ಪತ್ರಕರ್ತ ರಾಜಶೇಖರ ಜೋಗಿನ್ಮನೆ ಅವರ ಕೇಳು ಧನಂಜಯ ಕಾದಂಬರಿ ಕುರಿತು ಸಂವಾದದಲ್ಲಿ ವಿಮರ್ಶಕರಾದ ಶರತ್ ಭಟ್ ಸೆರಾಜೆ, ಎಚ್.ದಂಡಪ್ಪ ಹಾಗೂ ಕೆ.ಸತ್ಯನಾರಾಯಣ ಇದ್ದರು.
- ಸಾಹಿತಿ, ವಿಮರ್ಶಕ ಶರತ್ ಭಟ್ ಸೆರಾಜೆ ಅಭಿಪ್ರಾಯ
- ಸಂವಾದ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೇಳು ಧನಂಜಯದಲ್ಲಿ ಕಾದಂಬರಿ ಒಳಗಿನ ಪಾತ್ರವೇ ಕಥೆಯನ್ನು ನಿರೂಪಿಸುವ ತಂತ್ರ ಹೆಣೆದಿದ್ದು, ವಿವಿಧ ಕಾಲಟ್ಟದ ಬಹಳಷ್ಟು ಪಾತ್ರಗಳನ್ನು ಸೃಷ್ಟಿಸಿರುವುದು ಕೃತಿಯ ವಿಶೇಷತೆಯಾಗಿದೆ ಎಂದು ಸಾಹಿತಿ, ವಿಮರ್ಶಕ ಶರತ್ ಭಟ್ ಸೆರಾಜೆ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಲೆಕ್ಕಾಧಿಕಾರಿಗಳ ಸಂ ಹಾಗೂ ಸಮನ್ವಿತ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾದಂಬರಿಕಾರ, ಹಿರಿಯ ಪತ್ರಕರ್ತ ರಾಜಶೇಖರ ಜೋಗಿನ್ಮನೆ ಅವರ "ಕೇಳು ಧನಂಜಯ' ಕಾದಂಬರಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲ್ಲಿ ಬರುವ ಎಲ್ಲ ಪಾತ್ರಗಳನ್ನು ಒಂದೊಮ್ಮೆಗೆ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ, ಅವುಗಳ ಮೂಲಕ ಮನುಷ್ಯನ ಬದುಕು, ಜೀವನದ ಸತ್ಯ, ಮೌಲ್ಯ, ಸ್ವಾರಸ್ಯಕರ ವಿಷಯಗಳನ್ನು ಓದುಗರ ಮನಸ್ಸಿಗೆ ತಲುಪಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಒಂದು ಪ್ರಧಾನ ಕಥೆಯೊಳಗೆ ಹಲವು ಉಪಕಥೆಗಳನ್ನು ತರುವ ಭಾರತೀಯ ಕಥಾ ಸಂಪ್ರದಾಯವೂ ಇಲ್ಲಿ ಪಾಲಿಸಲ್ಪಟ್ಟಿದೆ. ಕೇವಲ ಪಾತ್ರಗಳು ಮಾತ್ರವಲ್ಲ, ಆ ಕಾಲಟ್ಟದ ಇತಿಹಾಸ, ಸಂಪ್ರದಾಯ ಹೀಗೆ ಕಾದಂಬರಿ ಒಳ ಹೊಕ್ಕರೆ ಸಂಪೂರ್ಣ ಮಾಹಿತಿ ಪ್ರವಾಸಿ ಮಾರ್ಗದರ್ಶಿ ರೀತಿ ಲಭ್ಯವಾಗಲಿದೆ ಎಂದರು.
ಪ್ರಯೋಗಶೀಲತೆ ಲೇಖಕನಿಗೆ ಅಗತ್ಯ: ವಿಮರ್ಶಕ ಕೆ.ಸತ್ಯನಾರಾಯಣ ಮಾತನಾಡಿ, ಕಥೆ ಮತ್ತು ಚರಿತ್ರೆಯ ಸಂಬಂಧವನ್ನು ಈ ಕೃತಿ ಚೆನ್ನಾಗಿ ಪ್ರತಿಬಿಂಬಿಸುತ್ತದೆ. ಈ ಕಾದಂಬರಿಯಲ್ಲಿರುವ ಪಾತ್ರಗಳ ಬದುಕಿನ ಏರಿಳಿತಗಳು ಓದುಗರ ಮನಸ್ಸನ್ನು ಬೇಗ ತಲುಪುತ್ತದೆ. ಇಂತಹ ಪ್ರಯೋಗಾತ್ಮಕ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅನಿವಾರ್ಯವಾಗಿದೆ. ಪ್ರಯೋಗಶೀಲತೆ ಓದುಗರಿಗಲ್ಲ, ಲೇಖಕನಿಗೆ ಅಗತ್ಯವಾಗಿದೆ. ಅಲ್ಲದೆ, ಪ್ರಯೋಗ ಯಾವತ್ತೂ ಒಂದೇ ಕೃತಿಗೆ ಸೀಮಿತವಾಗಿರುವುದಿಲ್ಲ. ಹಿರಿಯ ಸಾಹಿತಿಗಳೂ ನಿರಂತರ ಪ್ರಯೋಗಗಳ ಮೂಲಕವೇ ಹೊಸ ವರ್ಗಗಳನ್ನು ನಿರ್ಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೃತಿಯ ಲೇಖಕ ರಾಜಶೇಖರ ಜೋಗಿನ್ಮನೆ, ಕವಿ ಡಾ. ಚಿಂತಾಮಣಿ ಕೊಡ್ಲೆಕೆರೆ, ನಿವೃತ್ತ ಲೆಕ್ಕ ನಿಯಂತ್ರಣಾಧಿಕಾರಿ ಬಿ.ಸತ್ಯನಾರಾಯಣ, ಸಮನ್ವಿತ ಪ್ರಕಾಶನದ ರಾಧಾಕೃಷ್ಣ, ಆಯೋಜಕ ವಿಶ್ವೇಶ್ವರ ಗಾಯತ್ರೀ ಮತ್ತಿತರರಿದ್ದರು.
ಈ ಕಾದಂಬರಿ ಮೂಲಕ ಇತಿಹಾಸವನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡಲು ಸಾಧ್ಯ. ಆ ಕಾಲದ ನುಡಿಗಟ್ಟು, ಉಪಾಯಗಳು, ಜೀವನ ಶೈಲಿ ಹೀಗೆ ಎಲ್ಲವನ್ನೂ ಅರ್ಥೈಸಿಕೊಳ್ಳಬಹುದು. ಕಾದಂಬರಿಯ ಮೊದಲನೇ ಭಾಗದಲ್ಲಿ ಯಾವುದೇ ಸಂರ್ಷ ಇಲ್ಲ, ಕುತೂಹಲಗಳಿಲ್ಲ. ಸಂರ್ಷಗಳಲ್ಲಿ ಕಟ್ಟಬಹುದಾದ ಸನ್ನಿವೇಶಗಳಿದ್ದರೂ ಲೇಖಕರು ಅಲ್ಲಿ ಜಾಣ್ಮೆಯಿಂದ ಕಥೆಯನ್ನು ಹೆಣೆದಿದ್ದಾರೆ. ಜೋಗಿನ್ಮನೆ ಅವರು ಕಟ್ಟುಕಥೆಯೆಂದು ಮೊದಲೇ ಬರೆದಿದ್ದರೂ ಇದೊಂದು ಜೀವನ ಚರಿತ್ರೆಯಂತಿದೆ.