ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ಕೇಂದ್ರ ಸಚಿವ ಎಚ್​ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ 
ಬೆಂಗಳೂರು

ವಿಧಾನಪರಿಷತ್ ಚುನಾವಣೆಯಲ್ಲಿ NDA ಕ್ಲೀನನ್​ ಸ್ವೀಪ್‌: ಸಿಎಂ ಡಿಕೆಶಿ, HDK, BSY ಸೇರಿದಂತೆ ಪ್ರಮುಖ ನಾಯಕರ ಪ್ರತಿಕ್ರಿಯೆ ಇಲ್ಲಿದೆ...Karnataka MLC Elections

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ ( Karnataka MLC Elections ) ಹೊರಬಂದಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆಘಾತ ಎದುರಾಗಿದೆ. ಎನ್‌ಡಿಎ (ಬಿಜೆಪಿ-ಜೆಡಿಎಸ್) ಮೈತ್ರಿಕೂಟವು ಸ್ಪರ್ಧಿಸಿದ್ದ ನಾಲ್ಕೂ ಕ್ಷೇತ್ರಗಳಲ್ಲೂ (ಆಗ್ನೇಯ, ದಕ್ಷಿಣ ಪದವೀಧರ ಹಾಗೂ ನೈರುತ್ಯ, ಬೆಂಗಳೂರು ಶಿಕ್ಷಕರ ಕ್ಷೇತ್ರ) ಗೆಲುವು ಸಾಧಿಸುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಮತದಾರರು ಬ್ಯಾಲೆಟ್ ಪೇಪರ್ ಮೂಲಕವೇ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಈ ಸೋಲು-ಗೆಲುವಿನ ಹೈಡ್ರಾಮಾದ ಕುರಿತಂತೆ ಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಪ್ರತಿಕ್ರಿಯಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆಂದ ಸಿಎಂ ಡಿಕೆಶಿ

ಚುನಾವಣಾ ಫಲಿತಾಂಶದ ಕುರಿತು ಇಂದು ಸದಾಶಿವನಗರದ ನಿವಾಸದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರ ತೀರ್ಪನ್ನು ವಿನಮ್ರತೆಯಿಂದ ಗೌರವದಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ನಮ್ಮ ಬಳಿ ಒಂದು ಸೀಟ್ ಇತ್ತು, ಗೆಲುವಿನ ನಿರೀಕ್ಷೆಯೂ ಇತ್ತು ಆದರೆ ಜನರು ಬೇರೆ ಸಂದೇಶ ಕೊಟ್ಟಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಈ ಫಲಿತಾಂಶದ ಕುರಿತು ಕೂಲಂಕಷವಾಗಿ ಅಧ್ಯಯನ ಮಾಡಿ, ಎಲ್ಲಿ ಲೋಪವಾಗಿದೆ ಎಂಬುದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ವಿಪಕ್ಷಗಳು ಇದನ್ನು ಮುಂದಿನ ಚುನಾವಣೆಗೆ ಮುನ್ಸೂಚನೆ ಎನ್ನುತ್ತಿರುವ ಬಗ್ಗೆ ಮಾತನಾಡಿ, ಚನ್ನಪಟ್ಟಣ ಮತ್ತು ಶಿಗ್ಗಾವು ಉಪಚುನಾವಣೆಯ ಫಲಿತಾಂಶ ಕೂಡ ಮುನ್ಸೂಚನೆನಾ? ಅದರ ಬಗ್ಗೆಯೂ ವಿಪಕ್ಷಗಳು ಮಾತಾಡಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನರಕಾಸುರನ ಸಂಹಾರ ಶುರುವಾಗಿದೆ ಎಂದ ಎಚ್​ಡಿಕೆ

ಮತ್ತೊಂದೆಡೆ, ಎನ್‌ಡಿಎ ಅಭ್ಯರ್ಥಿಗಳ ಭರ್ಜರಿ ಗೆಲುವಿನ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, "ಬಲಿಪಾಡ್ಯಮಿಯಂದು ನರಕಾಸುರನ ಸಂಹಾರ ಶುರುವಾಗಿದೆ" ಎಂದು ವ್ಯಂಗ್ಯವಾಡಿದ್ದಾರೆ. ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಪರವಾಗಿ ಸ್ಪಷ್ಟ ಜನಾಭಿಪ್ರಾಯ ವ್ಯಕ್ತವಾಗಿದ್ದು, ನಾಲ್ಕೂ ಮಂದಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಇದು ಜನವಿರೋಧಿ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ. 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಅಹಂಕಾರದ ಘೋಷಣೆಗಳಿಗೆ ಜನರು ಈ ಚುನಾವಣೆಯ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಕೊಡುಗೆ, ದೇವೇಗೌಡರ ಮೇಲಿನ ಒಲವು ಮತ್ತು ಮುಖಂಡರ ಸಮನ್ವಯತೆಯಿಂದ ಈ ಜಯ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್​.ಅಶೋಕ್​ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋದರೆ ಗೆಲುವು ಖಚಿತ ಅಂದ್ರ ಅಶೋಕ್​

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಆರ್. ಅಶೋಕ್, 121 ಎಂಎಲ್‌ಎ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಮೊಳಗಿದೆ ಎಂದಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋದರೆ 2028ರ ವಿಧಾನಸಭೆ ಚುನಾವಣೆಯಲ್ಲಿ 160ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಚಿವರ ದುರಂಕಾರ ಹಾಗೂ ಸ್ಟಿಂಗ್ ಆಪರೇಷನ್ ಹಿನ್ನೆಲೆಯೇ ಈ ಸೋಲಿಗೆ ಪ್ರಮುಖ ಕಾರಣ ಎಂದ ಅವರು, ಡಿಕೆ ಶಿವಕುಮಾರ್ ಅವರ ರೈಟ್ ಹ್ಯಾಂಡ್ ಎಂದೇ ಬಿಂಬಿತರಾಗಿದ್ದ 5 ಬಾರಿ ಗೆದ್ದಿದ್ದ ಪುಟ್ಟಣ್ಣ ಅವರನ್ನು ಸೋಲಿಸಿರುವುದು ಡಿಕೆಶಿಗೆ ಸಿಕ್ಕ ಮೊದಲ ಸೋಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿಯೂ ಈ ಒಗ್ಗಟ್ಟು ಮುಂದುವರಿಯಲಿದೆ ಎಂದಿದ್ದಾರೆ.

ಬ್ಯಾಲೆಟ್‌ ಪೇಪರ್​ನಲ್ಲೂ ತಿರಸ್ಕರಿಸಿದ್ದಾರೆ ಅಂದ್ರು ಬಿಎಸ್​ವೈ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಇದು ಇವಿಎಂ ಮೂಲಕವಲ್ಲ, ಸಂಪೂರ್ಣವಾಗಿ ಬ್ಯಾಲೆಟ್ ಪೇಪರ್‌ನಲ್ಲಿ ನಡೆದ ಚುನಾವಣೆ. ಕಾಂಗ್ರೆಸ್​ನವರು ಇಷ್ಟು ದಿನ ಮತ ಕಳವು, ಇವಿಎಂ ದೋಷ ಎಂದು ಆರೋಪಿಸುತ್ತಿದ್ದರು. ಆದರೆ, ಈಗ ಬ್ಯಾಲೆಟ್‌ನಲ್ಲೇ ಚುನಾವಣೆ ನಡೆದರೂ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂದರು. ಆಡಳಿತರೂಢ ಸರ್ಕಾರದ ವಿರುದ್ಧ ಜನರ ಆಕ್ರೋಶಕ್ಕೆ ಈ ಫಲಿತಾಂಶವೇ ಕೈಗನ್ನಡಿಯಾಗಿದೆ. ಕೆ.ಎಂ ಸುರೇಶ್, ಸಂಕನೂರ್, ಶಶಿಲ್ ನಮೋಶಿ, ಎ.ಪಿ. ರಂಗನಾಥ್ ಅವರ ಗೆಲುವು ಎನ್‌ಡಿಎ ಮೈತ್ರಿಕೂಟದ ಬಲವನ್ನು ತೋರಿಸುತ್ತದೆ ಎಂದು ತಿಳಿಸಿ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸೋಲು-ಗೆಲುವು ಸಹಜ ಎಂದ ಹರಿಪ್ರಸಾದ್​

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಹಜ. ಈ ಸೋಲನ್ನು ನಾವು ವಿನಮ್ರತೆಯಿಂದ ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ. ಈ ಕ್ಷೇತ್ರಗಳಲ್ಲಿ ಈ ಹಿಂದೆ ಕೂಡ ನಮ್ಮ ಬಳಿ ಸ್ಥಾನಗಳಿರಲಿಲ್ಲ, ಆದರೂ ಕಾರ್ಯಕರ್ತರು ಉತ್ತಮವಾಗಿ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಈ ಕ್ಷೇತ್ರಗಳಲ್ಲಿ ಮತ್ತಷ್ಟು ಗಟ್ಟಿಗೊಳಿಸಲು ಬೇಕಾದ ತಳಮಟ್ಟದ ಚರ್ಚೆಗಳನ್ನು ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಪದವೀಧರರು ಹಾಗೂ ಶಿಕ್ಷಕರ ನಿರಂತರ ಸೇವೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಏಳು-ಬೀಳುಗಳು ಸಾಮಾನ್ಯ ಎಂದ ಚಲುವರಾಯಸ್ವಾಮಿ

ಸಚಿವ ಚಲುವರಾಯಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಏಳು-ಬೀಳುಗಳು ಸಾಮಾನ್ಯ, ಈ ಸೋಲನ್ನು ಮುಖಭಂಗ ಎಂದು ಕರೆಯುವುದಕ್ಕಿಂತ ಅತಿ ಆತ್ಮವಿಶ್ವಾಸವೇ ಹಿನ್ನಡೆಗೆ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಪುಟ್ಟಣ್ಣ ಅವರು ನಿರಂತರವಾಗಿ ಗೆಲ್ಲುತ್ತಾ ಬಂದಿದ್ದರಿಂದ ಎದುರಾಳಿ ಅಭ್ಯರ್ಥಿಯನ್ನು ಲಘುವಾಗಿ ಪರಿಗಣಿಸಲಾಗಿತ್ತು. ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆದರೆ ಸೋಲಬಾರದು ಎಂದೇನಿಲ್ಲ, ರಾಷ್ಟ್ರ ರಾಜಕಾರಣದ ಕೆಲವು ವ್ಯತ್ಯಾಸಗಳು ಹಾಗೂ ನಮ್ಮಲ್ಲಿದ್ದ ಅತಿ ಆತ್ಮವಿಶ್ವಾಸವೇ ಈ ಫಲಿತಾಂಶಕ್ಕೆ ಕಾರಣವಾಯಿತು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಕಾರಣರಲ್ಲ ಎಂದ ಸತೀಶ್​ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಈ ಸೋಲಿಗೆ ನಾಯಕತ್ವ ಬದಲಾವಣೆ ಅಥವಾ ಮುಖ್ಯಮಂತ್ರಿಗಳು ಕಾರಣರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆಯೂ ಎಸ್.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಇಂತಹ ಚುನಾವಣೆಯಲ್ಲಿ ಸೋಲುಂಡಿದ್ದೇವೆ ಎಂದರು. ನಾವು ಈವರೆಗೆ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಹರಿಸಿರಲಿಲ್ಲ, ಈ ಬಾರಿ ಮಾತ್ರ ತುಸು ಗಂಭೀರವಾಗಿ ಪ್ರಯತ್ನಿಸಿದ್ದೆವು ಎಂದ ಸತೀಶ್​, ಬಾಗಲಕೋಟೆ, ದಾವಣಗೆರೆ ಉಪಚುನಾವಣೆಯಲ್ಲಿ ಎನ್‌ಡಿಎ ಸೋತಿರಲಿಲ್ಲವೇ? ಹಾಗಂದ ಮಾತ್ರಕ್ಕೆ ಇದು ಮುಂದಿನ ಚುನಾವಣೆಗೆ ಸಂಪೂರ್ಣ ದಿಕ್ಸೂಚಿ ಆಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೀಮಿತ ಮತದಾರರ ಚುನಾವಣೆ ಎಂದು ಪ್ರಿಯಾಂಕ್​ ಖರ್ಗೆ

ಇವಿಎಂ ಹಾಗೂ ಬ್ಯಾಲೆಟ್ ಪೇಪರ್ ವಿವಾದದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬ್ಯಾಲೆಟ್ ವೋಟಿಂಗ್ ಎನ್ನುವುದು ಸಾರ್ವಜನಿಕರ ವೋಟಿಂಗ್ ಅಲ್ಲ, ಇದು ಕೇವಲ ಸೀಮಿತ ಮತದಾರರ ಚುನಾವಣೆ ಎಂದಿದ್ದಾರೆ. ಇವಿಎಂ ಸರಿ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ಸರಿಪಡಿಸೋಣ ಎಂದು ನಾವೂ ಹೇಳುತ್ತಿದ್ದೇವೆ. ಬಿಜೆಪಿ ನಾಯಕರೂ ಕೂಡ ಹಿಂದೆ ಇವಿಎಂ ಬಗ್ಗೆ ಪ್ರಶ್ನೆ ಮಾಡಿದ್ದರು. ಎನ್​ಡಿಎ ನಾಯಕರಿಗೆ ಬ್ಯಾಲೆಟ್ ಮೇಲೆ ಅಷ್ಟು ವಿಶ್ವಾಸವಿದ್ದರೆ, ಧಮ್ ಇದ್ದರೆ ಮುಂದಿನ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಥವಾ ವಿಧಾನಸಭೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್‌ನಲ್ಲೇ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ಜನ ತಕ್ಕ ಪಾಠ ಕಲಿಸಿದ್ದಾರೆ

ಬಿಜೆಪಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಲ್ಕಕ್ಕೆ ನಾಲ್ಕು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್‌ನವರು ಎಲ್ಲೆಡೆ ವೋಟ್ ಚೋರಿ ಎನ್ನುತ್ತಾರೆ, ಆದರೆ ಇಲ್ಲಿ ಜನರೇ ಕಳ್ಳರಿಗೆ ವೋಟ್ ಹಾಕುವುದನ್ನು ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಏನೆಲ್ಲಾ ಆಟವಾಡಿದರೂ ಪ್ರಬುದ್ಧ ಮತದಾರರು ದಾರಿ ತಪ್ಪಿಲ್ಲ. ದಲಿತ ಸಮುದಾಯವೂ ಈ ಬಾರಿ ಎನ್‌ಡಿಎ ಪರವಾಗಿ ದೊಡ್ಡ ಪ್ರಮಾಣದಲ್ಲಿ ನಿಂತಿದೆ ಎಂದು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಸರ್ಕಾರ

ಗೆಲುವು ಸಾಧಿಸಿದ ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ವಿಜೇತ ಅಭ್ಯರ್ಥಿ ಎ.ಪಿ. ರಂಗನಾಥ್ ಮಾತನಾಡಿ, ಎರಡು ಬಾರಿ ಸೋತಿದ್ದ ನನಗೆ ಮೂರನೇ ಬಾರಿ ಮತದಾರರು ಆಶೀರ್ವಾದ ಮಾಡಿದ್ದಾರೆ. ಇದು 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದರು. ರಾಜ್ಯದಲ್ಲಿ ಇದು ಭ್ರಷ್ಟಾಚಾರದ ಮತ್ತು ರಿಯಲ್ ಎಸ್ಟೇಟ್ ಸರ್ಕಾರವಾಗಿದ್ದು, ಇದನ್ನು ಸರಿ ದಾರಿಗೆ ತರಲು ಶಿಕ್ಷಕರು ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದಂತೆ ಕೂಡಲೇ ಒಪಿಎಸ್ (OPS) ಜಾರಿಗೆ ತರಬೇಕು ಎಂದು ಆಗ್ರಹಿಸಿ, ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ತಾನು 24 ಗಂಟೆಯೂ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಸಂಘಟನೆಯ ಶಕ್ತಿಯಿಂದ ಈ ಗೆಲುವು

ಮತ್ತೊಬ್ಬ ವಿಜೇತ ಅಭ್ಯರ್ಥಿ ಕೆ.ಎಂ. ಸುರೇಶ್ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರ ಮೊದಲಿನಿಂದಲೂ ಎನ್‌ಡಿಎ ಭದ್ರಕೋಟೆಯಾಗಿದೆ. ಹಿರಿಯರ ಮಾರ್ಗದರ್ಶನ ಹಾಗೂ ಸಂಘಟನೆಯ ಶಕ್ತಿಯಿಂದ ಈ ಗೆಲುವು ಸಾಧ್ಯವಾಗಿದೆ ಎಂದಿದ್ದಾರೆ. ದೇಶದ ಜನತೆ ಪ್ರಧಾನಿ ಮೋದಿ ಅವರ ಪರವಾಗಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. 2028ರ ಚುನಾವಣೆಗೆ ಇದು ದಿಕ್ಸೂಚಿಯಾಗಲಿದ್ದು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.