಏರೋ ಇಂಡಿಯಾಗೆ ಮುನ್ನ ಪೂರ್ಣಗೊಳಿಸುವ ಗುರಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಲುಪುವ ವಾಹನ ಸವಾರರ ಬಹುಕಾಲದ ನಿರೀಕ್ಷೆಗೆ ಕೊನೆಗೂ ತೆರೆ ಬೀಳುತ್ತಿದೆ. ಹೆಬ್ಬಾಳ&ವಿಮಾನ ನಿಲ್ದಾಣ ಕಾರಿಡಾರ್ನಲ್ಲಿದ್ದ ಏಕೈಕ ಟ್ರಾಫಿಕ್ ಸಿಗ್ನಲ್ ಆಗಿರುವ ಸಾದಹಳ್ಳಿ ಜಂಕ್ಷನ್ಗೂ ವಿದಾಯ ಹೇಳುವ ದಿನಗಳು ಸಮೀಪಿಸಿದ್ದು, ಇಲ್ಲಿ ನಿಮಾರ್ಣಗೊಳ್ಳಲಿರುವ 6 ಪಥಗಳ ಅಂಡರ್ಪಾಸ್ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮುಂದಿನ ವಾರ ಚಾಲನೆ ನೀಡಲಿದೆ.
35 ಕೋಟಿ ರೂ. ವೆಚ್ಚದಲ್ಲಿ 700 ಮೀ. ಉದ್ದದ ಅಂಡರ್ಪಾಸ್ ನಿಮಾರ್ಣವಾಗಲಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗೆ ಸಂಪೂರ್ಣ ಸಿಗ್ನಲ್ಮುಕ್ತ ಸಂಚಾರಕ್ಕೆ ಅವಕಾಶ ದೊರೆಯಲಿದೆ. ದಶಕಕ್ಕೂ ಹೆಚ್ಚು ಕಾಲ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇದೀಗ ಅಂತಿಮವಾಗಿ ಜೀವ ಬಂದಂತಾಗಿದೆ. ಕಾಮಗಾರಿಗೆ ಅನುಕೂಲವಾಗುವಂತೆ ಬೆಂಗಳೂರು ಸಂಚಾರಿ ಪೊಲೀಸರು ಎನ್ಎಚ್ಎಐಗೆ ಅನುಮತಿ ನೀಡಿದ್ದು, ಮುಂದಿನ 15 ತಿಂಗಳು ಪ್ರತಿದಿನ ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯವರೆಗೆ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಮೊದಲ ಹಂತದಲ್ಲಿ ಬ್ಯಾರಿಕೇಡ್ ಅಳವಡಿಕೆ, ಸಂಚಾರ ಮಾರ್ಗ ಬದಲಾವಣೆ ಹಾಗೂ ಸರ್ವೀಸ್ ರಸ್ತೆ ಅಗಲೀಕರಣ ಕೈಗೊಳ್ಳಲಾಗುತ್ತದೆ. ನಿಮಾರ್ಣದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಎರಡೂ ಬದಿಯ ಎರಡು ಪಥಗಳ ಸರ್ವಿಸ್ ರಸ್ತೆಗಳನ್ನು ನಾಲ್ಕು ಪಥಗಳಿಗೆ ವಿಸ್ತರಿಸುವ ಕಾರ್ಯವೂ ನಡೆಯಲಿದೆ.
ಮುಂಗಾರು ಹಿನ್ನೆಲೆಯಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಪೂರ್ವಸಿದ್ಧತಾ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಸೆಪ್ಟೆಂಬರ್ನಿಂದ ಅಂಡರ್ಪಾಸ್ಗಾಗಿ ಭೂಮಿ ಅಗೆಯುವ ಪ್ರಮುಖ ಹಂತ ಆರಂಭವಾಗಲಿದೆ.
ಆರಂಭದಲ್ಲಿ ಇಲ್ಲಿ ಫ್ಲೈಓವರ್ ನಿರ್ಮಿಸುವ ಪ್ರಸ್ತಾವವಿದ್ದರೂ, ವಾಹನ ಸಂಚಾರ ಸುಗಮಗೊಳಿಸುವುದು ಹಾಗೂ ಭೂಸ್ವಾಧಿನದ ಅಗತ್ಯ ಕಡಿಮೆ ಮಾಡುವ ಉದ್ದೇಶದಿಂದ ಯೋಜನೆಯನ್ನು ಅಂಡರ್ಪಾಸ್ಗೆ ಮರುವಿನ್ಯಾಸ ಮಾಡಲಾಯಿತು. ಸಾದಹಳ್ಳಿ ಹಾಗೂ ಸುತ್ತಮುತ್ತ ರಿಯಲ್ ಎಸ್ಟೇಟ್ ಅಭಿವೃದ್ಧಿ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಈ ಯೋಜನೆ ಭವಿಷ್ಯದ ಸಂಚಾರ ನಿರ್ವಹಣೆಗೆ ಮಹತ್ವದ ಹೆಜ್ಜೆಯಾಗಿದೆ.
ಯೋಜನೆಯ ಗುತ್ತಿಗೆಯನ್ನು ವಿದ್ಯಾ ಇನ್ಫ್ರಾಬಿಲ್ಟ್ ಪ್ರೈ. ಲಿ. ಪಡೆದುಕೊಂಡಿದ್ದು, "ಕಟ್ ಆ್ಯಂಡ್ ಕವರ್' ತಂತ್ರಜ್ಞಾನದಲ್ಲಿ ಅಂಡರ್ಪಾಸ್ ನಿಮಾರ್ಣವಾಗಲಿದೆ. 2027ರ ಫೆಬ್ರವರಿಯಲ್ಲಿ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿ ಹೊಂದಿರುವುದಾಗಿ ಎನ್ಎಚ್ಎಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.