ಅಧಿಕಾರಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಭೆ
ಬೆಂಗಳೂರು: ಖಾದಿ ಕ್ರಾಂತಿಗೆ ಉತ್ತೇಜನ ನೀಡಲು ಮಹಾತ್ಮಗಾಂಧಿ ಭೇಟಿ ನೀಡಿದ್ದ ಮೈಸೂರು ಜಿಲ್ಲೆಯ ಬದನವಾಳು ಗ್ರಾಮ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.
ಈ ಕುರಿತು ರೂಪುರೇಷೆ ಸಿದ್ಧಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಮತ್ತು ನಂಜನಗೂಡು ಶಾಸಕ ದರ್ಶನ್ ಧೃವನಾರಾಯಣ್ ಮತ್ತು ಪ್ರವಾಸೋದ್ಯಮ ಇಲಾಖೆ, ಖಾದಿ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಗಾಂಧಿಯವರು 1927 ಹಾಗೂ 1932ರಲ್ಲಿ ಮೈಸೂರು ಜಿಲ್ಲೆಯ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಖಾದಿ ಕ್ರಾಂತಿಗೆ ಉತ್ತೇಜನ ನೀಡಿದ್ದರು. ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಕಾರಣವಾದ ಹಿನ್ನೆಲೆಯಲ್ಲಿ ಬದನವಾಳು ಗ್ರಾಮ ಐತಿಹಾಸಿಕ ಹೆಜ್ಜೆ ಗುರುತುಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಖಾದಿ ಮಹತ್ವ ಸಾರುವ ನಿಟ್ಟಿನಲ್ಲಿ ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
7 ಎಕರೆ ಪ್ರದೇಶದಲ್ಲಿ ಬದನವಾಳು ಗ್ರಾಮದಲ್ಲಿ ನಡೆದು ಬಂದ ಖಾದಿ ನೇಕಾಣಿಕೆಯ ಇತಿಹಾಸ, ಖಾದಿ ಉತ್ಪಾದನ ಘಟಕ, ತರಬೇತಿ ಕೇಂದ್ರ, ವಿನ್ಯಾಸಕೇಂದ್ರ, ಖಾದಿ ಪರೀಕ್ಷೆ, ದಾಸ್ತಾನು ಕೇಂದ್ರ, ಖಾದಿ ಸಂಶೋಧನ ಕೇಂದ್ರ ಮುಂತಾದ ಸೌಲಭ್ಯ ಒಳಗೊಳ್ಳುವಂತೆ ಅಭಿವೃದ್ಧಿಪಡಿಸಲಾಗುವುದು. ಈ ಕೇಂದ್ರದಲ್ಲಿ ಮೈಸೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ವಿವರ, ವಸ್ತು ಸಂಗ್ರಹಾಲಯ ಮುಂತಾದ ಪ್ರವಾಸಿ ಆಕರ್ಷಣೆಗಳು ಇರಲಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಖಾದಿ ಚಳವಳಿ ಹಲವು ಆಯಾಮದಲ್ಲಿ ಪರಿಣಾಮ ಬೀರುವ ದೃಷ್ಟಿಕೋನವನ್ನು ಹೊಂದಿದೆ. ಖಾದಿ ಗೃಹ ಕೈಗಾರಿಕೆಗೆ ಗಾಂಧಿಜೀ ಮಹತ್ವ ನೀಡಿದ್ದರು. ಖಾದಿಯು ಸ್ವಾವಲಂಬನೆ, ಸರಳತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿತ್ತು.
ಖಾದಿ ಧರಿಸುವುದರಿಂದ ಪ್ರತಿ ಭಾರತೀಯ ಪ್ರಜೆಯೂ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕೆ ತನ್ನ ಕೊಡುಗೆ ನೀಡಬಹುದು ಮತ್ತು ಹಳ್ಳಿಗಳಲ್ಲಿ ಉದ್ಯೋಗ ಒದಗಿಸುವ ಮೂಲಕ ಹಳ್ಳಿಗಳ ಬಲವರ್ಧನೆಗೆ ಕಾರಣ ಆಗಬಹುದು ಎಂದು ಗಾಂಧೀಜಿ ನಂಬಿದ್ದರು ಎಂಬ ಸಚಿವರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ. ತ್ರಿಲೋಕಚಂದ್ರ ಮತ್ತು ಖಾದಿ ಮಂಡಳಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.