- ಪೋಸ್ಟಲ್ ಇಲಾಖೆಯತ್ತ ಯುವಜನರ ಸೆಳೆಯಲು ಉಪಕ್ರಮ
- ವಿದ್ಯಾರ್ಥಿಗಳಿಗೆ ಕ್ಯೂಆರ್ ಕೋಡ್ ಆಧಾರಿತ ಸೇವಾ ಸೌಲಭ್ಯ
ಬೆಂಗಳೂರು: ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆಯು, ಯುವಜನರಿಗೆ ಡಿಜಿಟಲ್ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ವಿಶಿಷ್ಟ ಪೋಸ್ಟ್ ಆಫೀಸ್‌ಗಳತ್ತ ಸ್ಥಾಪಿಸುವತ್ತ ಚಿತ್ತ ಹರಿಸಿದೆ. ಸಂಪೂರ್ಣ ಶೈಕ್ಷಣಿಕ ಕ್ಯಾಂಪಸ್‌ಗೆ ಮೀಸಲಾದ ಈ ಪರಿಕಲ್ಪನೆಯು ‘ಜೆನ್ ಜೀ ಪೋಸ್ಟ್ ಆಫೀಸ್’ ಹೆಸರಿನಿಂದ ಗುರುತಿಸಲ್ಪಡಲಿದೆ.
ಇಂತಹ ವಿಶೇಷ ಹಾಗೂ ವಿನೂತನ ಅಂಚೆ ಕಚೇರಿ ಎಂಬ ಹಣೆಪಟ್ಟಿಯೊಂದಿಗೆ ಕರ್ನಾಟಕದ ಮೊದಲ ಕೇಂದ್ರ ಬೆಂಗಳೂರಿನಲ್ಲಿ ಬುಧವಾರ ಆಚಾರ್ಯ ತಾಂತ್ರಿಕ ಸಂಸ್ಥೆ ಆವರಣದಲ್ಲಿ ಲೋಕಾರ್ಪಣೆಗೊಂಡಿತು. ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ (ಸಿಪಿಎಂಜಿ) ಪ್ರಕಾಶ್ ಹಾಗೂ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ. ಭಾಗೀರಥಿ ಅವರು ಉದ್ಘಾಟಿಸಿದರು.
ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿರುವ ಹಾಗೂ ಕೇಂದ್ರದೊಳಗೆ ಗೊಡೆಬರಹ ಹಾಗೂ ಚಿತ್ರಕಲೆಯ ಚಿತ್ತಾರ ಬಿಡಿಸಿದ್ದು, ಜೆನ್ ಜೀ ಪೋಸ್ಟ್ ಆಫೀಸ್‌ಗೆ ಹೊಸ ಕಳೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಂಚೆ ಸಿಬ್ಬಂದಿ ಜತೆಗೆ ವಿದ್ಯಾರ್ಥಿಗಳು ಕೂಡ ಕಾರ್ಯನಿರ್ವಹಣೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗುವುದು ಎಂದು ಸಿಪಿಎಂಜಿ ತಿಳಿಸಿದ್ದಾರೆ.
ಏನಿದು ಜೆನ್ ಜೀ ಪೋಸ್ಟ್ ಆಫೀಸ್?:
ದೇಶಾದ್ಯಂತ ಹಲವು ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿ ಸಣ್ಣ ಪ್ರಮಾಣದ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇವು ಈಗಿನ ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡಿಲ್ಲ. ಇಂತಹ 46 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಅಂಚೆ ಇಲಾಖೆ ಮುಂದಾಗಿದೆ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳನ್ನೇ ಬಳಸಿಕೊಂಡು ಅವರಿಂದಲೇ ಕೇಂದ್ರಗಳ ವಿನ್ಯಾಸ, ಒಳಾಂಗಣ ಆಕಷರ್ಣೀಯಗೊಳಿಸುವುದು, ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸಲು ಸಹಭಾಗಿತ್ವ ಪಡೆಯಲಾಗುತ್ತದೆ. ಇದಕ್ಕೆ ಅಂಚೆ ಇಲಾಖೆ ಹಾಗೂ ಆಯಾ ಶಿಕ್ಷಣ ಸಂಸ್ಥೆಗಳು ಪರಸ್ಪರ ಒಡಂಬಡಿಕೆಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಕಳೆದ ನ.19ರಂದು ಐಐಟಿ ದೆಹಲಿಯಲ್ಲಿ ದೇಶದ ಮೊದಲ ಜೆನ್ ಜೀ ಪೋಸ್ಟ್ ಆಫೀಸ್ ಕಾರ್ಯಾರಂಭ ಮಾಡಿದೆ. ಕಳೆದ ವಾರ ಕೇರಳ ಹಾಗೂ ಆಂಧ್ರದಲ್ಲೂ ತಲಾ ಒಂದರಂತೆ ಹೊಸ ಕೇಂದ್ರವು ಲೋಕಾರ್ಪಣೆ ಕಂಡಿದೆ. ಈ ತಿಂಗಳಾಂತ್ಯದೊಳಗೆ 46 ಕ್ಯಾಂಪಸ್ ಪೋಸ್ಟಲ್ ಕೇಂದ್ರಗಳು ಜೆನ್ ಜೀ ಮಾದರಿಯಲ್ಲಿ ಕಾರ್ಯಾಚರಣೆಗೊಳಿಸಲು ಇಲಾಖೆ ಗುರಿ ಹೊಂದಿದೆ.
ಸ್ಪೀಡ್ ಪೋಸ್ಟ್ ಸೇವೆಯಲ್ಲಿ ರಿಯಾಯಿತಿ:
ಹೊಸದಾಗಿ ಮೇಲ್ದರ್ಜೆಗೇರಿಸಿದ ಜೆನ್ ಜೀ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉಳಿತಾಯ ಖಾತೆ ಸೇರಿ ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸಲಾಗುತ್ತದೆ. ಡಿಜಿಟಲ್ ಸೇವೆ ಪಡೆದುಕೊಳ್ಳಲು ಒತ್ತು ನೀಡಲಾಗಿದೆ. ಕ್ಯೂಆರ್ ಕೋಡ್ ಆಧರಿಸಿ ಸೇವೆಗಳನ್ನು ಕಡಮೆ ಅವಧಿಯಲ್ಲಿ ಪಡೆಯುವ ಸೌಲಭ್ಯ ಒದಗಿಸಲಾಗುತ್ತದೆ. ಸ್ಪೀಡ್ ಪೋಸ್ಟ್ ಸೇವೆಯಲ್ಲಿ ರಿಯಾಯಿತಿ (ವಿದ್ಯಾರ್ಥಿಗಳಿಗೆ ಮಾತ್ರ), ಉಚಿತ ವೈಫೈ ಸೌಲಭ್ಯವೂ ಸಿಗಲಿದೆ. ಕೆಫೆ ಮಾದರಿಯಲ್ಲಿ ಕಾಫಿ ಹೀರುತ್ತಲೇ ಕೆಲ ಕಾಲ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಂದ ಕಲಾ ಚಿತ್ತಾರ:
ಜೆನ್ ಜೀ ಪೋಸ್ಟ್ ಆಫೀಸ್‌ಗಳ ವಿನ್ಯಾಸವನ್ನು ಆಯಾ ಕ್ಯಾಂಪಸ್‌ನ ವಿಧ್ಯಾರ್ಥಿಗಳೇ ರೂಪಿಸುವ ಅವಕಾಶ ಪಡೆದಿದ್ದಾರೆ. ಸ್ಥಳೀಯ ಮಾದರಿಯ ಚಿತ್ರಕಲೆ, ಕ್ಯಾನ್ವಾಸ್ ಮೇಲೆ ಸಂದೇಶಗಳ ಬರಹ, ಅಂಚೆ ಇಲಾಖೆ ಸಂಬಂಧಿತ ಮೈಲಿಗಲ್ಲಿನ ವಿವರಗಳು ಹಾಗೂ ಅಲಂಕಾರ ಮಾಡಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತದೆ. ‘ಮೈ ಸ್ಟಾಂಪ್’, ಪೋಸ್ಟಲ್ ಕಾರ್ಡ್ ಸಹಿತ ಪೋಸ್ಟ್‌ಲ್ ಸೇವೆಗಳಲ್ಲಿ ವಿದ್ಯಾರ್ಥಿಗಳು ಇಚ್ಛಿಸುವ ರೀತಿ ಕಲ್ಪಿಸಲಾಗುತ್ತದೆ.
ಜೆನ್ ಜೀ ಪೋಸ್ಟ್ ಆಫೀಸ್ ವಿಶೇಷತೆ ಏನು?:
* ವಿದ್ಯಾರ್ಥಿಗಳಿಗೆ ಕ್ಯೂಆರ್ ಕೋಡ್ ಆಧಾರಿತ ತ್ವರಿತ ಸೇವೆ
* ಸ್ವಯಂ ಬುಕಿಂಗ್ ಕಿಯಾಸ್ಕ್, ಉಚಿತ ವೈಫೈ ಸೌಲಭ್ಯ
* ಮೊಬೈಲ್, ಲ್ಯಾಪ್ಟಾಪ್ ಚಾರ್ಜಿಂಗ್ ಪಾಯಿಂಟ್ ಲಭ್ಯ
* ಪುಸ್ತಕ, ನಿಯತಕಾಲಿಕೆ ಓದಲು, ಕಾಫಿ ವೆಂಡಿಂಗ್ ಮಷೀನ್ ಸೌಲಭ್ಯ