ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನದ ಅಂಗವಾಗಿ ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಿದ್ದ ವಿಪತ್ತಿನಿಂದ ಉಂಟಾಗಬಹುದಾದ ಅಪಾಯ ತಗ್ಗಿಸುವ ರಾಜ್ಯ ವೇದಿಕೆಯ ಮೊದಲ ಸಭೆ 
ಬೆಂಗಳೂರು

ವಿಪತ್ತು ನಿರ್ವಹಣೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿ

ವಿಪತ್ತು ಸಂಭವಿಸಿದ ಬಳಿಕ ಪರಿಹಾರ ನೀಡುವುದಕ್ಕಿಂತ, ಮುಂಜಾಗ್ರತೆಯಾಗಿ ಅಪಾಯ ತಡೆಗಟ್ಟಲು ಆದ್ಯತೆ ನೀಡಬೇಕೆಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಅಭಿಪ್ರಾಯ

ಬೆಂಗಳೂರು : ಪ್ರಕೃತಿ ವಿಕೋಪಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ, ಅವುಗಳಿಂದ ಉಂಟಾಗುವ ಕಷ್ಟನಷ್ಟಗಳನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಮುನ್ನೆಚ್ಚರಿಕೆ, ವೈಜ್ಞಾನಿಕ ಯೋಜನೆ, ಜನಜಾಗೃತಿ ಅತ್ಯಗತ್ಯ. ಈ ನಿಟ್ಟಿನಲ್ಲಿ 2030ರ ವೇಳೆಗೆ ಕರ್ನಾಟಕವನ್ನು ವಿಪತ್ತಿನಿಂದ ಸಂಭವಿಸಬಹುದಾದ ಅಪಾಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ರಾಜ್ಯವನ್ನಾಗಿಸುವುದು ನಮ್ಮ ಗುರಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನದ ಅಂಗವಾಗಿ ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಿದ್ದ ವಿಪತ್ತಿನಿಂದ ಉಂಟಾಗಬಹುದಾದ ಅಪಾಯ ತಗ್ಗಿಸುವ ರಾಜ್ಯ ವೇದಿಕೆಯ ಮೊದಲ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಿ. ಪರಮೇಶ್ವರ, ವಿಪತ್ತು ಸಂಭವಿಸಿದ ನಂತರ ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ವಿತರಣೆಗೆ ಸೀಮಿತವಾಗದೆ. ವಿಪತ್ತು ಸಂಭವಿಸುವ ಮೊದಲೇ ಅಪಾಯಗಳನ್ನು ಗುರುತಿಸಿ, ಜನರ ಜೀವ ಹಾಗೂ ಜೀವನೋಪಾಯವನ್ನು ರಕ್ಷಿಸುವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.

ರಾಜ್ಯದ ಅಭಿವೃದ್ಧಿಯನ್ನು ಕೇವಲ ಆರ್ಥಿಕ ಪ್ರಗತಿ, ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ನಿರ್ಮಾಣದಿಂದ ಅಳೆಯಬಾರದು. ಜನರ ಸುರಕ್ಷತೆ ಮತ್ತು ಜೀವನೋಪಾಯದ ರಕ್ಷಣೆಯೂ ಅಭಿವೃದ್ಧಿಯ ಪ್ರಮುಖ ಮಾನದಂಡವಾಗಬೇಕು. ಒಂದು ಪ್ರವಾಹ, ಬರ ಅಥವಾ ಭೂಕುಸಿತವು ಕುಟುಂಬವೊಂದರ ಹಲವು ವರ್ಷಗಳ ಪರಿಶ್ರಮವನ್ನು ಕ್ಷಣಾರ್ಧದಲ್ಲಿ ನಾಶಪಡಿಸಬಹುದು. ಆದ್ದರಿಂದ ವಿಪತ್ತು ನಿರ್ವಹಣೆಯಲ್ಲಿ ಪರಿಹಾರಕ್ಕಿಂತ ಮುನ್ನೆಚ್ಚರಿಕೆ ಮತ್ತು ಪೂರ್ವ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದರು.

ಕರ್ನಾಟಕದಲ್ಲಿ ಒಂದೆಡೆ ಬರಗಾಲ, ಮತ್ತೊಂದೆಡೆ ಅತಿವೃಷ್ಟಿ, ಪ್ರವಾಹ, ಭೂಕುಸಿತ ಹಾಗೂ ಕರಾವಳಿ ಪ್ರದೇಶಗಳ ನೈಸರ್ಗಿಕ ಅಪಾಯಗಳು ಎದುರಾಗುತ್ತಿವೆ. ನಗರೀಕರಣ, ನೈಸರ್ಗಿಕ ನೀರು ಹರಿವಿನ ಮಾರ್ಗಗಳ ಮೇಲಿನ ಒತ್ತಡ ಮತ್ತು ಹವಾಮಾನ ಬದಲಾವಣೆ ಈ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಹೀಗಾಗಿ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ರೂಪಿಸುವಾಗಲೇ ಭವಿಷ್ಯದ ವಿಪತ್ತು ಅಪಾಯಗಳ ಮೌಲ್ಯಮಾಪನ ನಡೆಸುವ ವ್ಯವಸ್ಥೆ ಬರಬೇಕು ಎಂದರು.

ವೈಜ್ಞಾನಿಕ ತಂತ್ರಜ್ಞಾನಕ್ಕೆ ಒತ್ತು :

ವಿಪತ್ತು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸಲು ಕೃತಕ ಬುದ್ಧಿಮತ್ತೆ (ಎಐ), ಉಪಗ್ರಹ ಚಿತ್ರಣ, ಭೌಗೋಳಿಕ ಮಾಹಿತಿ ಮತ್ತು ವೈಜ್ಞಾನಿಕ ಮುನ್ಸೂಚನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವೂ ಸೇರಿದಂತೆ ವೈಜ್ಞಾನಿಕ ಸಂಸ್ಥೆಗಳ ಮಾಹಿತಿಯನ್ನು ಜಿಲ್ಲಾಡಳಿತ, ಗ್ರಾಮ ಪಂಚಾಯಿತಿಗಳು ಮತ್ತು ಅಪಾಯಕ್ಕೆ ಒಳಗಾಗುವ ಪ್ರತಿಯೊಂದು ಕುಟುಂಬಕ್ಕೂ ಸಕಾಲದಲ್ಲಿ ತಲುಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸೂಚಿಸಿದರು.

ಕೇವಲ ವಿಪತ್ತಿನ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಆ ಎಚ್ಚರಿಕೆಯ ಆಧಾರದಲ್ಲಿ ಯಾವ ಪ್ರದೇಶದಲ್ಲಿ, ಯಾವ ಸಮಯದಲ್ಲಿ, ಯಾರ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸುವ ವ್ಯವಸ್ಥೆ ಅಗತ್ಯ ಎಂದು ಹೇಳಿದರು.

ಗ್ರಾಮಮಟ್ಟದಿಂದಲೇ ವಿಪತ್ತು ನಿರ್ವಹಣೆಗೆ ಸಿದ್ಧತೆ :

ಪ್ರತಿಯೊಂದು ಜಿಲ್ಲೆಯಲ್ಲೂ ಪ್ರಾಕೃತಿಕ ವಿಕೋಪಗಳಿಂದ ಅಪಾಯಕ್ಕೆ ಒಳಗಾಗುವ ಪ್ರದೇಶಗಳನ್ನು, ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳನ್ನು, ಸುರಕ್ಷಿತ ಆಶ್ರಯ ತಾಣಗಳನ್ನು ಮತ್ತು ಸ್ಥಳಾಂತರ ಮಾರ್ಗಗಳನ್ನು ಮೊದಲೇ ಗುರುತಿಸಬೇಕು. ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾಡಳಿತಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಸಾರಿಗೆ ಮತ್ತು ಸಂಪರ್ಕ ಸೇವೆಗಳು ವಿಪತ್ತಿನ ಸಂದರ್ಭದಲ್ಲಿಯೂ ಮುಂದುವರಿಯುವಂತೆ ಯೋಜನೆ ರೂಪಿಸಬೇಕು ಎಂದರು.

2030ರ ಮಾರ್ಗಸೂಚಿ ಪರಿಣಾಮಕಾರಿಯಾಗಿ ಜಾರಿಯಾಗಲಿ: ಕರ್ನಾಟಕ ರಾಜ್ಯ ವಿಪತ್ತು ಅಪಾಯ ತಗ್ಗಿಸುವಿಕೆ ಮಾರ್ಗಸೂಚಿ 20252030 ಅನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಇಲಾಖಾವಾರು ಜವಾಬ್ದಾರಿಗಳನ್ನು ನಿಗದಿಪಡಿಸಿ, ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ವಾರ್ಷಿಕ ಪ್ರಗತಿ ವರದಿ ಮತ್ತು ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ಸಣ್ಣ ವ್ಯಾಪಾರಿಗಳು ಮತ್ತು ದಿನಗೂಲಿ ಕಾರ್ಮಿಕರ ಜೀವನೋಪಾಯದ ರಕ್ಷಣೆಗೆ ವಿಶೇಷ ಗಮನ ನೀಡಬೇಕು. ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಮುನ್ನೆಚ್ಚರಿಕೆ ಮತ್ತು ರಕ್ಷಣಾ ವ್ಯವಸ್ಥೆಗಳು ಸುಲಭವಾಗಿ ಲಭ್ಯವಾಗಬೇಕು.
ಡಾ.ಜಿ.ಪರಮೇಶ್ವರ- ಉಪಮುಖ್ಯಮಂತ್ರಿ